ಭಾನುವಾರ, ನವೆಂಬರ್ 17, 2019
27 °C

ನಿಸರ್ಗಧಾಮವೋ, ಸಮಸ್ಯೆಗಳ ತಾಣವೋ..

Published:
Updated:

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮವು ಪ್ರವಾಸಿಗರ ಆಕರ್ಷಣೀಯ ಸ್ಥಳ ಕೂಡ ಹೌದು. ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಇದು ತಂಪಾದ ತಾಣ ಕೂಡ ಆಗಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಕಾವೇರಿ ನಿಸರ್ಗಧಾಮವು ಬಿಸಿಲಿನ ಬೇಗೆಯ ತಾಣವಾಗಿದೆ. ಅಷ್ಟೇ ಅಲ್ಲ ಸಮಸ್ಯೆಗಳ ತಾಣವಾಗಿ ಮಾರ್ಪಡುತ್ತಿದೆ.ಕಾವೇರಿ ನಿಸರ್ಗಧಾಮಕ್ಕೆ ಪ್ರವೇಶಿಸಲು ಹೆದ್ದಾರಿಯಿಂದ ತಿರುಗುತ್ತಿದ್ದಂತೆ ನಮ್ಮನ್ನು ಗುಂಡಿ ಬಿದ್ದಿರುವ ರಸ್ತೆ ಸ್ವಾಗತಿಸುತ್ತದೆ. ಒಳಹೋದರೆ ಕುಡಿಯುವ ನೀರಿನ ಸೌಲಭ್ಯ ಸರಿಯಾಗಿಲ್ಲ. ಪ್ರವಾಸಿಗರಿಗಾಗಿ ಇಡೀ ನಿಸರ್ಗಧಾಮದಲ್ಲಿ ಮೂರು ಸ್ಥಳಗಳಲ್ಲಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಮೂರು ಕಡೆಗಳಲ್ಲೂ ಸ್ವಲ್ಪವೂ ಸ್ವಚ್ಛತೆಯಿಲ್ಲದೆ ನೀರು ಕುಡಿಯಲು ಮನಸ್ಸೂ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.ಇಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ನಿಸರ್ಗಧಾಮದೊಳಗೆ ಸಾಕಷ್ಟು ಕವಲುದಾರಿಗಳಿದ್ದು, ಯಾವ ದಾರಿಯಲ್ಲಿ ಪ್ರಾಣಿ ವೀಕ್ಷಣೆಗೆ ಹೋಗಬೇಕು, ಯಾವ ದಾರಿಯಲ್ಲಿ ಆನೆ ಸಫಾರಿಗೆ ತೆರಳಬೇಕು, ಪುನಃ ಯಾವ ದಾರಿಯಲ್ಲಿ ಹೊರಬರಬೇಕು ಎಂಬ ಒಂದೇ ಒಂದು ಮಾರ್ಗಸೂಚಿಗಳನ್ನು ಹಾಕಿಲ್ಲ. ಇದರಿಂದ ಹೊರ ರಾಜ್ಯಗಳಿಂದ ಬರುವ ಅಥವಾ ಮೊದಲ ಬಾರಿಗೆ ಇಲ್ಲಿಗೆ ಬರುವ ಪ್ರವಾಸಿಗರು ತಬ್ಬಿಬ್ಬಾಗಬೇಕಾದ ಸ್ಥಿತಿ ಎದುರಿಸುವಂತಾಗಿದೆ.ನಿಸರ್ಗಧಾಮದಲ್ಲಿ ಪ್ರಮುಖ ಆಕರ್ಷಣೆ ಬೋಟಿಂಗ್. ಇಲ್ಲಿಗೆ ಬಂದ ಪ್ರವಾಸಿಗರು ಸಾಮಾನ್ಯವಾಗಿ ಬೋಟಿಂಗ್ ಮಾಡಿಯೇ ಹೋಗುತ್ತಾರೆ. ಬೋಟಿಂಗ್ ಮಾಡುವ ಈ ಸ್ಥಳದಲ್ಲಿ 15 ರಿಂದ 20 ಅಡಿ ನೀರಿನ ಆಳವಿದೆ. ಆದರೆ ನೂರಾರು ಜನರು ಬೋಟಿಂಗ್ ಮಾಡುವ ಈ ಸ್ಥಳದಲ್ಲಿ ಒಬ್ಬ ಈಜು ತರಬೇತುದಾರನೂ ಇಲ್ಲ. ಆಕಸ್ಮಿಕವಾಗಿ ಯಾರಾದರು ಪ್ರವಾಸಿಗರು ನದಿಯಲ್ಲಿ ಮುಳುಗಿದರೆ. ರಕ್ಷಿಸಲು ಯಾರು ಇಲ್ಲ. ಹೀಗಾಗಿ ಸಂಬಂಧಿಸಿದ ಇಲಾಖೆಯು ಈಜು ತರಬೇತುದಾರನನ್ನು ನೇಮಿಸುವ ಅಗತ್ಯ ಇದೆ.ಬೋಟಿಂಗನ್ನು ವೀಕ್ಷಿಸಲು ನಿರ್ಮಿಸಿದ್ದ ವೇದಿಕೆ ಮುರಿದು ಹೋಗಿ ಯಾವುದೋ ಕಾಲವಾಗಿದೆ. ಅದನ್ನು ಸರಿ ಮಾಡಿಸುವ ಅಥವಾ ಮುರಿದು ಹೋಗಿರುವುದನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಅದು ಬೋಟಿಂಗ್ ಸ್ಥಳದ ಅಂದವನ್ನು ಇನ್ನಷ್ಟು ಕೆಡಿಸಿದೆ.ಶೌಚಾಲಯದ ವ್ಯವಸ್ಥೆಯನ್ನು ಹೆಸರಿಗೆ ಮಾತ್ರ ಕಲ್ಪಿಸಲಾಗಿದೆ. ಆದರೆ ಅವುಗಳ ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿವೆ. ಶೌಚಾಲಯಕ್ಕೆಂದು ಒಳ ಹೋಗುವುದಿರಲಿ ಅದರ ಪಕ್ಕದಲ್ಲಿ ಹಾದು ಹೋದರೆ ಸಾಕು, ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಒಣಗಿದ ಬಿದಿರು

ಇಡೀ ನಿಸರ್ಗಧಾಮದಲ್ಲಿ ತನ್ನ ಸೌಂದರ್ಯದ ಛಾಪು ಮೂಡಿಸಿದ್ದ ಬಿದಿರು ಪ್ರಕೃತಿದತ್ತವಾಗಿ ಒಣಗಿ ಹೋಗಿದೆ. ಹೀಗಾಗಿ ಇಲ್ಲಿನ ಬಿದಿರು ಕೂಡ ಸಂಪೂರ್ಣ ಒಣಗಿ ಹೋಗಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ನಿಸರ್ಗಧಾಮ ಬಿಸಿಲಿನಿಂದ ಬಣಗುಡುತ್ತಿದೆ.

ಇಲ್ಲಿ ಜಿಂಕೆಗಳ ಪ್ರಮಾಣ ಕೂಡ ಕಡಿಮೆಯಾಗಿದ್ದು, ಒಟ್ಟು 38 ಜಿಂಕೆಗಳಿವೆ. ಅವುಗಳಿಗೆ ದಿನವೊಂದಕ್ಕೆ 12 ಕೆ.ಜಿ. ಹುರುಳಿ ಹಾಕಲಾಗುತ್ತದೆ. ಹೀಗಾಗಿ ಈ ಜಿಂಕೆಗಳು ಪ್ರವಾಸಿಗರು ಕೊಡುವ ತಿಂಡಿಗಳಿಗಾಗಿ ಕಾದು ನಿಂತಿರುತ್ತವೆ.`ಇಲಾಖೆಯಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಅಲ್ಲದೆ ಪ್ರತಿ ದಿನ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಪ್ರವಾಸಿಗರಿಂದ ಲಕ್ಷಾಂತರ ಆದಾಯ ಇಲ್ಲಿ ಕ್ರೋಡೀಕರಣ ಆಗುತ್ತದೆ. ಆದರೂ ನಿಸರ್ಗಧಾಮವನ್ನು ಉತ್ತಮವಾಗಿ ಅಭಿವೃದ್ಧಿಗೊಳಿಸುವಲ್ಲಿ ಮತ್ತು ನಿರ್ವಹಣೆ ಮಾಡುವಲ್ಲಿ ಇಲಾಖೆಯು ಸೋತಿದೆ' ಎನ್ನುತ್ತಾರೆ ಪ್ರವಾಸಿಗರು.`ನಿರ್ವಹಣೆ ಮಾಡುತ್ತಿಲ್ಲ'

ನಿಸರ್ಗಧಾನವೆಂದರೆ ಪ್ರವಾಸಿಗರಿಗೆ ಒಂದು ಅದ್ಭುತವೆಂಬ ಕಲ್ಪನೆ ಇದೆ. ಆದರೆ ಇಲಾಖೆಯು ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಅದರ ಅಂದ ಕೆಡಿಸಿದೆ. ಸಾಕಷ್ಟು ಆದಾಯ ಬರುತ್ತಿದೆ ಆದರೂ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಕಲ್ಪಿಸಿಲ್ಲ.

-ಕುಸುಮ ಎಸ್. ರಾಜ್, ಪ್ರವಾಸಿಗರುಸಾಕಷ್ಟು ಅಭಿವೃದ್ಧಿಯಾಗಲಿ

ನಿಸರ್ಗಧಾಮವೆಂದರೆ ಅದೊಂದು ಅದ್ಭುತ ತಾಣಎಂದುಕೊಂಡಿದ್ದೆವು. ಕಾಡು ಕೂಡ ಹೆಚ್ಚಿನ ಪ್ರಮಾಣ ದಲ್ಲಿಲ್ಲ. ಇದಕ್ಕಿಂತ ನಮ್ಮಲ್ಲಿ ಹೆಚ್ಚು ಕಾಡು ಇದೆ. ಪ್ರಾಣಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಶೌಚಾಲಯ ಬಳಸಲು ಸಾಧ್ಯವೇ ಇಲ್ಲ. ಸಾಕಷ್ಟು ಅಭಿವದ್ಧಿಯಾಗಬೇಕು.

-ಸಿದೀಶ್,  ಪ್ರವಾಸಿಗ, ಕೇರಳಹಣ ಸುಲಿಗೆ..

ಇಲ್ಲಿ ಏನೆಲ್ಲಾ ಇದೆ ಎಂಬ ಕಲ್ಪನೆ ಮೇಲೆ ಬಂದೆವು. ಆದರೆ ಇಲ್ಲಿ ಯಾವುದೇ ಅಭಿವದ್ಧಿಯಾಗಿಲ್ಲ. ನೈಸರ್ಗಿಕವಾಗಿ ಇರುವ ಪರಿಸರದ ಸೌಂದರ್ಯವನ್ನು ವೀಕ್ಷಿಸಲು ಹಣ ಸುಲಿಗೆ ಮಾಡುತ್ತಾರೆ. ಇಲ್ಲಿಗೆ ಬಂದರೆ ಜೇಬು ಖಾಲಿಯಾಗುತ್ತದೆ ಅಷ್ಟೆ.                                     

-ನಾಸೀರ್‌ಖಾನ್, ಪ್ರವಾಸಿಗ, ಬೆಂಗಳೂರು

 

ಪ್ರತಿಕ್ರಿಯಿಸಿ (+)