ಗುರುವಾರ , ನವೆಂಬರ್ 14, 2019
19 °C

ನೀಗದ ಶಿಕ್ಷಕರ ಸಮಸ್ಯೆ; ಶಾಲೆಗೆ ಬೀಗ ಜಡಿದು ಪ್ರತಿಭಟನೆ

Published:
Updated:

ಮೊಳಕಾಲ್ಮುರು: ತಾಲ್ಲೂಕಿನ ಚಿಕ್ಕೋಬನಹಳ್ಳಿ ವಡ್ಡರಪಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ ಎಐಕೆಎಫ್ ಕಾರ್ಯಕರ್ತರು ಗುರುವಾರ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.ಶಾಲೆಯಲ್ಲಿ 1-7ನೇ ತರಗತಿ ತನಕ ಅಭ್ಯಾಸ ನಡೆಯುತ್ತಿದ್ದು, ಒಟ್ಟು 120 ವಿದ್ಯಾರ್ಥಿಗಳು ಇದ್ದಾರೆ. ಆದರೆ, ಒಬ್ಬ ಶಿಕ್ಷಕ ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು. ಗ್ರಾಮದಲ್ಲಿ ಹೆಚ್ಚಾಗಿ ಆರ್ಥಿಕ ಅಶಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರು ವಾಸವಿದ್ದಾರೆ. ಆದ್ದರಿಂದ, ಕೂಡಲೇ ವಿದ್ಯಾರ್ಥಿನಿಲಯ ಆರಂಭಿಸಬೇಕು, ಗ್ರಾಮಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ, ಬಿಆರ್‌ಸಿ ನಯೀಮುರ್ ರೆಹಮಾನ್, ಸಿಆರ್‌ಪಿ ರಾಮಚಂದ್ರಯ್ಯ `ತಕ್ಷಣವೇ ಒಬ್ಬ ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡುವ ಮೂಲಕ ಸಮಸ್ಯೆ ತಿಳಿಗೊಳಿಸಲಾಗಿದೆ ಎಂದು ಹೇಳಿದರು.ಸಾರಿಗೆ ಮತ್ತು ವಿದ್ಯಾರ್ಥಿನಿಲಯ ವ್ಯವಸ್ಥೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮನವಿ ಸ್ವೀಕರಿಸಿದ ಶಿರಸ್ತೇದಾರ್ ಮೈಲಾರಪ್ಪ ಭರವಸೆ ನೀಡಿದರು.ಸಿಪಿಐನ ಪಟೇಲ್,ಜಿ. ಪಾಪನಾಯಕ, ಎಐಕೆಎಫ್ ಅಧ್ಯಕ್ಷ ಪೆನ್ನಯ್ಯ, ಎಯುವೈಕೆಎಸ್‌ನ ನಾಗೇಂದ್ರ, ಖಲೀಂ, ನಾಗೇಶ್, ಜಾಫರ್ ಷರೀಫ್, ಮುಖಂಡರಾದ ಜಗಳೂರಯ್ಯ, ಮಲ್ಲಯ್ಯ, ಓಬಯ್ಯ ಇತರರು ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)