ಬುಧವಾರ, ಜೂನ್ 16, 2021
21 °C
ಉದ್ಯೋಗ ಭರವಸೆ ಯೋಜನೆ ಅಧಿಕಾರಿಗಳಿಂದ ಕಾಯ್ದೆ ಉಲ್ಲಂಘನೆ, ಪ್ರತಿಭಟನೆ

ನೀತಿ ಸಂಹಿತೆ ನೆಪ: ಯಂತ್ರಗಳಿಂದ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಉದ್ಯೋಗ ಭರವಸೆ ಯೋಜನೆ­ಯಲ್ಲಿ ಕೆಲಸ ನೀಡಿ ಎಂದರೆ ಚುನಾ­ವಣಾ ನೀತಿ ಸಂಹಿತೆ ನೆಪ ಹೇಳುವ ಇಲ್ಲಿಯ ಅಧಿಕಾರಿಗಳು ಇನ್ನೊಂದೆಡೆ ಯಂತ್ರಗಳಿಂದ ಕೆಲಸ ನಡೆಸಿ ಕಾಯ್ದೆ­ಯನ್ನೇ ಉಲ್ಲಂಘಿಸುತ್ತಿದ್ದಾರೆ ಎಂದು ಕೃಷಿ ಕೂಲಿಕಾರರು ಆರೋಪಿಸಿದ್ದಾರೆ.ಸೋಮವಾರ ಈ ವಿಷಯ ಕುರಿತು ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ವಿವಿಧ ಗ್ರಾಮಗಳ ಮಹಿಳೆಯರು ಸೇರಿದಂತೆ ಸಾಕಷ್ಟು ಸಂಖ್ಯೆ ಕೃಷಿಕೂಲಿಕಾರರು ದುಡಿಯು­ವವರಿಗೆ ಕೆಲಸ ಇಲ್ಲ ಎನ್ನುತ್ತಾರೆ. ಆದರೆ ಹಿಟಾಚಿ, ಜೆಸಿಬಿಗಳಿಗೆ ಬಿಡುವಿಲ್ಲದ ಕೆಲಸ ನಡೆಯುತ್ತಿದೆ. ಪ್ರತಿನಿಧಿಗಳು, ಅಧಿಕಾರಿಗಳು ಸೇರಿ ನಕಲಿ ಕೂಲಿಕಾರರ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ಆರ್‌.ಕೆ.ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಕೆಲಸ ಕೇಳಿದಾಗಲೆಲ್ಲ ಕೆಲಸಕ್ಕೆ ಜನರೇ ಬರುವುದಿಲ್ಲ ಎಂದೆ ಅಧಿಕಾರಿಗಳು ಹೇಳುತ್ತ ಬಂದಿದ್ದಾರೆ. ಕೂಲಿಕಾರರೇ ಇಲ್ಲವೆಂದ ಮೇಲೆ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ­ಗಳಲ್ಲಿ ಕನಿಷ್ಠ ₨3–4 ಕೋಟಿ ಹಣ ಖರ್ಚಾಗಿದೆ ಇದು ಹೇಗೆ ಸಾಧ್ಯವಾ­ಯಿತು ಎಂಬುದನ್ನು ವಿವರಿ­ಸುವಂತೆ ಕಾರ್ಯನಿರ್ವ­ಹಣಾಧಿಕಾರಿ ಎಂ.ವಿ. ಬದಿ ಅವರನ್ನು ಒತ್ತಾಯಿಸಿದರು.ಬರಪೀಡಿತ ಈ ಪ್ರದೇಶದಲ್ಲಿ 150 ದಿನಗಳ ಕೆಲಸ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಹಣಕಾಸು ವರ್ಷ (ಮಾರ್ಚ್‌) ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಕನಿಷ್ಠ ನೂರು ದಿನಗಳ ಕೆಲಸ ನೀಡಿಲ್ಲ.ಗುಳೆ ಹೋಗುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ಬಂದಿದೆ. ಆದರೆ ಇಲ್ಲದ ನೆಪಗಳನ್ನು ಹೇಳಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಜನ ಉದ್ಯೋಗ ಭರವಸೆ ಕಾಯ್ದೆ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದು ಮತ್ತೆ ಗುಳೆಹೋಗಲು ಸಿದ್ಧತೆ ನಡೆಸಿದ್ದಾರೆ. ಕೆಲಸ ಚಾಲೂ ಮಾಡಿ ಎಂದರೆ ಅಧಿಕಾರಿಗಳು ನೀತಿ ಸಂಹಿತೆ ಕಾರಣ ಮುಂದೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಹತ್ವದ ಯೋಜನೆ ಅಧಿಕಾರಿಗಳು ಮತ್ತ ಚುನಾಯಿತ ಪ್ರತಿನಿಧಿಗಳಿಗೆ ಹಣ ಬಾಚಿಕೊಳ್ಳುವುದಕ್ಕೆ ಅನುಕೂಲವಾಗಿದೆ ಹೊರತು ಜನರಿಗೆ ಅಲ್ಲ. ಸಮಸ್ಯೆಯನ್ನು ಗಮನಕ್ಕೆ ತಂದು ಜನ ಬೀದಿಗಳಿದರೂ ಚುನಾಯಿತ ಪ್ರತಿನಿಧಿಗಳು ಸೌಜನ್ಯಕ್ಕಾ­ದರೂ ಭೇಟಿ ಮಾಡದೆ ಬೇಜವಾಬ್ದಾ­ರಿತನದಿಂದ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.ನೀಲಮ್ಮ, ಯಮನಮ್ಮ, ಎಚ್‌. ಬಂಡೆಪ್ಪ, ರಂಗಪ್ಪ ದೊರೆ, ಅಕ್ಕಮಹಾ­ದೇವಿ ಹಾಲಕೆರೆ, ಮುತ್ತಣ್ಣ, ಯಲ್ಲಮ್ಮ ಬೆನಕನಾಳ, ಮಲ್ಲಪ್ಪ ನಿಲೋಗಲ್‌, ನಿಂಗಮ್ಮ ಗುಳಗೌಡ್ರ, ಸಂಗನಗೌಡ ಪೊಲೀಸಪಾಟೀಲ ಇತರರು ಇದ್ದರು. ಸಂಜೆಯಾದರೂ ಕೂಲಿಕಾರರು ಧರಣಿ ಮುಂದುವರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.