ನಿವೇಶನ ಹಂಚಿಕೆಗೆ ಆದೇಶ

7

ನಿವೇಶನ ಹಂಚಿಕೆಗೆ ಆದೇಶ

Published:
Updated:

ಬೆಂಗಳೂರು: 781 ಮಂದಿ ನಿವೃತ್ತ ಸೈನಿಕರು, ನಿರಾಶ್ರಿತರು ಹಾಗೂ ಅಂಗ­ವಿಕಲ­ರಿಗೆ ವಿಶೇಷ ಆಶ್ರಯ ಯೋಜನೆ­ಯಡಿ ನಾಲ್ಕು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡುವಂತೆ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.ವಿಶೇಷ ಆಶ್ರಯ ಯೋಜನೆ ಜಾರಿ ವಿಳಂಬ ಪ್ರಶ್ನಿಸಿ ಎಸ್‌.ಎಂ.ರಮೇಶ್‌ ಹಾಗೂ ರವಿಕುಮಾರ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರಿದ್ದ ವಿಭಾಗೀಯ ಪೀಠ, ಏಳು ವರ್ಷದ ಹಿಂದೆ ಗುರುತಿಸಿದ ಫಲಾನುಭವಿಗಳಿಗೆ ಇನ್ನೂ ನಿವೇಶನ ಹಂಚಿಕೆ ಮಾಡದ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿತು.ನಿವೃತ್ತ ಸೈನಿಕರು, ನಿರಾಶ್ರಿತರು ಮತ್ತು ಅಂಗವಿಕರಿಗೆ ನಿವೇಶನ ನೀಡುವುದಕ್ಕಾಗಿ ಏಳು ವರ್ಷದ ಹಿಂದೆ ವಿಶೇಷ ಆಶ್ರಯ ಯೋಜನೆ ರೂಪಿಸಲಾಗಿತ್ತು. ಫಲಾನು­ಭವಿ­ಗಳನ್ನು ಗುರುತಿಸುವ ಕೆಲಸವೂ ಮುಗಿದಿತ್ತು. ಆದರೆ, ಈವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ನಿವೇಶನ ಮಂಜೂರಾತಿಗೆ ಆಯ್ಕೆಯಾಗಿದ್ದ ಕೆಲವು ಫಲಾನುಭವಿಗಳು ಈಗಾಗಲೇ ಮರಣ ಹೊಂದಿದ್ದಾರೆ.ವಿಶೇಷ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಕುರಿತು ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಎಷ್ಟು ಮಂದಿ ಫಲಾನುಭವಿಗಳನ್ನು ಮರಣ ಹೊಂದಿ­ದ್ದಾರೆ ಎಂಬುದನ್ನು ಸಮಿತಿ ಪರಿಶೀಲನೆ ನಡೆಸುತ್ತಿದೆ. ಶೀಘ್ರದಲ್ಲೇ ಪರಿಶೀಲನೆ ಮುಗಿಸಿ, ನಿವೇಶನ ಹಂಚಿಕೆ ಮಾಡ­ಲಾಗುವುದು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.‘ಸರ್ಕಾರ ಪರಿಶೀಲನೆ ಹೆಸರಿನಲ್ಲಿ ವಿಳಂಬ ಮಾಡಿದರೆ ಮತ್ತಷ್ಟು ಫಲಾನು­ಭವಿಗಳು ಮರಣ ಹೊಂದಬಹುದು. ಅಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು. ಮೂರು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಬೇಕು’ ಎಂದು ಗಡುವು ವಿಧಿಸಿದ ನ್ಯಾಯಪೀಠ, ಈ ಆದೇಶ ಪಾಲಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry