ಗುರುವಾರ , ಏಪ್ರಿಲ್ 15, 2021
31 °C

ನೀತಿ ಸಂಹಿತೆ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇರುವಂತೆ ರಾಷ್ಟ್ರಪತಿ - ಉಪರಾಷ್ಟ್ರಪತಿ ಚುನಾವಣೆಯಲ್ಲೂ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಸೋಲನುಭವಿಸಿದ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಪಿ.ಎ.ಸಂಗ್ಮಾ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.`ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಾಣೆಯಲ್ಲೂ ಸರ್ಕಾರ ಮತಗಳಿಕೆಗಾಗಿ ಹಣ, ಆಮಿಷಗಳನ್ನು ಒಡ್ಡಿರುವ ಕುರಿತು ಪರಿಶೀಲಿಸುವುದು ಅಗತ್ಯ~ ಎಂದು ಹೇಳಿದ್ದಾರೆ.ಭಾನುವಾರ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಷ್ಟ್ರಪತಿ ಸ್ಥಾನ ಪಕ್ಷಕ್ಕಿಂತ ದೊಡ್ಡದು. ಅಂಥ ಉನ್ನತ ಸ್ಥಾನಕ್ಕೆ ಪ್ರಜಾಪ್ರಭುತ್ವದ ಪ್ರಕಾರ ಆಯ್ಕೆ ಮಾಡುವಂತಹ ಪ್ರಕ್ರಿಯೆ ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮುಖರ್ಜಿ ಅವರನ್ನು ಅಭಿನಂದಿಸಿದ ಸಂಗ್ಮಾ, `ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸುವ ಸೌಭಾಗ್ಯವನ್ನು ದೇಶ ಕಳೆದುಕೊಂಡಿದೆ~ ಎಂದು ಈ ಸೋಲನ್ನು ವ್ಯಾಖ್ಯಾನಿಸಿದರು.`ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಂಗ್ಮಾ, `ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಪ್ರಚಾರ ನಡೆಸುವ ಬದಲು, ಪ್ರಾದೇಶಿಕ ಪಕ್ಷಗಳಿಗೆ ಬೆದರಿಸಿ, ಆಮಿಷವೊಡ್ಡಿ ಭರವಸೆಗಳನ್ನು ನೀಡುವ ಮೂಲಕ ಗೆಲುವು ಸಾಧಿಸಿದೆ~ ಎಂದರು.`ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ರಾಷ್ಟ್ರಪತಿ ಚುನಾವಣೆ ಘೋಷಣೆಯಾದ ಮೇಲೂ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ನೀಡಿದ ಬೃಹತ್ ಆರ್ಥಿಕ ಪ್ಯಾಕೇಜ್‌ಗಳನ್ನು ನೀಡಿದ್ದು ಏಕೆ ಎಂದು ಪ್ರಶ್ನಿಸಿರುವ~ ಸಂಗ್ಮಾ, `ಪ್ರಣವ್ ಅವರ ಗೆಲುವಿನ ಹಿಂದೆ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ~ ಎಂದೂ ದೂರಿದರು.`ನನ್ನನ್ನು ಬೆಂಬಲಿಸಿದ ನಾಗಾಲೆಂಡ್, ಸಿಕ್ಕಿಂ ಮುಖ್ಯಮಂತ್ರಿಗಳಿಗೆ ಯುಪಿಎ ಒಕ್ಕೂಟ ಬೆದರಿಕೆ ಒಡ್ಡಿದ್ದು, ಮಾಜಿ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಅವರ ಮೇಲೂ ಒತ್ತಡ ಹೇರಿತ್ತು, ಇದು ನನ್ನ ಗಮನಕ್ಕೆ ಬಂದಿದೆ~ ಎಂದು ಸರ್ಕಾರದ ವಿರುದ್ಧ ಸಂಗ್ಮಾ ಹರಿಹಾಯ್ದರು.ತಮ್ಮ ಕರ್ಮಭೂಮಿಯಾದ ಈಶಾನ್ಯ ರಾಜ್ಯಗಳ ಜನಪ್ರತಿನಿಧಿಗಳೇ ತಮ್ಮನ್ನು ಬೆಂಬಲಿಸದಿರುವುದಕ್ಕೆ ಕಾರಣ ನೀಡುವಲ್ಲಿ ಸೋತಿರುವ ಸಂಗ್ಮಾ, `ಇದಕ್ಕೆ ಏನು ಕಾರಣ ಎಂಬುದೇ ನನ್ನನ್ನು ಬಲವಾಗಿ ಕಾಡುತ್ತಿದೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.