ಶನಿವಾರ, ಮಾರ್ಚ್ 6, 2021
20 °C
ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಭಿಮತ

ನಿಷ್ಠುರತೆಯ ಶ್ರೇಷ್ಠ ವಚನಕಾರ ಚೌಡಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಷ್ಠುರತೆಯ ಶ್ರೇಷ್ಠ ವಚನಕಾರ ಚೌಡಯ್ಯ

ವಿಜಯಪುರ: ಸಮಾಜದಲ್ಲಿನ ಅಸಮಾನತೆ ವಿರುದ್ಧ ನಿಷ್ಠುರವಾಗಿ ತಮ್ಮ ವಚನಗಳ ಮೂಲಕ ಪ್ರತಿಕ್ರಿಯಿಸಿದ ಅಂಬಿಗರ ಚೌಡಯ್ಯ ನೇರ-ನುಡಿಯ ನಿಷ್ಠುರ ವ್ಯಕ್ತಿತ್ವದ ಅಪರೂಪದ ದಾರ್ಶನಿಕ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು ಒಬ್ಬ ಶ್ರೇಷ್ಠ ದಾರ್ಶನಿಕ, ವಚನಕಾರ ಎಂದರು.ಉಪವಿಭಾಗಾಧಿಕಾರಿ ಪರಶುರಾಮ ಮಾದರ ಮಾತನಾಡಿ, ಡಾಂಬಿಕತೆ ವಿರುದ್ಧ ಹೋರಾಡಿದ ಧೀಮಂತ ವಚನಕಾರ ಅಂಬಿಗರ ಚೌಡಯ್ಯ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಒಬ್ಬ ಶ್ರೇಷ್ಟ ವಚನಕಾರ. ಅವರ ವಚನಗಳು ಇಂದಿಗೂ ಸಮಾಜದ ಸುಧಾರಣೆಗೆ ಉತ್ತಮ ಸಂದೇಶ ನೀಡುವಲ್ಲಿ ಪ್ರಸ್ತುತವಾಗಿವೆ ಎಂದು ಹೇಳಿದರು.ವಿವೇಕಾನಂದ ಡಬ್ಬಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಬ್ಯಾಂಕ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಬಿಗರ ಚೌಡಯ್ಯನವರ ಕುರಿತು ಸುರೇಶ ಶಹಾ ತಂಡದವರು ಪ್ರದರ್ಶಿಸಿದ ರೂಪಕ ಸಾರ್ವಜನಿಕರ ಗಮನ ಸೆಳೆಯಿತು.ಶಾಂತವೀರ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡರಾದ ಸಾಹೇಬಗೌಡ ಬಿರಾದಾರ, ಅಂಬಿಗರ ಚೌಡಯ್ಯ ಸಂಘದ ಜಿಲ್ಲಾ ಅಧ್ಯಕ್ಷ ಶರಣಪ್ಪ ಕಣಮೇಶ್ವರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಸ್ವಾಗತಿಸಿ, ವಂದಿಸಿದರು.ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ನಡೆದ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರೇಶಬಾಬು ಚಾಲನೆ ನೀಡಿದರು.ಬ. ಬಾಗೇವಾಡಿ ವರದಿ

ಬಸವಾದಿ ಶರಣರ ಜಯಂತಿ ಕಾರ್ಯಕ್ರಮಗಳು ಒಂದೇ ಜಾತಿಗೆ ಸೀಮಿತಗೊಂಡಿಲ್ಲ. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಶರಣರ ತತ್ವಗಳನ್ನು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಜೀವನದಲ್ಲಿ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡಂತಾಗುತ್ತದೆ ಎಂದು ಸಾಹಿತಿ ಸಿದ್ದಣ್ಣ ಉತ್ನಾಳ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಇಂದಿನ ಮಕ್ಕಳಲ್ಲಿ ಪುಸ್ತಕ ಪ್ರೇಮ ಬೆಳೆಸಬೇಕಾಗಿದೆ. ಜೀವನಕ್ಕೆ ನೆಮ್ಮದಿ ಕೊಡುವ ಸಾಹಿತ್ಯವನ್ನು ಓದಬೇಕು. ಅದರಿಂದ ಜ್ಞಾನವೃದ್ಧಿಯಾಗುವುದರೊಂದಿಗೆ ಬದುಕಿನಲ್ಲಿ ಸನ್ಮಾರ್ಗದಿಂದ ನಡೆಯಲು ಬೇಕಾದ ಅಂಶಗಳನ್ನು ಪಡೆಯುತ್ತೇವೆ. 12ನೇ ಶತಮಾನದಲ್ಲಿನ ಅಂಬಿಗರ ಚೌಡಯ್ಯ ಸೇರಿದಂತೆ ಮುಂತಾದ ಶರಣರ ವಚನಗಳಿಂದ ಜೀವನ ಸುಂದರಗೊಳಿಸಿಕೊಳ್ಳಬಹುದು ಎಂದರು. ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಮಾತನಾಡಿ, ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಶರಣರು ನಡೆಸಿದ ಸರಳ ಜೀವನ ಹೇಗೆ ಸಮಾಜಮುಖಿಯಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಸಂಜೀವ ಕಲ್ಯಾಣಿ ಮಾತನಾಡಿದರು. ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ತಾಲ್ಲೂಕು ಪಂಚಾಯತಿ ಅಧ್ಯಕ್ಷ ಮಲ್ಲೇಶಿ ಇಂಡಿ, ಗಂಗಾಮತ ಸಮಾಜ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲು ತಳವಾರ, ಅಂಬಿಗರ ಚೌಡಯ್ಯ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಲಕಾರ, ಗ್ರೇಡ್‌–2 ತಹಶೀಲ್ದಾರ ಎಂ.ಇಸ್ಮಾಯಿಲ್‌ ಇದ್ದರು. ಬಿಇಓ ಮಂಜುನಾಥ ಗುಳೇದಗುಡ್ಡ ಸ್ವಾಗತಿಸಿದರು. ತಾ.ಪಂ ಇಓ ಬಿ.ಎಸ್‌.ರಾಠೋಡ ವಂದಿಸಿದರು. ಶಿಕ್ಷಕ ಎಂ.ಬಿ. ತೋಟದ ಕಾರ್ಯಕ್ರಮ ನಿರೂಪಿಸಿದರು.  ಸಿಂದಗಿ ವರದಿ

ಅಂಬಿಗರ ಚೌಡಯ್ಯನವರು ಅತ್ಯಂತ ನ್ಯಾಯನಿಷ್ಠುರಿ ಶರಣರಾಗಿದ್ದರು. ಅವರು ಶ್ರೇಷ್ಠ ಅನುಭಾವಿ, ಧ್ಯೇಯವಾದಿಗಳಾಗಿದ್ದರು. ಮೂಢನಂಬಿಕೆ, ಕಂದಾಚಾರ ವಿರುದ್ಧ ಸಿಡಿದೆದ್ದ ಏಕಮೇವ ಶರಣ ಎಂದು ನಗರದ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ಹೇಳಿದರು.ನಗರದ ಮಿನಿವಿಧಾನಸೌಧ ಅವರಣದಲ್ಲಿ ತಾಲ್ಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಅರಾಜಕತೆ ಎಬ್ಬಿಸುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳಿಗೆ ಇಂದು ಇಂಥ ಶರಣರ ವಚನಗಳು ಚಾಟಿಯೇಟು ನೀಡಬಲ್ಲವು ಎಂದರು.ಉಪನ್ಯಾಸಕರಾಗಿ ಇಲ್ಲಿಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಡಿ.ಆರ್. ಮಠಪತಿ ಶರಣರ ವಚನಗಳು ಸಾರ್ವಕಾಲಿಕ ಸತ್ಯ ತತ್ವ, ಮೌಲ್ಯಗಳನ್ನೊಳಗೊಂಡಿವೆ. ಜನಸಾಮಾನ್ಯರಿಗೆ ಮನ ಮುಟ್ಟುವ ವೈಚಾರಿಕ ಪ್ರಜ್ಞೆ ಜಾಗೃತ ಗೊಳಿಸುವ ವಚನಗಳ ಮೂಲಕ ಸಮಾಜ ತಿದ್ದಿದ್ದಾರೆ. ಇಂಥ ಮಹಾ ಶರಣರನ್ನು ಜಯಂತಿ ಆಚರಿಸಿ ಕೈ ಬಿಟ್ಟರೆ ಸಾಲದು ಅವರ ವಚನಗಳ ಸಾರವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.ಆಧ್ಯಾತ್ಮಿಕ ಚಿಂತನೆಗೆ ವಚನಗಳು ಇಡೀ ವಿಶ್ವಕ್ಕೆ ನೀಡಿದ ಅಪಾರ ಕೊಡುಗೆ ಎಂದರು.   ಜಿಲ್ಲಾ ಪಂಚಾಯಿತಿ ಸದಸ್ಯ ಸಾಹೇಬಗೌಡ ಪಾಟೀಲ ವಣಕಿಹಾಳ, ಬೆಳಗಾವಿ ರಾಣಿ ಚನ್ನಮ್ಮ ವಿ.ವಿ ಸಿಂಡಿಕೇಟ್ ಸದಸ್ಯ ವಿಠ್ಠಲ ಕೊಳ್ಳುರ, ಉದ್ಯಮಿ ಭೀಮರಾಯ ಸುಣಗಾರ, ಪಿಐ ಸಾಹೇಬಗೌಡ ಇದ್ದರು. ತಹಶೀಲ್ದಾರ್‌ ಜಿ.ಎಸ್.ಮಳಗಿ ಸ್ವಾಗತಿಸಿ, ಎಸ್.ಬಿ,.ಚೌಧರಿ ನಿರೂಪಿಸಿದರು.***

ಅಂಬಿಗರ ಚೌಡಯ್ಯ ಒಂದು ಜಾತಿಗೆ ಸೀಮಿತವಾಗಿರದೆ ಎಲ್ಲ ಧರ್ಮಗಳನ್ನು ಪ್ರೀತಿಸುತ್ತಿದ್ದರು. ಜನರಲ್ಲಿ ಮನೆ ಮಾಡಿದ ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದವರು.

-ಗಂಗೂಬಾಯಿ ಮಾನಕರ,
ಹೆಚ್ಚುವರಿ ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.