ನೀತಿಸಂಹಿತೆ: ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

7

ನೀತಿಸಂಹಿತೆ: ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

Published:
Updated:

ಚಿತ್ರದುರ್ಗ: ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಆರು ಸ್ಥಾನಗಳ ಭರ್ತಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಮೇ 9ರಿಂದ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ (ಜೂನ್ 15 ರವರೆಗೆ) ನೀತಿಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಆಗ್ನೇಯ ಶಿಕ್ಷಕರ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾದರಿ ನೀತಿಸಂಹಿತೆ ಜಾರಿ ಕುರಿತಂತೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯತ್ತಿರುವ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪ್ರದೇಶಗಳಿಗೂ ನೀತಿ ಸಂಹಿತೆ ಅನ್ವಯವಾಗುತ್ತದೆ. ಚುನಾವಣಾ ಆಯೋಗವು ಮಾದರಿ ನೀತಿಸಂಹಿತೆಯಲ್ಲಿ ಹೊರಡಿಸಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದರು.ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ ಜಾರಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಈ ಸಂಬಂಧ ಹಣವನ್ನು ಪಾವತಿಸಲು ನೀತಿಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡುವಂತಿಲ್ಲ. ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳು, ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಯಾವುದೇ ಸಭೆಗಳನ್ನು ನಡೆಸುವಂತಿಲ್ಲ.

 

ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭ ನಡೆಸಲು ನೀತಿಸಂಹಿತೆ ಅಡ್ಡಿ ಇಲ್ಲ. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ನಡೆಸುವಂತಿಲ್ಲ. ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ.ಮಂತ್ರಿಗಳು ಅಥವಾ ಶಾಸಕರು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.ಚುನಾಯಿತ ಪ್ರತಿನಿಧಿಗಳು, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಿಗೆ ಒದಗಿಸಿರುವ ಸರ್ಕಾರಿ ವಾಹನಗಳನ್ನು ಚುನಾವಣೆ ಸಭೆಗಳಿಗೆ ತೆರಳಲು, ಚುನಾವಣೆ ಪ್ರಚಾರಕ್ಕೆ ಬಳಸುವಂತಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ಭಾವಚಿತ್ರಗಳ ಒಳಗೊಂಡ ಭಿತ್ತಿಪತ್ರ, ಬ್ಯಾನರ್, ಕಟೌಟ್, ಬೋರ್ಡಿಂಗ್ ಇತ್ಯಾದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ ವಾಹನ, ಕೆಎಸ್‌ಆರ್‌ಟಿಸಿ ವಾಹನಗಳಿಗೆ ಅಂಟಿಸಬಾರದು. ಸರ್ಕಾರಿ ಕಟ್ಟಡಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.ಕಳ್ಳಭಟ್ಟಿ, ಅಕ್ರಮ ಮದ್ಯ ದಾಸ್ತಾನು ಮತ್ತು ಹಂಚುವಿಕೆ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಿ ಇದನ್ನು ತಡೆಗಟ್ಟಲು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಜಿಲ್ಲಾಧಿಕಾರಿ ತಿಳಿಸಿದರು.

 ಚುನಾವಣಾ ವೇಳಾಪಟ್ಟಿಯಂತೆ ಮೇ 16ರಂದು ಚುನಾವಣೆ ವೇಳಾಪಟ್ಟಿ ಅಧಿಸೂಚನೆ ಆರಂಭಗೊಳ್ಳುವುದು.ಮೇ 16ರಿಂದ ಮೇ 23ರವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಮೇ 24ರಂದು ನಾಮಪತ್ರಗಳ ಪರಿಶೀಲನೆ, ಮೇ 26ರಂದು ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾಗಿದೆ. ಜೂನ್ 10ರಂದು ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ. ಜೂನ್ 13ರ ಬೆಳಿಗ್ಗೆ 8ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ, ಜಿಲ್ಲಾಮಟ್ಟದ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ

ಮಾದರಿ ನೀತಿ ಸಂಹಿತೆ ಮೇ 9ರಿಂದ ಜಾರಿಯಾಗಿದ್ದರೂ ಜಿಲ್ಲಾಡಳಿತ ತಡವಾಗಿ ಎಚ್ಚೆತ್ತುಕೊಂಡಿದೆ.

ಸೋಮವಾರ ಪ್ರವಾಸಿ ಮಂದಿರದ ಮುಂದಿನ ಗೇಟ್ ಮುಚ್ಚಲಾಯಿತು. ಈ ವೇಳೆಗೆ ಯುವಕಾಂಗ್ರೆಸ್ ಮುಖಂಡರು ಅಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು.ಜತೆಗೆ ವಿಧಾನ ಪರಿಷತ್ ಸದಸ್ಯರು ಸಹ ಸಾರ್ವಜನಿಕರ ಸಮಸ್ಯೆಗಳನ್ನು ಅಲ್ಲಿಯೇ ಆಲಿಸುತ್ತಿದ್ದರು. ಜತೆಗೆ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಫ್ಲೆಕ್ಸ್‌ಗಳನ್ನು ಸಹ ಇದುವರೆಗೆ ತೆಗೆದುಹಾಕಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry