ಶುಕ್ರವಾರ, ನವೆಂಬರ್ 15, 2019
27 °C

ನೀತಿ ಸಂಹಿತೆ ಪ್ರಹಾರ: ಕುಡಿಯುವ ನೀರಿಗೆ ತತ್ತರ

Published:
Updated:

ತಿಪಟೂರು: ಬರಗಾರದಲ್ಲಿ ಅಧಿಕ ಮಾಸ ಎಂಬಂತೆ, ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಜನ ತತ್ತರಿಸುತ್ತಿದ್ದರೂ; ಸಮಸ್ಯೆ ಪರಿಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿ ಗಾಯದ ಮೇಲೆ ಬರೆ ಎಳೆದಿದೆ.ಅಂತರ್ಜಲ ಕುಸಿತ, ವಿದ್ಯುತ್ ಕಡಿತ ತಾಲ್ಲೂಕಿನ ಹಲವೆಡೆ ಕುಡಿವ ನೀರಿಗೆ ಸಮಸ್ಯೆ ತಂದೊಡ್ಡಿದೆ. ಹಲ ಹಳ್ಳಿಗಳಲ್ಲಿ ತ್ರಾಸದಾಯಕ ಸ್ಥಿತಿಯಲ್ಲಿ ಹೇಗೋ ನಿರ್ವಹಿಸುತ್ತಿದ್ದರೆ ಉಳಿದ ಗ್ರಾಮಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ.ಜನತೆ ನೀರಿಗಾಗಿ ಕರೆಂಟ್ ಬರುವುದನ್ನೇ ಕಾಯುತ್ತಾ ತೋಟದಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ಮುಗಿ ಬೀಳುತ್ತಿದ್ದಾರೆ. ತೋಟ ಉಳಿಸಿಕೊಳ್ಳಲು ಹೆಣಗುತ್ತಿರುವ ರೈತರ ಬಾಯಿ ಕಟ್ಟಿ ಹಾಕಿದಂತಾಗಿದೆ.ಹಲವೆಡೆ ರೈತರ ಬೋರ್‌ವೆಲ್ ಕೈಕೊಟ್ಟಿವೆ. ಪರಿಸ್ಥಿತಿ ಹೀಗಿರುವಾಗ ಕೊಡ ನೀರಿಗೂ ಪರದಾಡುವ ದುಃಸ್ಥಿತಿ ಕೆಲವೆಡೆ ಕಣ್ಣಿಗೆ ರಾಚುತ್ತಿದೆ. ಎಷ್ಟೋ ಹಳ್ಳಿಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸದಿದ್ದರೆ ಸಮಸ್ಯೆಗೆ ಪರಿಹಾರವೇ ಇಲ್ಲ. ಆದರೆ ಕೆಲವೆಡೆ ಅನುಮೋದನೆಗೊಂಡಿದ್ದರೂ ಬೋರ್ ಕೊರೆಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಸತತ ಬರ ಬಂದಿದ್ದರಿಂದ ಕುಡಿಯುವ ನೀರಿಗೆ ವಿಶೇಷ ಅನುದಾನ, ತುರ್ತು ಕಾಮಗಾರಿ ಆದ್ಯತೆ ನೀಡಬೇಕಾದ ಸಂದರ್ಭ ಚುನಾವಣೆಯ ಗುಮ್ಮ ಗ್ರಾಮಸ್ಥರ ಗಂಟಲು ಒಣಗಿಸುತ್ತಿದೆ.ಸಂಬಂಧಿಸಿದ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ಕಡೆ ಬೊಟ್ಟು ಮಾಡಿ ನುಣುಚಿಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಪರವಗೊಂಡನಹಳ್ಳಿ, ಗೆದ್ಲೆಹಳ್ಳಿ ಗೊಲ್ಲರಹಟ್ಟಿ, ಕಲ್ಕೆರೆ, ಶನುನಗಿರಿ ಗೊಲ್ಲರಹಟ್ಟಿ, ಬಳುವನೇರಲು ಮತ್ತು ಹೊನ್ನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ತುರ್ತು ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದರೂ; ನೀತಿ ಸಂಹಿತೆ ನೆಪ ಹೇಳುತ್ತಿರುವುದರಿಂದ ಗ್ರಾಮಸ್ಥರು ತತ್ತರಿಸಿದ್ದಾರೆ. ಜಾನುವಾರುಗಳಿಗೂ ಕುಡಿಯುವ ನೀರು ಇಲ್ಲದಂತಾಗಿದೆ. ಕುಡಿಯುವ ನೀರಿನ ವಿಷಯದಲ್ಲಿ ನೀತಿ ಸಂಹಿತೆ ಅಡ್ಡ ತರದೆ ತುರ್ತು ಕಾಮಗಾರಿ ಮೂಲಕ ಸಮಸ್ಯೆ ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.ಮತದಾನ ಬಹಿಷ್ಕಾರ: ತಾಲ್ಲೂಕಿನ ಕರಿಕೆರೆ ಗ್ರಾಮದಲ್ಲಿ ಎಲ್ಲ ವ್ಯವಸ್ಥೆಗಳಿದ್ದರೂ; ತಾಂತ್ರಿಕ ಕಾರಣಗಳಿಂದ ಎದುರಾಗಿರುವ ಕುಡಿಯುವ ನೀರಿನ ತತ್ವಾರವನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಕೆರೆ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿಯ ಮೋಟರ್ ಕೆಟ್ಟು 15 ದಿನ ಕಳೆದಿದೆ. 13 ವರ್ಷಗಳ ಹಿಂದೆ ವಿಶ್ವಬ್ಯಾಂಕ್ ನಬಾರ್ಡ್ ಯೋಜನೆಯಡಿ ಈ ಗ್ರಾಮಕ್ಕೆ ಮೂರು ಬೋರ್‌ವೆಲ್ ಕೊರೆಸಿ, 75 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಉಸ್ತುವಾರಿಗೆ 13 ಜನರ ಸಮಿತಿ ರಚಿಸಲಾಗಿತ್ತು. ಸಮಿತಿಯವರು ಕೆಲ ವರ್ಷ ಉತ್ತಮ ನಿರ್ವಹಣೆ ತೋರಿ ನಂತರ ತಾತ್ಸಾರ ತೋರಿದ್ದರಿಂದ ಈಗ ಸಮಸ್ಯೆ ಉದ್ಭವಿಸಿದೆ. ಈಗ ಮೋಟರ್ ಕೆಟ್ಟು 15 ದಿನಗಳಾದರೂ ಸಮಿತಿಯವರು ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಗ್ರಾಮದ ನೀರಿನ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡಿಲ್ಲ. ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ರೈತರ ಪಂಪ್‌ಸೆಟ್‌ಗಳಿಂದ ನೀರು ತರುವ ತಾಪತ್ರಯದ ನಡುವೆ ಜನರಷ್ಟೇ ಅಲ್ಲದೆ ಜಾನುವಾರುಗಳಿಗೂ ತೊಂದರೆಯಾಗಿದೆ. ತಕ್ಷಣ ಗ್ರಾಮದ ನೀರಿನ ಸಮಸ್ಯೆ ಪರಿಹರಿಸದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಕೋರಿದ್ದಾರೆ. ನೀರು ನಿರ್ವಹಣೆ ಸಮಿತಿ ರದ್ದುಪಡಿಸಿ ಗ್ರಾಮ ಪಂಚಾಯಿತಿ ವಶಕ್ಕೆ ಒಪ್ಪಿಸಬೇಕೆಂದೂ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)