`ನೀಟ್' ಪರೀಕ್ಷೆ ಮುಂದಿನ ವರ್ಷದಿಂದ ಜಾರಿಗೆ ಆಗ್ರಹ

7

`ನೀಟ್' ಪರೀಕ್ಷೆ ಮುಂದಿನ ವರ್ಷದಿಂದ ಜಾರಿಗೆ ಆಗ್ರಹ

Published:
Updated:

ಶಿವಮೊಗ್ಗ: ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಅಗತ್ಯವಾದ `ನೀಟ್' ಪ್ರವೇಶ ಪರೀಕ್ಷೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದ ಮಹಾವೀರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.ಭಾರತೀಯ ವೈದ್ಯಕೀಯ ಮಂಡಳಿ (ಐಎಂಸಿ) ಉಸ್ತುವಾರಿಯಲ್ಲಿ ನೀಟ್ ನಡೆಯುತ್ತಿರುವುದರಿಂದ ಸಿಬಿಎಸ್‌ಇ ಪಠ್ಯಕ್ರಮದ ಅನ್ವಯವೇ ಪ್ರಶ್ನೆಪತ್ರಿಕೆ ಸಿದ್ಧಗೊಳಿಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಸಿಬಿಎಸ್‌ಇ ಪಠ್ಯಕ್ರಮ ಓದಿರುವ ವಿದ್ಯಾರ್ಥಿಗಳಿಗೆ ಇದು ಸುಲಭವಾಗಲಿದೆ. ಆದರೆ, ರಾಜ್ಯದಲ್ಲಿ ಶೇ 99ರಷ್ಟು ವಿದ್ಯಾರ್ಥಿಗಳು ಪಿಯು ಮಂಡಳಿ ಸಿದ್ಧಗೊಳಿಸಿರುವ ಪಠ್ಯಕ್ರಮ ಓದುತ್ತಿದ್ದಾರೆ. ಅವರಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅಸಾಧ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.2007ರಲ್ಲಿಯೇ `ನೀಟ್' ಪರೀಕ್ಷೆಯನ್ನು ಎದುರಿಸಲು ರಾಜ್ಯ ಸರ್ಕಾರವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ತಯಾರು ಮಾಡದೇ ನಿರ್ಲಕ್ಷ್ಯ ವಹಿಸಿದೆ. 2011ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2013ರಲ್ಲಿ ರಾಜ್ಯಮಟ್ಟದ ಸಿ.ಇ.ಟಿ. ಪರೀಕ್ಷೆ ನಡೆಸುತ್ತೇವೆ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರ ವಾಗ್ದಾನ ಮಾಡಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ದೂರಿದರು.ರಾಜ್ಯ ಸರ್ಕಾರ ಈ ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ, ಹೈಕೋರ್ಟ್‌ಗೆ ವಿದ್ಯಾರ್ಥಿಗಳ ಹಿತಕಾಯುವುದಾಗಿ ಪ್ರಮಾಣಪತ್ರ ಸಲ್ಲಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ  ಮೇಲ್ಮನವಿ ಸಲ್ಲಿಸಬೇಕು ಎಂದು ಪ್ರತಿಭಟನಾಕರರು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ರಾವಣೀಕರ್, ಜಿಲ್ಲಾ ಘಟಕ ಅಧ್ಯಕ್ಷ ಸಿ.ಜೆ. ಮಧುಸೂದನ್, ಮಾಜಿ ಅಧ್ಯಕ್ಷ ಕೆ. ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ, ಎನ್‌ಎಸ್‌ಯುಐ ಪದಾಧಿಕಾರಿಗಳಾದ ಚೇತನ್, ಶ್ರೀಜಿತ್, ಪ್ರಮೋದ್, ಲೋಕೇಶ್ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry