ಶುಕ್ರವಾರ, ಮೇ 7, 2021
26 °C

ನೀಡದ ನಿವೇಶನ: ಬಂಧನ ವಾರೆಂಟ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರ್ಜಿದಾರರೊಬ್ಬರಿಗೆ ನಿವೇಶನ ನೀಡದ ಹಿನ್ನೆಲೆಯಲ್ಲಿ ಹಣ ವಾಪಸು ಮಾಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ವರೆಗೂ ಅರ್ಜಿ ಸಲ್ಲಿಸಿ ಸೋತರೂ ಹಣ ವಾಪಸು ಮಾಡದ ಬಸವನಗುಡಿ ಬಳಿಯ `ಕೇಂದ್ರ ಉಪಾಧ್ಯಾಯರ ಸಂಘ~ದಕಾರ್ಯದರ್ಶಿಗೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.

ನಿವೇಶನಕ್ಕಾಗಿ ಮರಿಸ್ವಾಮಿ ಎನ್ನುವವರು ನೀಡಿದ್ದ ಹಣವನ್ನು ಅವರಿಗೆ ವಾಪಸು ಮಾಡುವಂತೆ 3ನೇ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶ ಪ್ರಶ್ನಿಸಿ ರಾಜ್ಯ ಗ್ರಾಹಕರ ವೇದಿಕೆ, ಅಲ್ಲಿಂದ ರಾಷ್ಟ್ರೀಯ ಗ್ರಾಹಕರ ವೇದಿಕೆ, ಅಲ್ಲಿಂದ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿ ಸೋತ ಸಂಘದ ಪ್ರಕರಣ ಇದಾಗಿದೆ.

ಹಣ ವಾಪಸು ಮಾಡದ ಹಿನ್ನೆಲೆಯಲ್ಲಿ ಕಾರ್ಯದರ್ಶಿಯನ್ನು ಬಂಧಿಸಿ ಇದೇ 20ರಂದು 3ನೇ ಹೆಚ್ಚುವರಿ ಜಿಲ್ಲಾಗ್ರಾಹಕರ ವೇದಿಕೆ ಮುಂದೆ ಹಾಜರುಪಡಿಸುವಂತೆ ವೇದಿಕೆಯು ನಗರ ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶನ ನೀಡಿದೆ.

ಪ್ರಕರಣ ವಿವರ: ಉತ್ತರಹಳ್ಳಿ ಹೋಬಳಿಯ ಜರಗನಹಳ್ಳಿಯಲ್ಲಿ ನಿವೇಶನ ನೀಡುವುದಾಗಿ ಸಂಘ ಅರ್ಜಿದಾರರಿಗೆ ವಾಗ್ದಾನ ಮಾಡಿತ್ತು. ಈ ಸಂಬಂಧ ಅರ್ಜಿದಾರರು 1993ರಲ್ಲಿ 81ಸಾವಿರ ರೂಪಾಯಿಗಳನ್ನು ನೀಡಿದ್ದರು. ಆದರೆ 17 ವರ್ಷ ಕಳೆದರೂ ನಿವೇಶನ ಮರಿಸ್ವಾಮಿ ಅವರ ಕೈ ಸೇರಲಿಲ್ಲ. ನಿವೇಶನ ನೀಡುವಂತೆ ಅವರು ಮಾಡಿಕೊಂಡ ಮನವಿಗಳಿಗೆ ಸಂಘ ಸ್ಪಂದಿಸಲಿಲ್ಲ.

ಇದರಿಂದ ಬೇಸತ್ತ ಅವರು ಸಂಘದ ವಿರುದ್ಧ 2010ರಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.

1993ರಿಂದ ಅನ್ವಯ ಆಗುವಂತೆ ಶೇ 12ರ ಬಡ್ಡಿದರದಲ್ಲಿ ಅರ್ಜಿದಾರರ ಹಣ ವಾಪಸು ಮಾಡುವಂತೆ    ಹಾಗೂ ಮಾನಸಿಕ ಹಿಂಸೆ ನೀಡಿದ್ದಕ್ಕೆ 50 ಸಾವಿರ   ರೂಪಾಯಿ ಪರಿಹಾರ ನೀಡುವಂತೆ ವೇದಿಕೆ ಸಂಘಕ್ಕೆ      ಆದೇಶಿಸಿತ್ತು.

ಈ ಆದೇಶವನ್ನು ರಾಜ್ಯ ಹಾಗೂ ರಾಷ್ಟ್ರೀಯ ವೇದಿಕೆಗಳು ಎತ್ತಿ ಹಿಡಿದಿದ್ದವು. ಸುಪ್ರೀಂಕೋರ್ಟ್ ಕೂಡ ಸಂಘವನ್ನು ತೀವ್ರ ತರಾಟೆಗೆ ತೆಗೆದುಕೊಂಡು 50 ಸಾವಿರ ರೂಪಾಯಿಗಳ ದಂಡ ಕೂಡ ವಿಧಿಸಿತ್ತು.  ಆದರೆ ಸಂಘ ಮಾತ್ರ ಆದೇಶದ ಪಾಲನೆ ಮಾಡಲಿಲ್ಲ.

ಪರಿಹಾರಕ್ಕೆ ಆದೇಶ

ದ್ವಿಚಕ್ರ ವಾಹನ ಮಾರಾಟ ಸಂದರ್ಭದಲ್ಲಿ ವಾಹನಕ್ಕೆ ದೋಷಪೂರಿತ ಬ್ಯಾಟರಿ ಅಳವಡಿಸಿ ಮಹಿಳೆಯೊಬ್ಬರಿಗೆ ತೊಂದರೆ ನೀಡಿದ ಕಾರಣಕ್ಕೆ ದೊಮ್ಮಲೂರು ಬಳಿಯ `ಹೈಕು ಮೋಟಾರ್ಸ್‌ ಲಿಮಿಟೆಡ್~ ಕಂಪೆನಿಗೆ 10 ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಕೋರಮಂಗಲದ ನಿವಾಸಿ ಮೀನಾಕುಮಾರಿ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

30 ದಿನಗಳ ಒಳಗೆ ಪರಿಹಾರ ನೀಡುವಂತೆ ಹಾಗೂ ಯಾವುದೇ ದೋಷವಿಲ್ಲದ ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸುವಂತೆ ವೇದಿಕೆ ಕಂಪೆನಿಗೆ ನಿರ್ದೇಶಿಸಿದೆ.

ಮೀನಾ ಅವರು `ಡಿಯೋ~ ಕಂಪೆನಿಯ ದ್ವಿಚಕ್ರ ವಾಹನವನ್ನು 2010ರ ಜನವರಿಯಲ್ಲಿ ಖರೀದಿ ಮಾಡಿದ್ದರು. ವಾಹನದ `ಸೆಲ್ಫ್  ಸ್ಟಾರ‌್ಟರ್~ ಸಮಸ್ಯೆ ಆರಂಭದಿಂದಲೇ ಕಾಣಿಸಿಕೊಂಡಿತು.

ಈ ಬಗ್ಗೆ ಕಂಪೆನಿಯಲ್ಲಿ ವಿಚಾರಿಸಿದಾಗ, ವಾಹನದ ಸರ್ವಿಸ್ ಆದ ಬಳಿಕ ಕ್ರಮೇಣ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು. ಇದನ್ನು ನಂಬಿದ ಅರ್ಜಿದಾರರು ಕಾಲಕಾಲಕ್ಕೆ ಸರ್ವಿಸ್ ಮಾಡಿಸಿದರು. ಆದರೆ ಸಮಸ್ಯೆ   ಮಾತ್ರ ಬಗೆಹರಿಯಲಿಲ್ಲ. ಬ್ಯಾಟರಿಗೆ ಇದ್ದ ಒಂದು ವರ್ಷದ ವಾರೆಂಟಿ ಅವಧಿ ಮುಗಿಯಿತು.

ಆದರೆ ಬ್ಯಾಟರಿ ಪದೇ ಪದೇ ಕೈಕೊಡುತ್ತಿತ್ತು. ಮಾರಾಟ ಸಂದರ್ಭದಲ್ಲಿಯೇ ಅವಧಿ ಮುಗಿದ ಬ್ಯಾಟರಿ ನೀಡಿರುವುದು ತಜ್ಞರ ಬಳಿ ಪರೀಕ್ಷೆ ನಡೆಸಿದಾಗ ತಿಳಿದುಬಂತು. ತಮಗೆ ಹೊಸ ಬ್ಯಾಟರಿಯನ್ನು ಉಚಿತವಾಗಿ ನೀಡುವಂತೆ ಅವರು ಕಂಪೆನಿಯನ್ನು ಕೋರಿದರು. ಆದರೆ ಅವರ ಮನವಿಗೆ   ಕಂಪೆನಿ ಸ್ಪಂದಿಸಲಿಲ್ಲ.

ಬ್ಯಾಟರಿ ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ತಾವು ಸ್ವಯಂಚಾಲನಾ ವ್ಯವಸ್ಥೆ ಬಳಸಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿ ಮೀನಾ ವೇದಿಕೆ ಮೊರೆ ಹೋದರು. ವಾಹನ ಸರಿಯಾದ ಮೈಲೇಜ್ ಕೂಡ ನೀಡುತ್ತಿಲ್ಲ. ಪ್ರತಿ ಬಾರಿ ಸರ್ವಿಸ್‌ಗೆ ನೀಡಿದಾಗಲೂ ವಾಹನದ ಬಲ್ಬ್ ಕೆಟ್ಟು ಹೋಗಿದೆ ಎಂದು ಹೇಳಿ ಪರ್ಯಾಯ ಬಲ್ಬ್ ಅಳವಡಿಸಲಾಗುತ್ತಿದೆ. ಇದರಿಂದಲೂ ತಮಗೆ ತುಂಬಾ ಹಿಂಸೆಯಾಗಿದೆ ಎಂದೂ ಅವರು ದೂರಿದ್ದರು.

ವೇದಿಕೆಯಲ್ಲಿ ದೂರು ದಾಖಲಾದ ನಂತರ ಕಂಪೆನಿಗೆ ನೋಟಿಸ್ ಜಾರಿ ಮಾಡಿದರೂ, ಅದನ್ನು ಪ್ರತಿನಿಧಿಸಲು ಯಾರೂ ಹಾಜರು ಆಗಲಿಲ್ಲ.

ಕಂಪೆನಿಯ ಅನುಪಸ್ಥಿತಿಯಲ್ಲಿಯೇ ದೂರಿನ ವಿಚಾರಣೆ ನಡೆಸಿದ ವೇದಿಕೆಯು,  ಕಂಪೆನಿ ಕರ್ತವ್ಯಲೋಪ ಎಸಗಿದೆ ಎಂದು  ಅಭಿಪ್ರಾಯಪಟ್ಟು ಪರಿಹಾರ ನೀಡಲು ಆದೇಶಿಸಿದೆ.

ವಿಮಾ ಕಂಪೆನಿಗೆ ದಂಡ

ವಾಹನ ಅಪಘಾತದ ವಿಮೆ ಹಣವನ್ನು ನೀಡದ `ಬಜಾಜ್ ಅಲಯನ್ಸ್~ ವಿಮಾ ಕಂಪೆನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ. ಈ ಹಣವನ್ನು ಪರಿಹಾರದ ರೂಪದಲ್ಲಿ ಉತ್ತರಹಳ್ಳಿ ನಿವಾಸಿ ಬಿ.ವಿ.ನಾಗೇಶ್ ಅವರಿಗೆ ನೀಡುವಂತೆ ಆದೇಶಿಸಲಾಗಿದೆ.

ನಾಗೇಶ್ ಅವರು ವಾಹನಕ್ಕೆ 2008ರ ಜೂನ್‌ನಲ್ಲಿ ವಿಮೆ ಮಾಡಿಸಿದ್ದರು. ಅದೇ ಸಾಲಿನಲ್ಲಿ ವಾಹನ ಅಪಘಾತಕ್ಕೆ ಈಡಾಯಿತು.

ವಿಮೆ ಹಣ ನೀಡುವಂತೆ ಅವರು ಕಂಪೆನಿಯನ್ನು ಕೋರಿದರು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಿದ್ದರೂ, ದಾಖಲೆ ನೀಡಿಲ್ಲ ಎಂಬ ನೆಪವೊಡ್ಡಿ ಕಂಪೆನಿಯು ಅವರಿಗೆ ವಿಮೆ ಹಣ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋಗಿದ್ದರು.

ವಾಹನದ ರಿಪೇರಿಗೆಂದು ಖರ್ಚು ಮಾಡಲಾದ 1.49 ಲಕ್ಷ ರೂಪಾಯಿಗಳನ್ನು 10 ಸಾವಿರ ರೂಪಾಯಿ ಪರಿಹಾರ ಸೇರಿಸಿ ಅರ್ಜಿದಾರರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.