ಶುಕ್ರವಾರ, ನವೆಂಬರ್ 15, 2019
26 °C

ನೀತಿಸಂಹಿತೆ ನೆಪದಲ್ಲಿ ಕಿರುಕುಳ: ವ್ಯಾಪಾರಸ್ಥರ ಆರೋಪ

Published:
Updated:

ಧಾರವಾಡ: `ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಂತೆ ನೀತಿಸಂಹಿತೆಯನ್ನು ಜಾರಿಗೊಳಿಸಿರುವುದರಿಂದ ಬಟ್ಟೆ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿದರೂ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸುಮಾರು 6.5 ಲಕ್ಷ ಮೌಲ್ಯದ 399 ಸೀರೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ' ಎಂದು ಧಾರವಾಡ ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲಲಿತ್ ಭಂಡಾರಿ ಆರೋಪಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮದುವೆ ಕಾರ್ಯಗಳು ಜಾಸ್ತಿ ಇರುತ್ತದೆ. ಈ ಉದ್ದೇಶದಿಂದ ಕಳೆದ 14 ರಂದು ಕಾಮತ್ ಟೂರಿಸ್ಟ್ ವಾಹನದಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ ಮೆಹತಾ ಸಾಡಿ ಕೇಂದ್ರ, ಲಲಿತ ಸಾರಿ ಸೆಂಟರ್ ಮತ್ತು ಎಸ್.ಕೆ.ಕ್ರಿಯೇಶನ್ ಅಂಗಡಿಗಳಿಗೆ ಸಂಬಂಧಪಟ್ಟ ಸೀರೆಗಳನ್ನು ತರಿಸಲಾಗುತ್ತಿತ್ತು. ಆದರೆ, ನೀತಿಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರಾದ ಚಂದ್ರಕಾಂತ ಲೋಕರೆ ಹಾಗೂ ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್ ಗುರು ಮುತ್ತೂರ ವಾಹನವನ್ನು ತಡೆಹಿಡಿದು ಬೆಲೆಬಾಳುವ ಸೀರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಬಟ್ಟೆ ವ್ಯಾಪಾರಕ್ಕೆ ಸಂಬಂಧಪಟ್ಟ ಮತ್ತು ಬಟ್ಟೆ ರವಾನೆಗೆ ಸಂಬಂಧಪಟ್ಟ ಸೂಕ್ತ ದಾಖಲಾತಿಗಳನ್ನು ತೋರಿಸಿದರೂ ಸಹಿತ ಅಧಿಕಾರಿಗಳು ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ವ್ಯಾಪಾರಸ್ಥರಿಗೆ ಸೂಕ್ತ ನ್ಯಾಯ ಒದಗಿಸಿ ಸೀರೆಗಳನ್ನು ಬಿಡಿಸಿಕೊಡಬೇಕು' ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಮೋಹನ ಓಸವಾಲ್, ಜಿ.ಕೆ.ಮೆಹತಾ, ಚಂಪಾಲಾಲ್ ಮೆಹ್ತಾ, ಮಹೇಶ ಲಾಲ್ವಾನಿ, ಜೆ.ಕೆ.ಮೆಹ್ತಾ ಹಾಗೂ ವಿಜಯ ಸುಲಾಖೆ ಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)