ನೀತಿ ಸಂಹಿತೆ-ಕಟ್ಟುನಿಟ್ಟಿನ ಜಾರಿ

7

ನೀತಿ ಸಂಹಿತೆ-ಕಟ್ಟುನಿಟ್ಟಿನ ಜಾರಿ

Published:
Updated:

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾರಿಯಾಗಿರುವ  ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಎಂ.ಟಿ ರೇಜು ಅವರು ಅಧಿಕಾರಿಗಳಿಗೆ ಸೂಚಿಸಿದರು.ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಸಂಬಂಧ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಾಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಬಂಟಿಂಗ್ಸ್ ಬ್ಯಾನರ್ ಹಾಗೂ ಧ್ವಜಗಳನ್ನು ತೆರವುಗೊಳಿಸಲಾಗುವುದು. ಚುನಾವಣಾ ಅವಧಿಯಲ್ಲಿ ಇವುಗಳ ಅಳವಡಿಕೆ ಅವಕಾಶವಿಲ್ಲ.  ಅನುಮತಿ ಇಲ್ಲದೇ ಯಾವುದೇ ರೀತಿಯ ಚುನಾವಣಾ ಭಿತ್ತಿಪತ್ರ ಅಳವಡಿಸಿದರೆ ಕ್ರಮ ಕೈಗೊಳ್ಳಲಾಗುವುದು~ ಎಂದರು.ಚುನಾವಣೆಗೆ ಮತಗಟ್ಟೆಗಳ ಸಿದ್ಧತೆ, ಎಲೆಕ್ಟ್ರಾನಿಕ್ ಮತ ಯಂತ್ರ ಸಿಬ್ಬಂದಿ ನೇಮಕಾತಿ, ಸೆಕ್ಟರ್ ಅಧಿಕಾರಿಗಳ ನೇಮಕಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗದಿಂದ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೂರು ಮಂದಿ ವೀಕ್ಷಕರು ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ಪ್ರಕರಣ ಸಾರ್ವಜನಿಕರ ಗಮನಕ್ಕೆ ಬಂದರೇ ತಕ್ಷಣವೇ ಉಡುಪಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಆಯಾ ತಾಲ್ಲೂಕಿನ ತಹಶೀಲ್ದಾರ್‌ಗೆ ದೂರು ನೀಡಬಹುದು.  ಜಿಲ್ಲಾಮಟ್ಟದ ಅಧಿಕಾರಿಗಳು ಚುನಾವಣೆ ಮುಗಿಯುವವರೆಗೆ ತಮ್ಮ ಇಲಾಖೆಯ ಕೇಂದ್ರಸ್ಥಾನವನ್ನು ಬಿಟ್ಟು ತೆರಳಬಾರದು. ಅತಿ ಅವಶ್ಯವಿದ್ದಲ್ಲಿ ಮಾತ್ರ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ತೆರಳಬಹುದು ಎಂದು ತಿಳಿಸಿದರು.ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ  ಡಿ.ಕೆ. ರಂಗಸ್ವಾಮಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ  ಬೋರಲಿಂಗಯ್ಯ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ   ಎಸ್.ಎ. ಪ್ರಭಾಕರ್ ಶರ್ಮ, ಉಪಕಾರ್ಯದರ್ಶಿ  ಡಿ. ಪ್ರಾಣೇಶ್ ರಾವ್, ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ  ಕೆ.ಪಿ.ಹೊನಕೇರಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಇದ್ದರು.

ಮೊದಲ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಬುಧವಾರ ಮೊದಲ ನಾಮಪತ್ರ ಸಲ್ಲಿಕೆ ಆಗಿದೆ.ಶ್ರಿಧರ ಪೇದೆಮನೆ ಅವರು  ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸಲು ಇದೇ 29ರಂದು ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಮಾರ್ಚ್ 1 ರಂದು ನಡೆಯಲಿದೆ. ಮಾರ್ಚ್ 3ರಂದು ನಾಮಪತ್ರ ಹಿಂದೆ ಪಡೆಯಲು ಅಂತಿಮ ದಿನ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಂ.ಟಿ.ರೇಜು ಅವರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry