ಗುರುವಾರ , ನವೆಂಬರ್ 14, 2019
18 °C

ನೀತಿಸಂಹಿತೆ: ಜಾತ್ರೆಗೂ `ಕಂಟಕ'

Published:
Updated:

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆಯ ಕಾರಣದಿಂದ ಹಲವಾರು ಜಾತ್ರಾ ಮಹೋತ್ಸವಗಳನ್ನು ಮುಂದೂಡಲಾಗಿದ್ದು, ಈ ನಿರ್ಧಾರ ಭಕ್ತರ ಬೇಸರಕ್ಕೆ ಕಾರಣವಾಗಿದೆ.ಪ್ರತಿವರ್ಷ ಯುಗಾದಿ ಹಬ್ಬ ಕಳೆದು 15 ದಿನಗಳಿಗೆ ಹದ್ದಿಗಾನಹಳ್ಳಿಯ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯುತ್ತಿತ್ತು. ಸುತ್ತಮುತ್ತಲ 7 ಹಳ್ಳಿಗಳ ಜನರು ಹಾಗೂ ಸಂಬಂಧಿಕರು ಒಂದೆಡೆ ಕಲೆತು ಆಚರಿಸುತ್ತಿದ್ದ ಈ ಜಾತ್ರೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಇಲ್ಲಿನ ಜಾತ್ರೆಯನ್ನು ಮುಂದೂಡಲಾಗಿದೆ.ಈ ಬಗ್ಗೆ ಪಟಾಲಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಅಜ್ಜಪ್ಪ ಪ್ರತಿಕ್ರಿಯಿಸಿ, ಪೂರ್ವಿಕರ ಕಾಲದಿಂದ ಪ್ರತಿವರ್ಷ ಕ್ಲಪ್ತ ಸಮಯದಲ್ಲಿ ಈ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದೆವು. ಈ ಹಿಂದೆ ಜಾತ್ರೆಯನ್ನು ಮುಂದೂಡಿದ ಉದಾಹರಣೆ ಇಲ್ಲ. ಈ ಸಲ ನೀತಿಸಂಹಿತೆಯ ನೆಪ ಒಡ್ಡಿ ಅನುಮತಿ ನಿರಾಕರಿಸಲಾಗಿದೆ. ಉತ್ಸವಗಳಿಗೆ ಚುನಾವಣೆ ಅಡ್ಡ ಬಂದರೆ ಹೇಗೆ? ಎಂದು ಪ್ರಶ್ನಿಸಿದರು.ಯುಗಾದಿಯ ನಂತರ ಹೊಸ ದಿನಗಳು ಆರಂಭವಾಗುವುದರಿಂದ ಅದೇ ಸಮಯದಲ್ಲಿ ಜಾತ್ರೆ ನಡೆಸಲು ಸೂಕ್ತ ಸಮಯವಾಗಿರುತ್ತಿತ್ತು. ಆದರೆ, ಈ ಬಾರಿ ಮೇ 15ರಂದು ಜಾತ್ರೆಯನ್ನು ನಡೆಸಲು ನಿರ್ಧರಿಸಲಾಗಿದ್ದು, ಆಗ ಯಾವ ರೀತಿ ಜಾತ್ರೆ ನಡೆಯಬಹುದು ಎಂಬ ಕುತೂಹಲವಿದೆ ಎಂದು ತಿಳಿಸಿದರು.ಬೆಟ್ಟಹಲಸೂರು ಗ್ರಾಮದಲ್ಲಿ ಏಪ್ರಿಲ್ 29 ರಿಂದ ಮೇ 1ರವರೆಗೆ ನಡೆಯಬೇಕಾಗಿದ್ದ ಮುತ್ಯಾಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನೂ ಮುಂದೂಡಲಾಗಿದ್ದು, ಮೇ 27 ರಿಂದ 30ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.ಈ ಬಗ್ಗೆ ಕಾಕೋಳು ಲಕ್ಕಪ್ಪ ಪ್ರತಿಕ್ರಿಯಿಸಿ, ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಕೆಲವು ಹಳ್ಳಿಗಳಲ್ಲಿ ಜಾತ್ರಾ ಮಹೋತ್ಸವಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಪೌರಾಣಿಕ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡದ ಕಾರಣದಿಂದ ಕಾರ್ಯಕ್ರಮಗಳನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ನೀತಿಸಂಹಿತೆಯ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯ ಎಸಗಿದಂತಾಗುತ್ತಿದೆ ಎಂದು ಆರೋಪಿಸಿದರು.ಪೌರಾಣಿಕ ನಾಟಕ ಪ್ರದರ್ಶಿಸಲು ಕಲಾವಿದರು 6 ತಿಂಗಳ ಹಿಂದಿನಿಂದಲೇ ಅಭ್ಯಾಸ ನಡೆಸಿಕೊಂಡು ಬಂದಿರುತ್ತಾರೆ. ಜೊತೆಗೆ ನಾಟಕದ ವೇಷಭೂಷಣಗಳಿಗೆ  ಮುಂಗಡವಾಗಿ ಕೊಟ್ಟಿರುವ ಹಣವೂ ನಷ್ಟವಾಗಲಿದೆ. ಈ ದಿಸೆಯಲ್ಲಿ ನಿರ್ದಿಷ್ಟ ಷರತ್ತುಗಳನ್ನು ವಿಧಿಸಿ, ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.ಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪಿ.ಎಸ್. ಕಾಂತರಾಜು ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, ಮಾದರಿ ನೀತಿಸಂಹಿತೆ ಜಾರಿಯಲ್ಲಿರುವಾಗ ಜಾತ್ರಾ ಮಹೋತ್ಸವಗಳನ್ನು ನಿಲ್ಲಿಸಬೇಕೆಂದು ಚುನಾವಣಾ ಆಯೋಗ ಅಥವಾ ಆಯುಕ್ತರು ಎಲ್ಲಿಯೂ ಆದೇಶ ಹೊರಡಿಸಿಲ್ಲ.ಅಂತಹ ಸಂದರ್ಭದಲ್ಲಿ ರಾಜಕಾರಣಿಗಳ ಪ್ರವೇಶವಾಗಿ ಮತದಾರರ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆಗಳಿರುವುದರಿಂದ ಕೆಲವು ನಿಬಂಧನೆಗಳಿಗೆ ಒಳಪಟ್ಟು ಅನುಮತಿ ನೀಡಲಾಗುತ್ತಿದೆ ಎಂದರು.

ಪ್ರತಿಕ್ರಿಯಿಸಿ (+)