ನಿಸ್ತ್ರಕ್ಯ: ವಿಶಿಷ್ಟ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್

6

ನಿಸ್ತ್ರಕ್ಯ: ವಿಶಿಷ್ಟ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್

Published:
Updated:

ಈಗಾಗಲೇ ಸಾವಿರಾರು ಮಾದರಿಯ ಕಾನ್ಸೆಪ್ಟ್ ಬೈಕ್ಗಳು ಬೀದಿಗಿಳಿದಿವೆ. ಆದರೆ, ವಿದ್ಯುತ್ ಚಾಲಿತ ಕಾನ್ಸೆಪ್ಟ್ ಬೈಕ್ ಬಂದಿರಲಿಲ್ಲ. ಈ ಕೊರತೆಯನ್ನೂ ನಾನು ತುಂಬಿದ್ದೇನೆ ಎನ್ನುತ್ತಿದ್ದಾರೆ ಮೈಸೂರಿನ ಸರಸ್ವತಿಪುರಂನ ನಿವಾಸಿ ಸಂತೋಷ್. ಸತತ ಒಂದೂವರೆ ವರ್ಷಗಳ ಕಾಲ ಶ್ರಮಿಸಿ ವಿನೂತನ ಮಾದರಿಯ `ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್' ಒಂದನ್ನು ಅವರು ತಯಾರಿಸಿದ್ದಾರೆ.ಇಡೀ ಪ್ರಪಂಚ ಒಪ್ಪಿಕೊಂಡ ವಸ್ತುವಿನ ಗುಣ, ಆಕಾರ, ನಡತೆ... ಎಲ್ಲವನ್ನೂ ಧಿಕ್ಕರಿಸಿ ಹೊಸ ರೂಪು ನೀಡುವುದು ಹುಚ್ಚು ಸಾಹಸವಲ್ಲದೆ ಮತ್ತೇನು? ತಂತ್ರಜ್ಞಾನಿ ತನ್ನ ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ಹೊರಟಾಗ ಸವಾಲುಗಳು ಒಂದೆರಡಲ್ಲ. ಇವೆಲ್ಲವನ್ನೂ ದಾಟಿದ ನಂತರ ಒಂದು ಕಾನ್ಸೆಪ್ಟ್ ವಾಹನ ತಯಾರಾಗುತ್ತದೆ. ವಾಹನವಲ್ಲದ ಈ ವಾಹನಗಳನ್ನು ಜಗತ್ತು ಒಪ್ಪಿಕೊಳ್ಳುವುಂತೆ ಮಾಡುವ ಷರತ್ತನ್ನೂ ಅದರ ನಿರ್ಮಾತೃ ಹೊರಬೇಕಾಗುತ್ತದೆ.ಮೈಸೂರಿನಂಥ ಸಾಂಸ್ಕೃತಿಕ ರಾಜಧಾನಿಯಲ್ಲೂ ತಾಂತ್ರಿಕ ಕಸರತ್ತು ನಿರಂತರವಾಗಿ ನಡೆದಿದೆ. ಈ ಸಂಸ್ಕೃತಿಯ ಸೀಮೆಗೆ ‘ಕಾನ್ಸೆಪ್ಟ್’ ಎಂಬ ತಾಂತ್ರಿಕ ಸ್ಪರ್ಶ ನೀಡಿದ್ದೇ ಮೆಕ್ಯಾನಿಕ್ ಸಂತೋಷ್. ಈ ಹಿಂದೆ ಜಗತ್ತಿನ ಅತ್ಯಂತ ಚಿಕ್ಕ ಬೈಕ್ (ಅದರ ಹೆಸರು ಮೂಷಿಕ) ತಯಾರಿಸಿ `ಲಿಮ್ಕಾ' ದಾಖಲೆ ನಿರ್ಮಿಸಿದ ಇವರು, ಈಗ ಇಂಥದ್ದೇ ಮತ್ತೊಂದು ತಾಂತ್ರಿಕ ಕಸರತ್ತಿಗೆ ಕೈಹಾಕಿದ್ದಾರೆ. ಅಚ್ಚರಿ ಎಂದರೆ ಈತ ಯಾವುದೇ ತಾಂತ್ರಿಕ ಅಥವಾ ಎಂಜಿನಿಯರಿಂಗ್ ಕೋರ್ಸ್ ಓದಿದವರಲ್ಲ. ಕೇವಲ ಪದವಿಪೂರ್ವ ಶಿಕ್ಷಣ ಪಡೆದಿದ್ದು, ಹವ್ಯಾಸಕ್ಕಾಗಿಯೇ ಇಂಥ ಸಂಶೋಧನೆಗೆ ಕೈಹಾಕಿದ್ದಾರೆ.ನಾಲ್ಕು ತುಂಡುಗಳ ‘ನಿಸ್ತ್ರಕ್ಯ’

ಕಬ್ಬಿಣದ ನಾಲ್ಕು ತುಂಡುಗಳು, ಎರಡು ಗಾಲಿ, ಒಂದು ಸೀಟು ಮತ್ತೊಂದಿಷ್ಟು ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಬಳಸಿ ಈ ‘ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್’ ತಯಾರಿಸಲಾಗಿದೆ. ಎಲ್ಲ ಬಿಡಿ ಭಾಗಗಳನ್ನೂ ಸಂತೋಷ್ ಮನೆಯಲ್ಲೇ ತಯಾರಿಸಿಕೊಂಡಿದ್ದಾರೆ. ಇದರ ಪೂರ್ಣ ತಯಾರಿಕೆಗೆ ಖರ್ಚಾಗಿರುವುದು ಕೇವಲ 60 ಸಾವಿರ ರೂಪಾಯಿ. ಒಮ್ಮೆ ಇದನ್ನು ಚಾರ್ಜ್ ಮಾಡಿದರೆ ಗರಿಷ್ಠ 30 ಕಿ.ಮೀ. ದೂರ ಕ್ರಮಿಸಬಹುದು. ಬೈಕಿಗೆ ಒಂದೇ ಸೀಟು ಇರುವುದರಿಂದ ಒಬ್ಬರು ಮಾತ್ರ ಇದರ ಮೇಲೆ ಸವಾರಿ  ಮಾಡಬಹುದು. ಮುಂದಿನ ಗಾಲಿಯ ವೃತ್ತಕೇಂದ್ರದಲ್ಲಿಯೇ ಬೈಕಿನ ಹ್ಯಾಂಡಲ್ ಹಾಗೂ ಹಿಂದಿನ ಗಾಲಿಯ ವೃತ್ತಕೇಂದ್ರದಲ್ಲಿ ಫೂಟ್‌ರೆಸ್ಟ್ ಅಳವಡಿಸಲಾಗಿದೆ. ಹಾಗಾಗಿ ಬೋರಲು ಮಲಗಿದ ಸ್ಥಿತಿಯಲ್ಲೇ ಈ ಬೈಕ್ ಓಡಿಸಬೇಕು.‘ಏರೋ ಡೈನಮಿಕ್ ಡಿಸೈನ್’ ಮಾದರಿಯಲ್ಲಿ ವಿಶಿಷ್ಟ ವಿನ್ಯಾಸ ನೀಡಲಾದ ಈ ಬೈಕಿಗೆ ‘ನಿಸ್ತ್ರಕ್ಯ’ ಎಂದು ಹೆಸರಿಟ್ಟಿದ್ದಾರೆ ಸಂತೋಷ್. ನಿಸ್ತ್ರಕ್ಯ ಸಂಸ್ಕೃತ ಪದವಾಗಿದ್ದು ‘ಅಸಾಧ್ಯವಾದುದು’ ಎಂಬ ಅರ್ಥ ಕೊಡುತ್ತದೆ. ವಿದ್ಯುತ್ ಚಾಲಿತ, ಕಡಿಮೆ ಖರ್ಚಿನ ಹಾಗೂ ಸರಳ ಮಾದರಿಯ ಬೈಕ್ ಇದು.  ಇದನ್ನು ನಿರ್ಮಾತೃ ಈಗಾಗಲೇ ರಸ್ತೆಯಲ್ಲಿ ಓಡಿಸಿದ್ದಾರೆ. ಕಾನ್ಸೆಪ್ಟ್ ಮೊಬೈಲ್, ಕಾನ್ಸೆಪ್ಟ್ ಕಾರುಗಳು ವೈವಿಧ್ಯಮಯ ಮಾದರಿಗಳು ಈಗಾಗಲೇ ಹೆಸರು ಮಾಡಿವೆ. ಆದರೆ, ವಿದ್ಯುತ್ ಚಾಲಿತ ಕಾನ್ಸೆಪ್ಟ್ ಬೈಕ್ ದೇಶದ ತಂತ್ರಜ್ಞಾನದ ಇತಿಹಾಸದಲ್ಲೇ ಮೊದಲ ಪ್ರಯೋಗ. ಇದರ ಡಿಸೈನ್ ಹಾಗೂ ಎಂಜಿನ್ ಮಾದರಿ ಅನುಸರಿಸಿ ಇನ್ನಷ್ಟು ಸಂಶೋಧನೆ ನಡೆಸಲೂ ಇದು ಮುನ್ನುಡಿಯಾಗಲಿದೆ ಎಂಬುದು ಸಂತೋಷ್ ಅವರ ಅಭಿಪ್ರಾಯ.ಈಗ ಖಾಸಗಿ ಕಂಪೆನಿಯೊಂದರಲ್ಲಿ ಮೆಕ್ಯಾನಿಕ್ ಆಗಿರುವ ಅವರಿಗೆ ಬೈಕಿನ ಗರ್ಭದಲ್ಲಿರುವ ಎಲ್ಲ ತಂತ್ರಜ್ಞಾನ ಪರಿಚಯವಾಗಿದ್ದು ಅವರ ತಂದೆ, ಮೆಕ್ಯಾನಿಕ್ ಜೀವಂಧರ್ ಅವರಿಂದ. ಇದಕ್ಕೂ ಮುಂಚೆ ಈತ ತಯಾರಿಸಿದ ಕೇವಲ 13 ಇಂಚು ಎತ್ತರದ ಪುಟಾಣಿ ಬೈಕ್ ಜಗತ್ತಿನ ಅತ್ಯಂತ ಚಿಕ್ಕ ಬೈಕ್ ಎಂದೇ ಹೆಸರಾಗಿದೆ. ಈ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಅವಿವಾಹಿತರಾಗಿರುವ 39 ವರ್ಷದ ಸಂತೋಷ್ ‘ಬೈಕೇ ನನ್ನ ಬಾಳಸಂಗಾತಿ’ ಎನ್ನುತ್ತಾರೆ. ನಿರಾಯಾಸವಾಗಿ ಓಡಿಸಬಹುದು

ಪೆಟ್ರೋಲ್ ರಹಿತ, ಪರಿಸರ ಸ್ನೇಹಿ ಬೈಕ್ ತಯಾರಿಸುವುದು ನನ್ನ ಕನಸಾಗಿತ್ತು. ನಮ್ಮ ದೇಶದಲ್ಲಿ ಇಂಥ ಸಂಶೋಧನೆಗಳಿಗೆ ಬೆಲೆ ಸಿಗುವುದಿಲ್ಲ. ನಾನು ತಯಾರಿಸಿದ ಪುಟಾಣಿ ಬೈಕ್ ಜಗತ್ತಿನ ಹಲವು ದೇಶಗಳ ಗಮನ ಸೆಳೆದಿದೆ. ಆದರೆ, ಇಲ್ಲಿನವರು ‘ಹುಚ್ಚು ಸಾಹಸ’ ಎನ್ನುತ್ತಾರೆ. ನನ್ನ ಶ್ರಮಕ್ಕೆ ನನ್ನ ದೇಶದಲ್ಲೇ ಬೆಲೆ ಸಿಗಲಿಲ್ಲ ಎಂಬ ಸಣ್ಣ ಕೊರಗು ಇದೆ. ಈಗ ತಯಾರಿಸಿದ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕನ್ನು ರಸ್ತೆಯಲ್ಲಿ ನಿರಾಯಾಸದಿಂದ ಓಡಿಸಬಹುದು. ನಾನು ಸಾಕಷ್ಟು ಸಾರಿ ಓಡಿಸಿದ್ದೇನೆ. ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ನನ್ನ ಪುಟ್ಟ ಕಾಣಿಕೆ ಇದು. ಇನ್ನಷ್ಟು ಕಾನ್ಸೆಪ್ಟ್‌ಗಳು ನನ್ನ ತಲೆಯಲ್ಲಿ ಗುಯ್ಗುಡುತ್ತಿವೆ. ಶ್ರಮಕ್ಕೆ ಬೆಲೆ ಸಿಕ್ಕರೆ ಅವುಗಳಿಗೂ ರೂಪು ನೀಡುತ್ತೇನೆ.

-ಸಂತೋಷ್, ಮೆಕ್ಯಾನಿಕ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry