ಸೋಮವಾರ, ಜೂನ್ 21, 2021
27 °C
‘ಅಭ್ಯರ್ಥಿ–ಕಾರ್ಯಕರ್ತರ ಸಮನ್ವಯತೆ ಕೊರತೆಯಿಂದ ಕಳೆದ ಬಾರಿ ಸೋಲು’

ನಿಷ್ಠರಿಗೇ ಟಿಕೆಟ್‌–ಎಲ್ಲ ಕಾರ್ಯಕರ್ತರ ಹೆಮ್ಮೆ: ಮಲ್ಕಾಪುರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ‘ಹಣ ಬಲ, ತೋಳ್ಬಲ ಉಳ್ಳವರು ಎಲ್ಲ ಪಕ್ಷದಲ್ಲಿಯೂ ಪ್ರವೇಶ ಪಡೆದಿದ್ದಾರೆ. ನಮ್ಮ ಪಕ್ಷದಲ್ಲಿ ಕಡಿಮೆ. ಆದರೆ ಪಕ್ಷ ಅಂಥವರ ಬದಲಿಗೆ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದೆ ಎಂಬುದು ಜಿಲ್ಲೆಯ ಎಲ್ಲ ಕಾರ್ಯಕರ್ತರಿಗೂ ಹೆಮ್ಮೆಯ ವಿಷಯ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ್‌ ಮಲ್ಕಾಪುರೆ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಳೆದ ಚುನಾವಣೆಗಳಲ್ಲಿ ಆಗಿರುವ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಸ್ವತಃ ನಾನೇ ಅಭ್ಯರ್ಥಿ ಎಂದು ಎಲ್ಲರೂ ಭಾವಿಸಿ ಪಕ್ಷದ ಗೆಲುವಿಗೆ ಯತ್ನಿಸಬೇಕು ಎಂದು ಕರೆ ನೀಡಿದರು.ಪಕ್ಷದ ಟಿಕೆಟ್‌ಗೆ ಅನೇಕರು ಆಕಾಂಕ್ಷಿಗಳಾಗಿದ್ದರು. ಈಗ ಒಬ್ಬರಿಗೆ ಸಿಕ್ಕಿರುವ ಕಾರಣ ಕೆಲವರಿಗೆ ಅಸಮಾಧಾನ ಆಗಿರಬಹುದು. ಈ ಅಸಮಾಧಾನವನ್ನು ಬಗೆಹರಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯತೆಯ ಕೊರತೆಯೂ ಪಕ್ಷದ ಸೋಲಿಗೆ ಕಾರಣವಾಗಿದೆ. ಇದರ ಪರಿಣಾಮ ಹೊರಗಿನ ಜಿಲ್ಲೆಯವರು ಬಂದು ಇಲ್ಲಿ ಗೆಲುವು ಸಾಧಿಸಿದರು. ಈಗ ಅಂಥದಕ್ಕೆ ಅವಕಾಶ ನೀಡ­ಬಾರದು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಆಗಿಸಲು ಎಲ್ಲ ಕಾರ್ಯ­ಕರ್ತರು ಶಕ್ತಿಮೀರಿ ಯತ್ನಿಸಬೇಕು ಎಂದು ಹೇಳಿದರು.371(ಜೆ) ಕಾಂಗ್ರೆಸ್‌ ಕೊಡುಗೆ ಅಲ್ಲ: ‘ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕೇವಲ ಕಾಂಗ್ರೆಸ್‌ ಸಾಧನೆಯಲ್ಲ. ಸಂಸತ್ತಿನಲ್ಲಿ ಎಲ್ಲ ಪಕ್ಷಗಳು ಕೈಜೋಡಿಸಿವೆ. ಆದರೆ ಕಾಂಗ್ರೆಸ್‌ ತನ್ನದೇ ಕೊಡುಗೆ ಎಂದು ಬಿಂಬಿಸುವುದು ಸರಿಯಲ್ಲ ಎಂದರು.‘ಬೀದರ್‌ನಿಂದ ಬೆಂಗಳೂರಿಗೆ ರೈಲು ಸಂಚಾರ ಸೌಲಭ್ಯ ಆರಂಭಿಸಿದ್ದು ದೊಡ್ಡ ಸಾಧನೆಯಲ್ಲ. ನಾನೊಬ್ಬ ಸಾರಿಗೆ ಮಂತ್ರಿ. ಇಲ್ಲಿಂದ ಬೆಂಗಳೂರಿಗೆ ಬಸ್‌ ಸಂಚಾರ ಆರಂಭಿಸಿದರೆ ಅದು ನನ್ನ ದೊಡ್ಡ ಸಾಧನೆ ಆಗಿಬಿಡುತ್ತದಾ?’ ಎಂದು ಹೋಲಿಸಿದರು.

ಆದರೂ ಖರ್ಗೆ ಅವರು ಈ ಮೂಲಕ ತವರು ಜಿಲ್ಲೆಯ ಋಣ ತೀರಿಸಿದ್ದಾರೆ ಎಂದು ಅಭಿನಂದಿಸಬಹುದು ಎಂದರು.ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯಮೇಲೆ ಅವಲಂಬಿತವಾದ ಪಕ್ಷ ಅಲ್ಲ. ಪಕ್ಷದ ಕಾರ್ಯಕರ್ತನಿಗೆ ಟಿಕೆಟ್‌ ನೀಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಗಂದಗೆ ಮಾತನಾಡಿ, ‘ಈ ಚುನಾವಣೆ ಒಂದು ಸವಾಲು. ಇದನ್ನು ಎಲ್ಲ ಕಾರ್ಯಕರ್ತರು ಸ್ವೀಕರಿಸಬೇಕು. ಕೆಲವರು ಆರೋಪಿರುವಂತೆ ಟಿಕೆಟ್ ನೀಡುವಲ್ಲಿ ಯಾವುದೇ ಮ್ಯಾಚ್‌ ಫಿಕ್ಸಿಂಗ್‌ ಆಗಿಲ್ಲ.  ಪಕ್ಷದ ಈಗ ಅಭ್ಯರ್ಥಿಯನ್ನು ಘೋಷಣೆ ಮಾಡಿ­ರುವ ಕಾರಣ ಎಲ್ಲರೂ ಒಗ್ಗೂಡಿ ಅವರ ಗೆಲುವಿಗೆ ಯತ್ನಿಸಬೇಕು’ ಎಂದರು.‘ಅಭ್ಯರ್ಥಿ ಬದಲಾವಣೆ ಸಂಭವವಿಲ್ಲ, ಇಂದು ಖೂಬಾ ನಾಮಪತ್ರ: ‘ಬೀದರ್‌ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯ ಸಂಭವವಿಲ್ಲ. ಅಭ್ಯರ್ಥಿ ಭಗವಂತ ಖೂಬಾ ಸಾಂಕೇತಿಕವಾಗಿ ಮಾ.24ರಂದು ಬಿ.ಫಾರಂ ಜತೆಗೇ ನಾಮಪತ್ರ ಸಲ್ಲಿಸುವರು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಘುನಾಥರಾವ್ ಮಲ್ಕಾಪುರೆ ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಕಾರ್ಯ­ಕರ್ತರ ಸಮ್ಮುಖದಲ್ಲಿ ಮಾ.26ರಂದು ಮತ್ತೆ ನಾಮಪತ್ರ ಸಲ್ಲಿಸುವರು. ಆಗ ಕೆಲವು ಮುಖಂಡರೂ ಹಾಜರಿರುತ್ತಾರೆ ಎಂದು ಸ್ಪಷ್ಟಪಡಿಸಿದರು.ಟಿಕೆಟ್‌ ಆಕಾಂಕ್ಷಿಯಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಅವರು ಇನ್ನೂ ಟಿಕೆಟ್‌ ಸಿಗುವ ಭರವಸೆ ಹೊಂದಿರುವ ಕುರಿತು ಗಮನಸೆಳೆದಾಗ, ‘ಭರವಸೆ ಎಲ್ಲರಿಗೂ ಇರುತ್ತದೆ. ಆದರೆ ಬಿಜೆಪಿಯಲ್ಲಿ ಒಮ್ಮೆ ಪ್ರಕಟಿಸಿದ ಬಳಿಕ ಬದಲಿಸಿರುವ ನಿದರ್ಶನವಿಲ್ಲ’ ಎಂದರು.ಪಕ್ಷ ಈಗ ಒಬ್ಬರಿಗೆ ಟಿಕೆಟ್‌ ಪ್ರಕಟಿಸಿರುವ ಕಾರಣ ಎಲ್ಲರೂ ಒಗ್ಗೂಡಿ ಅವರ ಗೆಲುವಿಗೆ ಪ್ರಯತ್ನಿಸ­ಬೇಕು.

ಟಿಕೆಟ್ ಸಿಗಲಿಲ್ಲ ಎಂಬ ಬೇಸರದಿಂದ ಸೂರ್ಯಕಾಂತ ಬೆಂಬಲಿ­ಗರು ಪ್ರತಿಭಟನೆ ನಡೆಸಿದ್ದಾರೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದರು.ನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲು

ಬಸವಕಲ್ಯಾಣ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಮೂರು ಪ್ರತ್ಯೇಕ ಪ್ರಕರಣಗಳು ಇಲ್ಲಿನ ನಗರ ಠಾಣೆಯಲ್ಲಿ ದಾಖಲಾಗಿವೆ.

ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಪರವಾನಗಿ ಇಲ್ಲದೆ ಧ್ವಜ ಬಳಸಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿಯೂ ಪರವಾನಗಿ ಇಲ್ಲದೆ ಧ್ವಜ ಮತ್ತು ಬ್ಯಾನರ್ ಕಟ್ಟಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಇದಲ್ಲದೆ ಈಚೆಗೆ ನಡೆದ ರೇಣುಕಾಚಾರ್ಯರ ಜಯಂತಿಯ ಭಿತ್ತಿಪತ್ರದಲ್ಲಿ ರಾಜಕೀಯ ಮುಖಂಡರ ಭಾವಚಿತ್ರ ಬಳಸಿದ ಸಂಬಂಧ ದೇವಸ್ಥಾನದ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚುನಾವಣಾ ವೀಕ್ಷಕ ದಳದ ಅಧಿಕಾರಿ ಅಶೋಕ ತಳವಾಡೆ ನೀಡಿದ ದೂರಿನ ಮೇರೆಗೆ ಈ ಪ್ರಕರಣಗಳು ದಾಖಲಾಗಿವೆ.ಔತಣ ಕೂಟದಲ್ಲಿ ಅಧಿಕಾರಿಗಳ ಹಾಜರಿ: ದೂರು

ಬೀದರ್: ನಗರದ ಖಾಸಗಿ ಮನೆಯೊಂದರಲ್ಲಿ ಶನಿವಾರ ರಾತ್ರಿ ಔತಣ ಕೂಟವನ್ನು ಆಯೋಜಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಧರ್ಮಸಿಂಗ್‌ ಅವರು ಹಾಜರಿದ್ದ ಆ ಔತಣ ಕೂಟದಲ್ಲಿ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು ಎಂಬ ದೂರುಗಳ ಬಗ್ಗೆ ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ.‘ಈ ಕುರಿತು ಮಾಹಿತಿ ಬಂದಿದೆ. ರಾತ್ರಿ 10 ಗಂಟೆ ಸುಮಾರಿಗೆ ಬೆಳವಣಿಗೆ ನಡೆದಿದ್ದು, ಚುನಾವಣೆ ಮೇರೆಗೆ ಲೇಬಲ್ ಇದ್ದ ವಾಹನವೊಂದು ಆ ಸ್ಥಳದಲ್ಲಿ ಇತ್ತು ಎಂಬುದು ಖಚಿತವಾಗಿದೆ. ಈ ಬಗೆಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ತಿಳಿಸಿದರು.ಆಪ್‌ ಅಭ್ಯರ್ಥಿಯಿಂದ ನಾಳೆ ನಾಮಪತ್ರ ಸಲ್ಲಿಕೆ

ಬೀದರ್: ಬೀದರ್ ಲೋಕಸಭೆ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಚಂದ್ರಕಾಂತ ಕುಲಕರ್ಣಿ ಮಾ. 25ರಂದು  ನಾಮಪತ್ರ ಸಲ್ಲಿಸಲಿದ್ದಾರೆ.ಬೆಳಿಗ್ಗೆ ಶಿವನಗರದ ಪೆಟ್ರೋಲ್‌ ಪಂಪ್‌ ಬಳಿಯಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ನಾಮಪತ್ರ ಸಲ್ಲಿಸುವರು ಎಂದು ಹೇಳಿಕೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.