ನಿವೇಶನ ನೀಡಲು ನೇಕಾರರ ಮನವಿ

7

ನಿವೇಶನ ನೀಡಲು ನೇಕಾರರ ಮನವಿ

Published:
Updated:

ದೇವನಹಳ್ಳಿ: ಮೂಲ ಕಸಬುಗಳಲ್ಲಿ ಒಂದಾದ ಮೂಲ ನೇಕಾರರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ದೇವನಹಳ್ಳಿ ಕೈ ಮಗ್ಗ ಮತ್ತು ವಿದ್ಯುತ್ ಚಾಲಿತ ಕೈಮಗ್ಗ ನೇಕಾರರ ಸಂಘ ಮತ್ತು ಕಾರ್ಮಿಕರ ಸಂಘವು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.ವಿದ್ಯುತ್ ಸಮಸ್ಯೆಯ ನಡುವೆಯೂ ತಲೆತಲಾಂತರದಿಂದ ಬಂದಿರುವ ನೇಯ್ಗೆ ಕಸುಬನ್ನು ಉಳಿಸುವ ಉದ್ದೇಶದಿಂದ ವೃತ್ತಿಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಆದರೆ ಈವರೆಗೂ ಮೂಲ ಕಸಬುದಾರರಿಗೆ ತಲೆಯ ಮೇಲೊಂದು ಸೂರಿಲ್ಲ. ಬಾಡಿಗೆ ಮನೆಗಳಲ್ಲಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಬಿಪಿಎಲ್ ಕಾರ್ಡು ಮತ್ತು ನಿವೇಶನ ನೀಡಿ ಬವಣೆ ತಪ್ಪಿಸಬೇಕು ಎಂದು ಹಿಂದುಳಿದ ವರ್ಗಗಳ ನೇಕಾರ ಸಮಾಜ ಸಂಘದ ಅಧ್ಯಕ್ಷ ಜಿ.ರಂಗಸ್ವಾಮಿ ಮತ್ತು ಡಿ.ದೇವರಾಜು ಅರಸು ಮನವಿ ಮಾಡಿದರು.ಸಂಘದ ಅಂಬರೀಷ್ ಮಾತನಾಡಿ, 2006ರಲ್ಲಿ ನೇಕಾರರಿಗೆ ನಿವೇಶನ ನೀಡುವಂತೆ 120 ಅರ್ಜಿಗಳನ್ನು ಪುರಸಭೆಗೆ ಸಲ್ಲಿಸಲಾಗಿತ್ತು. 2007ರಲ್ಲಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೂ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೂ ನೇಕಾರರಿಗೆ ನಿವೇಶನ ದೊರೆತಿಲ್ಲ. ವಿಮಾನ ನಿಲ್ದಾಣಕ್ಕಾಗಿ ಸಾವಿರಾರು ಎಕರೆ ಭೂಮಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಇದರಿಂದ ಹಣವಂತರಿಗೆ ಮತ್ತು ಇತರೆ ರಾಷ್ಟ್ರದವರಿಗೆ ಪ್ರಯೋಜನವಾಯಿತೇ ಹೊರತು ಇಲ್ಲೇ ಹುಟ್ಟಿ ಬೆಳೆದ ನೇಕಾರರಿಗೆ ಮನೆ ಇಲ್ಲದೆ ಬದುಕು ದುಸ್ತರವಾಗಿದೆ.ಸರ್ಕಾರ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದರು. ಕಾರ ಕೂಲಿಕಾರ್ಮಿಕ ಎಂ.ಶಿವಪ್ಪ ಮಾತನಾಡಿ, ತಾಲ್ಲೂಕಿನ ಬೊಮ್ಮವಾರ ಸರ್ವೇ ನಂ.36ರಲ್ಲಿ ಹಿಂದಿನ ತಿಂಗಳು ತಾಲ್ಲೂಕು ಭೂಮಾಪನ ಇಲಾಖೆ ಅಧಿಕಾರಿಗಳು 60 ಎಕರೆ ಭೂಮಿಯನ್ನು ಅಳತೆ ಮಾಡಿ ನಿವೇಶನ ನೀಡಲು ಮುಂದಾಗಿದೆ. ಮೂಲ ನೇಕಾರರಿಗೆ ಮಾಡಿರುವ ಅನ್ಯಾಯ ಎಂದರು.ಮೂಲ ನೇಕಾರರ ಸಮೀಕ್ಷೆ ನಡೆಸಿ ಅವರ ಪ್ರಮಾಣಕ್ಕನುಸಾರ ಭೂಮಿ ಹಂಚಿಕೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry