ಶನಿವಾರ, ಅಕ್ಟೋಬರ್ 19, 2019
28 °C

ನಿಷೇಧವೇ ಸೂಕ್ತ

Published:
Updated:

ಸಿಂದಗಿಯ ಮಿನಿ ವಿಧಾನಸೌಧದ ಎದುರು ಪಾಕಿಸ್ತಾನದ ಧ್ವಜವನ್ನು ಹಾರಿಸಿದವರು ಶ್ರೀರಾಮಸೇನೆಗೆ ಸೇರಿದ ಯುವಕರು ಎಂಬುದನ್ನು ಪೊಲೀಸರು ಸಾಕ್ಷ್ಯಸಹಿತ ಪತ್ತೆ ಮಾಡಿರುವುದರಿಂದ ಆ ಸಂಘಟನೆಯ ನೈಜ ಮುಖ ಬಯಲಾಗಿದೆ.ಗೋವುಗಳ ರಕ್ಷಣೆ, ಪ್ರೇಮಿಗಳ ದಿನಾಚರಣೆಗೆ ವಿರೋಧ, ಪಬ್‌ಗಳಿಗೆ ಹೋಗುವ ಹುಡುಗಿಯರನ್ನು ಅನಾಗರಿಕವಾಗಿ ಶಿಕ್ಷಿಸುವಂಥ ಗೂಂಡಾಗಿರಿ ಕೃತ್ಯಗಳನ್ನು ನಡೆಸುತ್ತ ಸನಾತನ ಸಂಸ್ಕೃತಿಯ ರಕ್ಷಕನಂತೆ ಬಿಂಬಿಸಿಕೊಳ್ಳುತ್ತಿದ್ದ ಈ ಸಂಘಟನೆ, ಪಾಕಿಸ್ತಾನದ ಧ್ವಜವನ್ನು ಹಾರಿಸುವ ಮೂಲಕ ಮುಸ್ಲಿಮರ ವಿರುದ್ಧ ಜನತೆಯನ್ನು ಎತ್ತಿಕಟ್ಟುವ ದುಷ್ಟ ಸಂಚು ನಡೆಸಿರುವುದನ್ನು ಈ ಘಟನೆ ಬಯಲು ಮಾಡಿದೆ. ಇದು ಸಮಾಜದ್ರೋಹಿ ವಿಧ್ವಂಸಕ ಕೃತ್ಯ.

 

ಕೋಮು ಸಾಮರಸ್ಯವನ್ನು ಕೆಡಿಸಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಸಂಶಯದಿಂದ ನೋಡುವಂಥ ಸಂದರ್ಭ ಸೃಷ್ಟಿಸಿದ ಈ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿದವರಿಗೆ ನಾಡಿನ ಸಾಮಾಜಿಕ ಸ್ವಾಸ್ಥ್ಯವನ್ನು ಧ್ವಂಸಗೊಳಿಸುವ ದುರುದ್ದೇಶ ಇರುವುದು ಸ್ಪಷ್ಟ. ಘಟನೆ ನಡೆದ ಮೂರೇ ದಿನಗಳಲ್ಲಿ ಆರೋಪಿಗಳನ್ನು ಸಾಕ್ಷ್ಯಸಹಿತ ಪತ್ತೆ ಮಾಡಿದ ಪೊಲೀಸರು ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.ಪಾಕಿಸ್ತಾನದ ಧ್ವಜ ಹಾರಿಸಿದವರನ್ನು ಪತ್ತೆ ಮಾಡಿ ಶಿಕ್ಷಿಸುವಂತೆ ಆಗ್ರಹಿಸಿ ಇದೇ ಶ್ರೀರಾಮಸೇನೆ ನೀಡಿದ ಬಂದ್ ಕರೆಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಾವು ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಬದ್ಧವಾಗಿರುವುದನ್ನು ಸಿಂದಗಿ ಪರಿಸರದ ಜನತೆ ಪ್ರದರ್ಶಿಸಿದ್ದಾರೆ. ದುಷ್ಕರ್ಮಿಗಳ ಪ್ರಚೋದನೆಗೆ ವಶವಾಗದೆ ಶಾಂತಿಯನ್ನು ಕಾಪಾಡಿಕೊಂಡು ಬಂದ ಜನತೆ ಅಭಿನಂದನೆಗೆ ಪಾತ್ರರಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಶ್ರೀರಾಮಸೇನೆಯಂಥ ಕೆಲವು ಗುಂಪುಗಳು ಸಂವಿಧಾನಾತೀತ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತಿವೆ.ಕರಾವಳಿ ಭಾಗದಲ್ಲಿ ಚರ್ಚುಗಳ ಮೇಲೆ ನಡೆಸಿದ ದಾಳಿ, ಗೋ ರಕ್ಷಣೆಯ ನೆಪದಲ್ಲಿ ಮುಸ್ಲಿಮರ ಮೇಲೆ ಹಲ್ಲೆ, ಸಂಸ್ಕೃತಿಗೆ ವಿರುದ್ಧವೆಂಬ ನೆಪದಲ್ಲಿ ಯುವತಿಯರ ಖಾಸಗಿತನದ ಮೇಲೆ ನಡೆಸುತ್ತಿದ್ದ ಅತಿರೇಕದ ಘಟನೆಗಳೆಲ್ಲ ಈ ಸರ್ಕಾರದ ಕೃಪಾಶ್ರಯದ ಕಾರಣ ಮುಚ್ಚಿ ಹೋಗಿವೆ.

 

ಈ ಸಂಘಟನೆಗಳ ವರ್ತನೆ ಬಗ್ಗೆ ಸರ್ಕಾರ ತೋರಿಸುತ್ತಿದ್ದ ಮೃದು ಧೋರಣೆಯೇ ಈಗಿನ ಭಯೋತ್ಪಾದಕ ಕೃತ್ಯಕ್ಕೆ ಕಾರಣ. ಪಾಕಿಸ್ತಾನದ ಧ್ವಜವನ್ನು ನಿರ್ಮಿಸಿ ಹಾರಿಸುವ ಮೂಲಕ ರಾಜ್ಯದಲ್ಲಿ ಆಂತರಿಕ ಕ್ಷೋಭೆಯನ್ನು ಸೃಷ್ಟಿಸಲು ನಡೆಸಿದ ಈ ಕೃತ್ಯವನ್ನು ಸರ್ಕಾರ, ಹಾದಿ ತಪ್ಪಿದ ಕೆಲವು ಯುವಕರ ಕಿಡಿಗೇಡಿ ಕೃತ್ಯವೆಂದು, ಲಘುವಾಗಿ ಪರಿಗಣಿಸಬಾರದು.ಶ್ರೀಸಾಮಾನ್ಯರಲ್ಲಿ ಇರುವ ದೇಶ ಪ್ರೇಮದ ಭಾವವನ್ನು ಸರ್ಕಾರಿ ಕಟ್ಟಡದ ಎದುರು ಪಾಕಿಸ್ತಾನದ ರಾಷ್ಟ್ರಧ್ವಜಾರೋಹಣದ ಮೂಲಕ ಉದ್ರೇಕಿಸಿ ಅದು ಮುಸ್ಲಿಮರ ವಿರುದ್ಧ ದ್ವೇಷವಾಗಿ ಪರಿಣಮಿಸುವಂತೆ ಉದ್ದೇಶಿಸಿದ ಈ ಕೃತ್ಯ, ರಾಜ್ಯದ ನಾಗರಿಕ ಆಡಳಿತಕ್ಕೆ ಹಾಕಿದ ಸವಾಲು.ಶ್ರೀರಾಮನ ಹೆಸರಿನ ಆಕರ್ಷಣೆಯಿಂದ ಸಂಘಟನೆಯನ್ನು ಸೇರಿಕೊಳ್ಳುವ ಯುವಕರಲ್ಲಿ ಈ ಪ್ರಮಾಣದ ವಿಧ್ವಂಸಕ ಭಾವವನ್ನು ಪ್ರಚೋದಿಸುವ ಸಂಘಟನೆಯನ್ನು ನಿಷೇಧಿಸಲು ಇದು ಸರಿಯಾದ ಸಂದರ್ಭ. ರಾಜ್ಯ ಸರ್ಕಾರ ತಕ್ಷಣವೇ ಶ್ರೀರಾಮಸೇನೆಯನ್ನು ನಿಷೇಧಿಸಿ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬೇಕು.

Post Comments (+)