ಗುರುವಾರ , ನವೆಂಬರ್ 21, 2019
26 °C

ನೀತಿ ಸಂಹಿತೆ: ನಿತ್ಯ 150 ದೂರುಗಳು

Published:
Updated:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆರಂಭಿಸಿರುವ ಸಹಾಯವಾಣಿಗೆ ಕಳೆದ ಒಂದು ವಾರದಿಂದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನಿತ್ಯ ಸರಾಸರಿ 150ರಿಂದ 170 ಕರೆಗಳು ಬರುತ್ತಿವೆ.`ಸಹಾಯವಾಣಿ ಪ್ರತಿದಿನ ಸುಮಾರು 300 ಕರೆಗಳು ಬರುತ್ತಿವೆ. ಅದರಲ್ಲಿ ಅರ್ಧದಷ್ಟು ಕರೆಗಳು ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳಾಗಿರುತ್ತವೆ. ಇದುವರೆಗೆ ಸ್ವೀಕರಿಸಲಾದ ದೂರುಗಳಲ್ಲಿ ಜೆಡಿಎಸ್‌ಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿನ ಪ್ರಮಾಣದಲ್ಲಿವೆ' ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಕಳೆದ ಒಂದು ವಾರದ ಹಿಂದಿನವರೆಗೆ ನಾವು ನಿತ್ಯ ಸಾವಿರ ಕರೆಗಳನ್ನು ಸ್ವೀಕರಿಸುತ್ತಿದ್ದೆವು. ಅದರಲ್ಲಿ ಶೇ 90ರಷ್ಟು ಕರೆಗಳು ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾರರ ಚೀಟಿ ಪಡೆಯುವುದಕ್ಕೆ ಸಂಬಂಧಪಟ್ಟ ವಿಚಾರಣೆ ಆಗಿರುತ್ತಿದ್ದವು. ಆದರೆ, ವಾರದಿಂದ ಈಚೆಗೆ ಕರೆಗಳ ಸಂಖ್ಯೆ 300ಕ್ಕೆ ಇಳಿದಿದೆ' ಎಂದು ಹೇಳಿದರು.`ಹಣ ಹಂಚಿಕೆ, ಬಟ್ಟೆ ಮತ್ತು ಪಾತ್ರೆಗಳ ವಿತರಣೆ, ಮದ್ಯದ ಸಮಾರಾಧನೆಗೆ ಕುರಿತಂತೆ ದೂರುಗಳು ದಾಖಲಾಗಿವೆ. ಅಭ್ಯರ್ಥಿಗಳ ಪರವಾಗಿ ಅಧಿಕಾರಿಗಳು ಬೆಂಬಲ ಯಾಚಿಸಿದ ಪ್ರಕರಣಗಳು ಸಹಾಯವಾಣಿ ಮೂಲಕ ಬೆಳಕಿಗೆ ಬಂದಿವೆ' ಎಂದು ಅವರು ತಿಳಿಸಿದರು.`ಶುಲ್ಕರಹಿತ ಸಹಾಯವಾಣಿ (1950) ಸೌಲಭ್ಯದಲ್ಲಿ ಏಕಕಾಲಕ್ಕೆ ಎಂಟು ಕರೆಗಳನ್ನು ಸ್ವೀಕರಿಸಬಹುದು. ದೂರು ದಾಖಲಿಸಿಕೊಂಡ ಬಳಿಕ ಅವುಗಳನ್ನು ಚುನಾವಣಾ ವೀಕ್ಷಕರು, ಹೆಚ್ಚುವರಿ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ದೂರುಗಳ ಪರಿಶೀಲನೆ ನಡೆಸಿ ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ' ಎಂದು ಅವರು ನುಡಿದರು.`ಕ್ಷೇತ್ರದಲ್ಲಿ ಗಸ್ತು ಪಡೆಗಳು, ಕಾವಲು ತಂಡಗಳು ಸಂಚರಿಸುತ್ತಿದ್ದು, ದೂರುಗಳ ವಿವರವನ್ನು ಅವುಗಳಿಗೆ ವರ್ಗಾವಣೆ ಮಾಡಿ, ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.ಪರ ಊರುಗಳಿಂದ ಬರಬಹುದಾದ ಅಕ್ರಮ ಮದ್ಯ ಹಾಗೂ ಇತರ ಚುನಾವಣಾ ಸಾಮಗ್ರಿಗಳ ಮೇಲೆ ಕಣ್ಣಿಡಲು ಎಲ್ಲ ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)