ನಿಸರ್ಗ ಸ್ನೇಹಿ ಗಣಪ: ನೀವೇ ಮಾಡಿ ನೀವೇ ನೀರಿಗೆ ಬಿಡಿ

7

ನಿಸರ್ಗ ಸ್ನೇಹಿ ಗಣಪ: ನೀವೇ ಮಾಡಿ ನೀವೇ ನೀರಿಗೆ ಬಿಡಿ

Published:
Updated:
ನಿಸರ್ಗ ಸ್ನೇಹಿ ಗಣಪ: ನೀವೇ ಮಾಡಿ ನೀವೇ ನೀರಿಗೆ ಬಿಡಿ

ಬೆಂಗಳೂರು: ಬಂದೇ ಬಿಟ್ಟಿತು ಗಣೇಶ ಚತುರ್ಥಿ. ಗಣಪತಿ ಹಬ್ಬವೆಂದರೆ ಸಂಭ್ರಮ ಸಡಗರ. ಆದರೆ ಹಬ್ಬದ ನಂತರ ಕೆರೆಕಟ್ಟೆಗಳು, ಜಲಮೂಲಗಳು ಅನುಭವಿಸುವ ಯಾತನೆ ಒಂದೆರಡಲ್ಲ. ನೀರಲ್ಲಿ ಕರಗದ ರಾಸಾಯನಿಕ, ಇವುಗಳನ್ನು ತಿಂದು ಪ್ರಾಣ ಬಿಡುವ ಜಲಚರಗಳು, ಮಲಿನವಾಗುವ ನೀರು...ಇದಕ್ಕೆಲ್ಲ ಪರಿಹಾರ ಹುಡುಕಲು ಹೊರಟಿದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ. ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರ ಹಾಗೂ ಕರಕುಶಲ ಮಾರುಕಟ್ಟೆ ಹಾಗೂ ಸೇವಾ ವಿಸ್ತರಣಾ ಕೇಂದ್ರದ ಜತೆಗೂಡಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಕಾರ್ಯಾಗಾರವನ್ನು ಇದೇ 10ರಂದು ಹಮ್ಮಿಕೊಂಡಿದೆ.ಗಣಪನ ತಯಾರಿಗೆ ಸಾಮಾನ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನು ಬಳಸಲಾಗುತ್ತದೆ. ಆದರೆ ಇದು ನೀರಿನಲ್ಲಿ ಅತಿ ನಿಧಾನವಾಗಿ ಕರಗುವ ಹಾಗೂ ಪರಿಸರಕ್ಕೆ ಮಾರಕವಾದ ರಾಸಾಯನಿಕ ಉಗುಳುವ ಮಿಶ್ರಣ. ಇನ್ನು ಗಣಪತಿ ಅಲಂಕಾರಕ್ಕೆ ಬಳಸುವ ಬಣ್ಣಗಳು ಸೀಸ, ಕ್ರೋಮಿಯಂ, ಕ್ಯಾಡ್ಮಿಯಂ, ಪಾದರಸದಂತಹ ಅತಿ ಲೋಹಗಳಿಂದ ಕೂಡಿರುತ್ತವೆ.ಇವು ನೀರಿನಲ್ಲಿ ಬೆಳೆದ ಸಸ್ಯಗಳು, ಮೀನು, ಕಪ್ಪೆ, ಕ್ರಿಮಿ-ಕೀಟ, ಹಾವುಗಳ ಬದುಕಿನ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತವೆ. ಈ ಜಲಚರಗಳನ್ನು ತಿಂದು ಬದುಕುವ ಪಶುಪಕ್ಷಿಗಳಿಗೆ ಕೂಡ ರಾಸಾಯನಿಕಗಳ ಹಾವಳಿ ತಪ್ಪಿದ್ದಲ್ಲ.ಕೃತಕ ಬಣ್ಣ, ರಾಸಾಯನಿಕಗಳನ್ನು ಬಳಸಿ ಗಣಪನನ್ನು ತಯಾರಿಸುವವರಿಗೆ ಕೂಡ ತೊಂದರೆ ತಪ್ಪಿದ್ದಲ್ಲ. ಅಪಾರ ಪ್ರಮಾಣದಲ್ಲಿ ಬಣ್ಣಗಳ ಸಿಂಪಡಣೆ, ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸುವಿಕೆ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲವಾದರೂ ತೊಂದರೆಗಳನ್ನು ನಿರ್ಲಕ್ಷಿಸುವಂತಿಲ್ಲ ಎಂಬುದು ಪರಿಸರ ತಜ್ಞರು ನೀಡುವ ಎಚ್ಚರಿಕೆ.ಹಲಸೂರು, ಯಡಿಯೂರು, ಸ್ಯಾಂಕಿಕೆರೆ ಸೇರಿದಂತೆ ನಗರದ ಎಂಟು ಕೆರೆಗಳ ಪ್ರತ್ಯೇಕ ಕಲ್ಯಾಣಿಗಳಲ್ಲಿ ಗಣಪತಿ ವಿಸರ್ಜನೆ ಮಾಡಲು ಪ್ರತಿವರ್ಷ ಬಿಬಿಎಂಪಿ ಅನುವು ಮಾಡಿಕೊಡುತ್ತದೆ. ಆದರೆ ಕಲ್ಯಾಣಿಗಳಲ್ಲಿ ವಿಸರ್ಜನೆಯಿಂದ ಅಪಾರ ಹೂಳು ಸಂಗ್ರಹವಾಗಿ ಅದನ್ನು ಬೇರೆಡೆಗೆ ರವಾನಿಸುವಾಗಿನ ಚಿತ್ರಣವೇ ಬೇರೆ.`ಕರಗದ ಪ್ಲಾಸ್ಟಿಕ್, ಪೂಜಾ ಸಾಮಗ್ರಿಗಳು, ಅರೆಬರೆ ಕರಗಿದ ಬೃಹತ್ ಮೂರ್ತಿಗಳನ್ನು ಕಲ್ಯಾಣಿಯಿಂದ ಬೇರೆಡೆಗೆ ಸಾಗಿಸುವುದನ್ನು ಕಂಡಾಗ ಹಬ್ಬ ಬೇಕಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಅವುಗಳನ್ನು ಸಾಗಿಸುವಾಗ ಬೀರುವ ದುರ್ವಾಸನೆ ಕೂಡ ಅಧಿಕ. ಇದರ ಬದಲು ಚಿಕ್ಕ ಚಿಕ್ಕ ಮೂರ್ತಿಗಳನ್ನು ಪೂಜಿಸಿ ವಿಸರ್ಜಿಸಿದರೆ ಚೆನ್ನ ಅನ್ನಿಸುತ್ತದೆ~ ಎನ್ನುತ್ತಾರೆ ಯಡಿಯೂರು ಕೆರೆ ಸಮೀಪದ ನಿವಾಸಿ ಜವರೇಗೌಡ.ನಿಸರ್ಗ ಸ್ನೇಹಿ ಕಾರ್ಯಗಳಿಂದ ಪರಿಸರ ಮಾಲಿನ್ಯ ತಡೆಯಬಹುದು. ಹೀಗಾಗಿ ಜನಪ್ರಿಯ ದೇವತೆಯಾದ ಗಣೇಶನ ಮೂರ್ತಿ ತಯಾರಿಕೆ ಮೂಲಕವೇ ಪರಿಸರ ಜಾಗೃತಿ ಮೂಡಿಸಲು ಹೊರಟಿದೆ ಮಾಲಿನ್ಯ ನಿಯಂತ್ರಣ ಮಂಡಳಿ. ವಿವಿಧ ಶಿಕ್ಷಣ ಸಂಸ್ಥೆಗಳು, ಸ್ಕೌಟ್ ಗೈಡ್‌ಗಳು, ಎನ್‌ಸಿಸಿ ಕೆಡೆಟ್‌ಗಳು ಮಾತ್ರವಲ್ಲದೇ ಸರ್ಕಾರೇತರ ಸಂಸ್ಥೆಗಳನ್ನು ಕೂಡ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಾಗಾರದ ಕುರಿತು ಮಾಹಿತಿ ನೀಡಿದ ಮಂಡಳಿ ಅಧಿಕಾರಿಯೊಬ್ಬರು `ಕೇವಲ ಬೋಧನೆಯ ಬದಲು ಸ್ವತಃ ನಿಸರ್ಗ ಸ್ನೇಹಿ ಗಣಪನನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡುವುದು ಉಪಯುಕ್ತ. ವಿಶೇಷವಾಗಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.ಕಾರ್ಯಾಗಾರದಲ್ಲಿ ಪರಿಸರ ಹೋರಾಟಗಾರರು, ವಿಜ್ಞಾನಿಗಳು ವಿವಿಧ ಕ್ಷೇತ್ರಗಳ ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮೂರ್ತಿ ತಯಾರಿಕೆಯಿಂದ ಹಿಡಿದು ಮೂರ್ತಿ ವಿಸರ್ಜನೆವರೆಗೆ ತಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಅರಿವು ಮೂಡಿಸಲಾಗುತ್ತಿದೆ.ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರದ ತಜ್ಞರು ಪರಿಸರ ಸ್ನೇಹಿ ಗಣಪನ ತಯಾರಿಕೆ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕರಕುಶಲ ಮಾರುಕಟ್ಟೆ ಹಾಗೂ ಸೇವಾ ವಿಸ್ತರಣಾ ಕೇಂದ್ರ ಮೂರ್ತಿ ತಯಾರಿಕೆಯನ್ನು ಜನಪ್ರಿಯಗೊಳಿಸುವ ಹೊಣೆ ಹೊತ್ತಿದೆ. ಕೈಯಲ್ಲೇ ಮಾಡಬಹುದಾದ ಮೂರ್ತಿಗಳು ಹಾಗೂ ಅಚ್ಚಿನಲ್ಲಿ ತಯಾರಿಸಬಹುದಾದ ಮೂರ್ತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೂರ್ತಿ ತಯಾರಿಕೆಗೆ ಪಾಟರಿ ಟೌನ್, ಬೆಟ್ಟಹಲಸೂರಿನ ನಾರಾಯಣಪುರದಿಂದ ಮೂರ್ತಿ ತಯಾರಿಕೆಗೆ ಅಗತ್ಯವಾದ ಮಣ್ಣನ್ನು ತರಿಸಲಾಗುತ್ತಿದೆ.  ವಿಶೇಷವೆಂದರೆ ಮೂರ್ತಿ ತಯಾರಿಕೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸುವ ಬಗ್ಗೆ ಕೂಡ ಅರಿವು ಮೂಡಿಸಲಾಗುತ್ತದೆ. ರಂಗಮಲ್ಲಿ ಬೀಜ, ಅರಿಶಿನ, ಇಂಡಿಗೊ, ಮುತ್ತುಗದ ಹೂವು, ಬೀಡಾ ತಯಾರಿಕೆಯಲ್ಲಿ ಬಳಸಲಾಗುವ ಕಾಚು, ಚೀನಾ ಜೇಡಿ ಬಳಸಿ ಕ್ರಮವಾಗಿ ಕೇಸರಿ, ಹಳದಿ, ನೀಲಿ, ಕಡು ಹಳದಿ, ಕಂದು ಹಾಗೂ ಬಿಳಿ ಬಣ್ಣವನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ. ದತ್ತಾತ್ರೇಯ, `ಕಾರ್ಯಾಗಾರದಲ್ಲಿ ಭಾಗವಹಿಸುವವರು ಸ್ವತಃ ಮೂರ್ತಿಗಳನ್ನು ತಯಾರಿಸುವ ಅನುಭವ ಪಡೆಯಬಹುದಾಗಿದೆ~ ಎಂದರು. ನಿಮಗೆ ಮೂರ್ತಿ ತಯಾರಿಸುವಷ್ಟು ವ್ಯವಧಾನ ಇಲ್ಲವೇ?

ತೊಂದರೆ ಇಲ್ಲ. ನಿಸರ್ಗ ಸ್ನೇಹಿ ಗಣಪತಿಯ ಮೂರ್ತಿಗಳು ಎಲ್ಲಿ ದೊರೆಯುತ್ತವೆ ಎಂಬ ಮಾಹಿತಿ ಕೂಡ ಕಾರ್ಯಾಗಾರದಲ್ಲಿ ಲಭ್ಯವಿದೆ.`ಸರ್ಕಾರ ನೀತಿ ರೂಪಿಸಲಿ~

ರಾಸಾಯನಿಕಗಳನ್ನು ಬಳಸಿ ಗಣೇಶ ವಿಗ್ರಹಗಳನ್ನು ತಯಾರಿಸದಂತೆ ಸರ್ಕಾರ ನಿರ್ಬಂಧ ಹೇರಬೇಕಿದೆ. ಸರ್ಕಾರದ ವಿವಿಧ ಅಂಗಗಳು ಇದಕ್ಕೆ ಸ್ಪಷ್ಟ ನೀತಿ ರೂಪಿಸಬೇಕಿದೆ. ಇದು ಕೇವಲ ನಗರಕ್ಕೆ ಸೀಮಿತವಾಗದೆ ರಾಜ್ಯಮಟ್ಟದ ನಿಯಮ ಜಾರಿಯಾಗಬೇಕಿದೆ. ನಮ್ಮ ಸಂಪ್ರದಾಯ ಪರಿಸರಕ್ಕೆ ಹಾನಿಯಾಗುವಂತೆ ಇರಬಾರದು. ಈ ಬಗ್ಗೆ ಜನ ಕೂಡ ಎಚ್ಚರವಹಿಸುವುದು ಅಗತ್ಯ.

- ಸುರೇಶ್ ಹೆಬ್ಳೀಕರ್,ಇಕೊ ವಾಚ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry