ಬುಧವಾರ, ಜೂನ್ 16, 2021
21 °C

ನಿವೇಶನ ನೀಡುವುದಾಗಿ ವಂಚನೆ- ಒಂದು ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿವೇಶನ ನೀಡುವುದಾಗಿ ನಂಬಿಸಿ ವಂಚನೆ ಮಾಡಿದ `ಕ್ಯಾಪಿಟಲ್ ಲ್ಯಾಂಡ್ ಅಸೆಟ್ಸ್ ಇಂಡಿಯಾ ಲಿಮಿಟೆಡ್~ಗೆ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ದಂಡದ ಹಣವನ್ನು ಬಿ. ಸುಚಿತ್ರಾ ಹಾಗೂ ಎಸ್.ಶಿವಶಂಕರ್ ಅವರಿಗೆ ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.ಮಾರತಹಳ್ಳಿಯಲ್ಲಿರುವ ಈ ಕಂಪೆನಿ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಂಬುರು, ಪ್ರಧಾನ ನಿರ್ದೇಶಕ ಸುನೀಲ್ ಬೊಮ್ಮಿರೆಡ್ಡಿ, ನಿರ್ದೇಶಕ ಕಮಾಲಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ (ತಾಂತ್ರಿಕ) ಕೃಷ್ಣಪ್ರಸಾದ್ ಅವರ ವಿರುದ್ಧ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮೈಸೂರಿನಲ್ಲಿ ನಿವೇಶನ ನೀಡುವ ಸಂಬಂಧ ಕಂಪೆನಿ ಅರ್ಜಿ ಆಹ್ವಾನಿಸಿತ್ತು. ಸುಮಿತ್ರಾ ಅವರು ಎರಡು ನಿವೇಶನಗಳಿಗೆ 22.80 ಲಕ್ಷ ರೂಪಾಯಿ ಹಾಗೂ ಶ್ರೀನಿವಾಸ ಅವರು ಒಂದು ನಿವೇಶನಕ್ಕೆ 11.48 ಲಕ್ಷ ರೂಪಾಯಿ ಹಣ 2009ರಲ್ಲಿ ನೀಡಿದ್ದರು.ಎರಡು ವರ್ಷ ಕಳೆದರೂ ಲೇಔಟ್ ಪೂರ್ಣಗೊಳ್ಳಲಿಲ್ಲ. ಅರ್ಜಿದಾರರು ಮಾಡಿಕೊಂಡ ಮನವಿಗಳೆಲ್ಲ ವಿಫಲವಾದವು. ಕಂಪೆನಿಯಿಂದ ಯಾವುದೇ ಸೂಕ್ತ ಉತ್ತರ ಬರಲಿಲ್ಲ. ಆದುದರಿಂದ ಇಬ್ಬರೂ ವೇದಿಕೆ ಮೊರೆ ಹೋದರು.ಕಂಪೆನಿ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯ ಪಟ್ಟಿದೆ. ಅರ್ಜಿದಾರರು ನೀಡಿರುವ ಹಣವನ್ನು, ಶೇ 12ರ ಬಡ್ಡಿದರಲ್ಲಿ ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ. ಪರಿಹಾರದ ಮೊತ್ತದ ಜೊತೆಗೆ ಇಬ್ಬರಿಗೂ ತಲಾ ಐದು ಸಾವಿರ ರೂಪಾಯಿಗಳ ನ್ಯಾಯಾಲಯದ ವೆಚ್ಚ ನೀಡುವಂತೆಯೂ ವೇದಿಕೆ ನಿರ್ದೇಶಿಸಿದೆ.ವಿಮೆ ಹಣ ನೀಡಲು ನಕಾರ

ವಿಮೆಯ ಹಣವನ್ನು ನೀಡಲು ನಿರಾಕರಿಸಿದ ಕೋರಮಂಗಲದ ಬಳಿ ಬಜಾಜ್ ಅಲಯನ್ಸ್ ಜೀವ ವಿಮಾ ಕಂಪೆನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ಹಣವನ್ನು ವಿ.ಕೆ. ನಾಗಮಣಿ ಅವರಿಗೆ ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.ನಾಗಮಣಿ ಅವರು ಜೆ.ಪಿ.ನಾರಾಯಣಗೌಡ ಎನ್ನುವವರ ಪತ್ನಿ. 2010ರ ಮಾರ್ಚ್‌ನಲ್ಲಿ ನಾರಾಯಣಗೌಡರು 1.30 ಲಕ್ಷ ರೂಪಾಯಿಗಳಿಗೆ ವಿಮೆ ಮಾಡಿಸಿದ್ದರು. ಆದರೆ ಏಪ್ರಿಲ್ ತಿಂಗಳಿನಲ್ಲಿಯೇ ಗೌಡರು ತೀರಿಕೊಂಡರು. ಮೊದಲ ಕಂತನ್ನು ಅವರು ತುಂಬಿದ್ದರು. ಆದರೆ ವಿಮೆಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆ ಮುಗಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ವಿಮೆ ಹಣ ನೀಡಲು ಕಂಪೆನಿ ನಿರಾಕರಿಸಿತು.ಇದನ್ನು ನಾಗಮಣಿ ವೇದಿಕೆಯಲ್ಲಿ ಪ್ರಶ್ನಿಸಿದ್ದರು. ಕಂಪೆನಿಯ ವಾದವನ್ನು ವೇದಿಕೆ ಮಾನ್ಯ ಮಾಡಲಿಲ್ಲ. ಅದು ಕರ್ತವ್ಯಲೋಪ ಎಸಗಿದೆ ಎಂದು ಅಭಿಪ್ರಾಯಪಟ್ಟಿತು. ಆದುದರಿಂದ ಸಂಪೂರ್ಣ ವಿಮೆ ಹಣವನ್ನು ನಾಗಮಣಿ ಅವರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.ನಿವೃತ್ತ ಯೋಧರ ಸಂಘಕ್ಕೆ ದಂಡ


ವಾಗ್ದಾನ ಮಾಡಿರುವ ನಿವೇಶನ ನೀಡದೆ, ವಾಸಕ್ಕೆ ಯೋಗ್ಯವಲ್ಲದ ನಿವೇಶನ ನೀಡಿದ ಆಸ್ಟೀನ್ ಟೌನ್ ಬಳಿಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘಕ್ಕೆ 80 ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ಪರಿಹಾರದ ಹಣವನ್ನು ಅರ್ಜಿದಾರರಾಗಿರುವ ಎಸ್. ಗಿರಿಜಾಂಬಾ ಅವರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ. ನಿವೃತ್ತ ಯೋಧರ ಕುಟುಂಬ ವರ್ಗಕ್ಕೆ ನಿವೇಶನ ನೀಡಲು ಅರ್ಜಿ ಕರೆಯಲಾಗಿತ್ತು. 30/40 ಅಡಿ ನಿವೇಶನಕ್ಕಾಗಿ ಅರ್ಜಿದಾರರು ಮೂರು ಲಕ್ಷ ರೂಪಾಯಿ ನೀಡಿದ್ದರು. ಆದರೆ ವರ್ಷಗಳು ಕಳೆದರೂ ನಿವೇಶನ ಕೈ ಸೇರಲಿಲ್ಲ. ಲೀಗಲ್ ನೋಟಿಸ್ ನೀಡಿದ ಮೇಲೆ ವಾಸಕ್ಕೆ ಯೋಗ್ಯವಲ್ಲದ ನಿವೇಶನವನ್ನು ಸಂಘ ಅರ್ಜಿದಾರರಿಗೆ ತೋರಿಸಿತು. ಹಣ ವಾಪಸು ನೀಡಲೂ ಸಂಘ ಒಪ್ಪಲಿಲ್ಲ. ಆದುದರಿಂದ ಅರ್ಜಿದಾರರು ವೇದಿಕೆ ಮೊರೆ ಹೋದರು.ಅರ್ಜಿದಾರರು ನೀಡಿರುವ ಸಂಪೂರ್ಣ ಹಣವನ್ನು ಪರಿಹಾರದ ಜೊತೆಗೆ ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.