ಭಾನುವಾರ, ಮೇ 9, 2021
26 °C

ನಿಷ್ಕ್ರಿಯತೆ ಖಂಡಿಸಿ ಸರ್ಕಾರದ ಶವಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಆರು ತಿಂಗಳಿಂದ ರಾಜ್ಯ ಸರ್ಕಾರ ತಡೆ ಹಿಡಿದಿರುವ ಮಾಸಾಶನಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಮ್ಯೂನಿಷ್ಟ್ ಪಕ್ಷ ತಾಲ್ಲೂಕು ಮಂಡಳಿ (ಸಿಪಿಐ) ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ ತೀವೃಗೊಂಡಿದ್ದು, ಮಂಗಳವಾರ ಸರ್ಕಾರದ ನಿಷ್ಕ್ರಿಯತೆ ಯನ್ನು ಖಂಡಿಸಿ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿಯನ್ನು ದಹಿಸಲಾಯಿತು.ಕಳೆದ ಆಗಷ್ಟ್ 22ರಂದು ಆರಂಭಿಸಿರುವ ಅನಿರ್ದಿಷ್ಟ ಧರಣಿ ಸೋಮವಾರ ಉಪವಾಸ ಸತ್ಯಾಗ್ರಹವಾಗಿ ಮುಂದುವರಿಯಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೌಕತ್ ಅಲಿ ಆಲೂರ, ತಾಲ್ಲೂಕು ಕಾರ್ಯದರ್ಶಿ ಸಿದ್ದಣ್ಣ ರಾಜವಾಳ ಆಮರಣ ಉಪವಾಸ ಆರಂಭಿಸಿದ್ದರು.ಸಿಪಿಐ ತಾಲ್ಲೂಕು ಮಂಡಳಿ ಕರೆಯ ಮೇರೆಗೆ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದ್ದ ಪಿಂಚಣಿ ಕಡಿತಗೊಂಡ ಫಲಾನುಭವಿಗಳು ನಂತರ ಸಿಪಿಐ ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಮೇಲಿರುವ ಅಖಂಡೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಸರ್ಕಾರದ ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಲಾಯಿತು.ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ, ಸ್ಥಳದಲ್ಲಿಯೇ ಇದ್ದ ಪೊಲೀಸ್ ಅಧಿಕಾರಿಗಳು ತಡೆದರು. ಪ್ರತಿಭಟನೆಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶೌಕತ್ ಅಲಿ ಆಲೂರ, ತಾಲ್ಲೂಕು ಕಾರ್ಯದರ್ಶಿ ಸಿದ್ದಣ್ಣ ರಾಜವಾಳ, ಸಹ-ಕಾರ್ಯದರ್ಶಿ ಬಾಬು ಬಿ.ಪಾಟೀಲ, ಎಐಎಸ್‌ಎಫ್ ರಾಜ್ಯ ಸಂಚಾಲಕ ರಾಜೇಂದ್ರ ರಾಜವಾಳ, ಭಾರತೀಯ ಜನ ಕಲಾ ಸಮಿತಿ ರಾಜ್ಯ ಸಂಚಾಲಕ ಪಾಲವನಹಳ್ಳಿ ಪ್ರಸನ್ನಕುಮಾರ, ಅಲ್ಲಿಸಾಬ ಸಿಂದಗಿ, ಶಿವರಾಯ ಹಳ್ಳಿ, ಸಿಪಿಐ ನಗರ ಘಟಕದ ಕಾರ್ಯದರ್ಶಿ ಕೇರನಾಥ ಫಾರ್ಸಿ, ಸಹ-ಕಾರ್ಯದರ್ಶಿ ಮಹ್ಮದ ಹನೀಫ್ ಬಾಬಾ, ಎಐಕೆಎಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಗುರುಲಿಂಗಪ್ಪ ಸಾಹು ರಾಜವಾಳ, ಸಲೀಮ ಪಟೇಲ ಇಜೇರಿ, ರಾಮನಾಥ ಭಂಡಾರಿ ಹಾಗೂ ನೂರಾರು ಜನ ಫಲಾನುಭವಿಗಳು, ಮಹಿಳೆಯರು, ಅಂಗವಿಕಲರು ಪಾಲ್ಗೊಂಡಿದ್ದರು.ಪ್ರತಿಭಟನೆ ಅಂತ್ಯ: ತಮ್ಮ ಬೇಡಿಕೆಗಳಿಗೆ ತಾವು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದು, ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ ತಹಸೀಲ್ದಾರ್

ಡಿ.ವೈ.ಪಾಟೀಲ ಲಿಖಿತ ಭರವಸೆ ನೀಡಿದ ನಂತರ ಭಾರತೀಯ ಕಮ್ಯೂನಿಷ್ಟ್ ಪಕ್ಷದ ಮುಖಂಡರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.