ನಿಷೇಧಿತ ಬಣ್ಣದ ಕಾರ್ಖಾನೆ ಅವಾಂತರ

ಗುರುವಾರ , ಜೂಲೈ 18, 2019
28 °C

ನಿಷೇಧಿತ ಬಣ್ಣದ ಕಾರ್ಖಾನೆ ಅವಾಂತರ

Published:
Updated:

ಕನಕಪುರ: ತಮಿಳುನಾಡಿನಲ್ಲಿ ನಿಷೇಧಿಸಲಾಗಿರುವ ಬಟ್ಟೆಗೆ ಬಣ್ಣಹಾಕುವ ಕಾರ್ಖಾನೆಗಳು ಕನಕಪುರ ತಾಲ್ಲೂಕಿನಲ್ಲಿ ತಲೆಯತ್ತಿ ನಿರ್ಭಯವಾಗಿ ಕೆಲಸ ನಿರ್ವಹಿಸುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉಯ್ಯಂಬಳ್ಳಿ ಹೋಬಳಿಯ ಕಲ್ಲಿಗೌಡನ ದೊಡ್ಡಿ ಗ್ರಾಮಸ್ಥರು ಆರೋಪಿಸಿದ್ದಾರೆ.ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಳ್ಳಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಪ್ಪನದೊಡ್ಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಣ್ಣಹಾಕುವ ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ಕಟ್ಟಡಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮತ್ತು ಹಳ್ಳದ ನೀರನ್ನು ಬಳಸಿಕೊಂಡು ಈ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಇಲ್ಲಿನ ಪರಿಸರಕ್ಕೆ ತೀವ್ರ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕಾರ್ಖಾನೆಗಳು ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಟ್ಟೆಗೆ ಬಣ್ಣ ಕಟ್ಟಿದ ನೀರನ್ನು ರಾತ್ರಿಯೆಲ್ಲಾ ಹಳ್ಳಕ್ಕೆ ಹರಿಬಿಡುತ್ತಿದ್ದು ಇದರಿಂದ ಇಡೀ ಹಳ್ಳದ ನೀರು ಕಲುಷಿತಗೊಂಡಿದೆ. ಈ ನೀರನ್ನು ಕುಡಿಯುವ ದನಕರುಗಳು ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಿವೆ. ಇದರ ವಿರುದ್ಧ ಗ್ರಾಮ ಪಂಚಾಯಿತಿ ಮತ್ತು ತಹಸೀಲ್ದಾರ್‌ಗೆ ದೂರು ನೀಡಲಾಗಿದ್ದರೂ ಈವರೆವಿಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಲ್ಲಿಗೌಡನ ದೊಡ್ಡಿ ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ಆರೋಪಿಸಿದ್ದಾರೆ.ಗ್ರಾಮದ ಹೊರವಲಯದ ಜಮೀನಲ್ಲಿ ಈ ಕಾರ್ಖಾನೆಗಳಿವೆ. ಕಟ್ಟಡದ ಮಾಲೀಕರು ಹಣದ ಆಸೆಗೆ ಇವುಗಳನ್ನು ಬಣ್ಣಕಟ್ಟುವ ಕಾರ್ಖಾನೆಗಳನ್ನಾಗಿ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಕಾರ್ಖಾನೆಯನ್ನು ನಡೆಸುತ್ತಿರುವವರು ತಮಿಳುನಾಡು ಮೂಲದವರು ಮತ್ತು ಇದರಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೂಡಾ ಅಲ್ಲಿಯವರೇ ಆಗಿದ್ದಾರೆ. ಹೀಗಾಗಿ ಇವರ ಕಾರ್ಯ ಚಟುವಟಿಕೆಗಳ ಬಗ್ಗೆ ಸ್ಥಳೀಯರು ಗಮನಹರಿಸಿಲ್ಲ ಎಂದು ಅವರು ಹೇಳಿದ್ದಾರೆ.ಈ ಕಾರ್ಖಾನೆಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ ಎಂದೇ ತಮಿಳುನಾಡು ರಾಜ್ಯ ಸರ್ಕಾರ ಇವುಗಳನ್ನು ನಿಷೇಧಿಸಿದೆ. ಆದರೆ ರಾಜ್ಯದಲ್ಲಿ ಸಂಬಂಧಿಸಿದ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಇವುಗಳನ್ನು ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರಾದ ಗೊಲ್ಲರದೊಡ್ಡಿಯ ಭೈರಯ್ಯ, ಕಲ್ಲಿಗೌಡನ ದೊಡ್ಡಿಯ ಕುಮಾರ್ ಮತ್ತು ಜವರಾಯಿಗೌಡ ಒತ್ತಾಯಿಸಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯ

ಈ ಹಿಂದೆ ಈ ಪ್ರದೇಶದಲ್ಲಿನ ಅಕ್ರಮ ಕಾರ್ಖಾನೆಗಳ ಬಗ್ಗೆ ಗ್ರಾಮಸ್ಥರು ಅಂದಿನ ತಹಸೀಲ್ದಾರ್ ಡಾ. ಪ್ರಜ್ಞಾ ಅಮ್ಮೆಂಬಳ ಅವರಿಗೆ ದೂರು ನೀಡಿದ್ದರು. ಅವರು ತಕ್ಷಣವೇ ಕ್ರಮ ಕೈಗೊಂಡು ಕಾರ್ಖಾನೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಅವುಗಳಿಗೆ ಬೀಗಮುದ್ರೆ ಹಾಕಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಜ್ಞಾ ಅವರು ಇಲ್ಲಿ ಅಧಿಕಾರದಲ್ಲಿ ಇರುವ ತನಕ ಈ ಕಾರ್ಖಾನೆಗಳೆಲ್ಲಾ ಮುಚ್ಚಿದ್ದವು. ಆದರೆ ಅವರು ವರ್ಗಾವಣೆಗೊಂಡ ನಂತರ ಈ ಅಕ್ರಮ ಕಾರ್ಖಾನೆಗಳು ತಮ್ಮ ಕೆಲಸವನ್ನು ಪುನರಾರಂಭಿಸಿವೆ.

-ಕಲ್ಲಿಗೌಡನ ದೊಡ್ಡಿ ರಾಘವೇಂದ್ರ

ಜನರ ದುರಾಸೆ

ಮುಳ್ಳಳ್ಳಿ ಗ್ರಾ.ಪಂ. ಸದಸ್ಯ, ಕನಕಪುರ ತಾಲ್ಲೂಕು ಕನಕಪುರ ತಾಲ್ಲೂಕು ಪಂಚಾಯಿತಿ  ಸದಸ್ಯ ಗೊಲ್ಲಳ್ಳಿ ಉಮೇಶ್,`ಹೆಚ್ಚಿನ ಬಾಡಿಗೆ ಸಿಗುತ್ತಿರುವುದರಿಂದ ಆಕರ್ಷಿತರಾಗಿರುವ ರೈತರು ಗೊಲ್ಲರದೊಡ್ಡಿ, ಕೆರೆಮೇಗಳದೊಡ್ಡಿಯಲ್ಲಿಯೂ ಇಂತಹ ಬಣ್ಣದ ಕಾರ್ಖಾನೆಗಳು ತಲೆ ಎತ್ತಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆ ಸ್ಥಗಿತಗೊಳಿಸಿ ಇಂತಹ ಅಕ್ರಮ ಚಟುವಟಿಕೆಗಳಿಂದಲೇ ಆದಾಯ ಪಡೆಯುವ ಆಸೆಗೆ ಬಲಿಯಾಗುವ ಸಾಧ್ಯತೆ ಇದೆ.

-ಗೊಲ್ಲಳ್ಳಿ ಉಮೇಶ್, ಕನಕಪುರ ತಾಲ್ಲೂಕು ಪಂಚಾಯಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry