ಮಂಗಳವಾರ, ಜೂನ್ 22, 2021
27 °C

ನೀತಿ ಸಂಹಿತೆ ಬಿಸಿ: ರಂಗೇರದ ‘ಅಖಾಡ’

ಹರ್ಷವರ್ಧನ ಪಿ.ಆರ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಚುನಾವಣೆ ಘೋಷಣೆಯಾದರೆ ಸಾಕು. ತೋರಣ, ಪಕ್ಷಗಳ ಬ್ಯಾನರ್‌, ಆಳೆತ್ತರದ ಕಟೌಟ್‌, ದಾರಿಯುದ್ದಕ್ಕೂ ಬಂಟಿಂಗ್ಸ್‌, ಗೋಡೆ ಬರಹ, ಎಲ್ಲೆಡೆ ಕರಪತ್ರ, ಆರ್ಭಟಿಸುವ ಧ್ವನಿವರ್ಧಕ, ಟೋಪಿ, ನಾಯಕರ ಭಾವಚಿತ್ರ ಗಳ ಅಂಗಿಯಿಂದ ಅಖಾಡವು ರಂಗೇರುತ್ತಿತ್ತು. ಮುದ್ರಣಕಾರರ, ಚಿತ್ರಕಾರರ, ಬ್ಯಾನರ್‌ ಬರಹಗಾರರ ವಹಿವಾಟು ವೃದ್ಧಿಸುತ್ತಿತ್ತು. ಇಡೀ ಕ್ಷೇತ್ರವೇ ಮದುವಣಗಿತ್ತಿಯಂತೆ ಸಿಂಗರಿಸುತ್ತಿತ್ತು.ಆದರೆ ಈಗ ಅಖಾಡವೇ ಬಿಕೋ ಎನ್ನುತ್ತಿದ್ದರೆ, ನೀತಿ ಸಂಹಿತೆಯ ಬಿಸಿ ಮುದ್ರಣಕಾರರು, ಜಾಹೀರಾತು ಸಂಸ್ಥೆ, ಕಲಾವಿದರ ವಹಿವಾಟು ಮೇಲೂ ಬೀರಿದೆ. ವಹಿವಾಟು ಇಳಿಮುಖವಾಗಿದೆ.1991ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಯಲ್ಲಿ ಮೊದಲ ಬಾರಿಗೆ ನೀತಿ ಸಂಹಿತೆಯ ಪ್ರಭಾವ ತಟ್ಟಿತು. ಕೇಂದ್ರ ಚುನಾವಣಾ ಆಯೋಗದ ಅಂದಿನ ಮುಖ್ಯಸ್ಥರಾಗಿದ್ದ ಟಿ.ಎನ್‌. ಶೇಷನ್‌ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಆ ಬಳಿಕ ಹಂತ ಹಂತವಾಗಿ ಕಠಿಣಗೊಳ್ಳುತ್ತ ಬಂದಿದೆ. ‘ಹಿಂದೆ ಮುದ್ರಣ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಆಗ ಕಟೌಟ್‌, ಗೋಡೆ ಬರಹ, ಬ್ಯಾನರ್‌ ಬರಹಗಳು, ಕರಪತ್ರ ಮುದ್ರಣ, ಬಂಟಿಂಗ್ಸ್‌, ನಾಯಕರ ಚಿತ್ರ ಬಿಡಿಸು ವುದು ಪ್ರಚಾರದ ಪ್ರಮುಖ ಸಾಧನವಾಗಿತ್ತು. ಹೀಗಾಗಿ ಚಿತ್ರಕಲಾವಿದರು ಮತ್ತು ಉದ್ಯಮಕ್ಕೆ ಬೇಡಿಕೆ ಇತ್ತು. ಚುನಾವಣೆ ಸಮಯದಲ್ಲಿ ಬಿಡುವಿರಲಿಲ್ಲ. ರಾತ್ರಿ–ಹಗಲೆನ್ನದೇ ಕೆಲಸವಿತ್ತು. ಬಹುತೇಕ ಆದಾಯ ಆಗಲೇ ಗಳಿಸಬೇಕಿತ್ತು’ ಎನ್ನುತ್ತಾರೆ ಈಶ್ವರ್ ಪ್ರಿಂಟರ್ಸ್‌ನ ಗಂಗಾಧರ.‘1991ರ ಬಳಿಕ ನೀತಿ ಸಂಹಿತೆ ಕಠಿಣಗೊಳ್ಳಲು ಆರಂಭಿಸಿತು. ಆರಂಭದಲ್ಲಿ ಪ್ರಚಾರ ಸಾಮಗ್ರಿ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಪರವಾನಗಿ ಕೇಳುತ್ತಿದ್ದರು. ಬಳಿಕ ಮುದ್ರಣದ ಲೆಕ್ಕಾಚಾರ ಕೊಡಬೇಕಾಗಿತ್ತು. ಆದರೆ ಈಚಿನ ದಿನಗಳಲ್ಲಿ ಮುದ್ರಣದ ಎಲ್ಲ ವಿವರ ನೀಡಬೇಕು. ಅದನ್ನು ಪ್ರತಿ ಮೇಲೆ ಲಗತ್ತಿಸೇಬೇಕು. ಹೀಗಾಗಿ ರಾಜಕಾರಣಿಗಳು ಪ್ರಚಾರ ಸಭೆಯ ಬ್ಯಾನರ್‌ ಮಾತ್ರ ಮುದ್ರಿಸಿಕೊಳ್ಳುತ್ತಾರೆ.  ಇದರಿಂದ ಚುನಾವಣಾ ವ್ಯಾಪಾರ ಇಳಿಮುಖವಾಗಿದೆ’ ಎನ್ನುತ್ತಾರೆ ಮುದ್ರಣ ಉದ್ಯಮಿ ಅಶೋಕ ಬಿ. ಪಾಟೀಲ.‘ಚುನಾವಣೆ ಘೋಷಣೆ ಆದ ತಕ್ಷಣವೇ ಎಲ್ಲ ಬ್ಯಾನರ್‌ ತೆಗೆಯುತ್ತಾರೆ. ರಾಜಕೀಯೇತರ ಜಾತ್ರೆ, ಇತರ ಸಮಾರಂಭ, ಸಾಮೂಹಿಕ ಮದುವೆ ಇದ್ದರೂ ಬ್ಯಾನರ್‌ಗೆ ಪರವಾನಗಿ ಬೇಕು. ಬ್ಯಾನರ್‌ಗಿಂತ ಹೆಚ್ಚು ಕಷ್ಟ ಪರವಾನ ಗಿಗೆ. ಕಿರಿಕಿರಿ ಬೇಡ ಎಂದು ಬಹುತೇಕರು ಈ ಅವಧಿಯಲ್ಲಿ ಪ್ರಿಂಟ್‌ ಮಾಡಿಸುವುದೇ ಇಲ್ಲ. ಇತರ ವಹಿವಾಟುಗಳೂ ಇಳಿಮುಖವಾಗಿದೆ’ ಎಂದರು.‘ಚಿಂಚೋಳಿ ಜಾತ್ರೆಯ ಮಾಹಿತಿ–ಪ್ರಚಾರ ಸಾಮಗ್ರಿಗಳನ್ನು ಪ್ರತಿವರ್ಷವೂ ನಮ್ಮಲ್ಲಿ ಮುದ್ರಿ ಸುತ್ತಾರೆ. ಈ ಬಾರಿಯೂ ಬುಕ್ಕಿಂಗ್‌ ಬಂದಿತ್ತು. ಚುನಾವಣೆ ಘೋಷಣೆಯಾದ ಕಾರಣ ರದ್ದಾಯಿತು. ಇಂತಹ ಹಲವು ನಿದರ್ಶನಗಳಿವೆ. ಹೀಗಾಗಿ ಎಂದಿನ ವಹಿವಾಟು ಕೂಡಾ ನಷ್ಟವಾಗುತ್ತಿದೆ. ಆದರೆ ನೀತಿ ಸಂಹಿತೆ ಜಾರಿಗೆ ಮೊದಲು ಮೋದಿ, ಸೋನಿಯಾ ಗಾಂಧಿ ಬಂದ ಸಂದರ್ಭ ಭಾರಿ ವಹಿವಾಟು ನಡೆದಿತ್ತು’ ಎಂದು ಅವರು ವಿವರಿಸಿದರು.‘ಹಿಂದೆಲ್ಲ ನಮ್ಮ ಗೋಡೆ ಮೇಲೆ ಬರೆದು ಗಲೀಜು ಮಾಡುತ್ತಿದ್ದರು, ಬಂಟಿಂಗ್ಸ್‌ ಮತ್ತಿತರ ಕಸ ಎಸೆದು ಹೋಗುತ್ತಿದ್ದರು, ಮರಕ್ಕೆ ಬ್ಯಾನರ್‌, ಪೋಸ್ಟರ್‌ ಹಚ್ಚುತ್ತಿದ್ದರು. ನೀತಿ ಸಂಹಿತೆ ಕಾರಣ ಸಾರ್ವಜನಿಕರು ನೆಮ್ಮದಿಯಿಂದ ಇರಬಹುದು. ಕೆಲವರಿಗೆ ನೀತಿ ಸಂಹಿತೆಯು ನಷ್ಟ ಉಂಟು ಮಾ ಡಿರಬಹುದು. ಆದರೆ ಸಾರ್ವಜನಿಕ ಸೊತ್ತುಗಳ ರಕ್ಷಣೆ ಮಾಡಿದೆ. ಪರಿಸರ ಕಾಪಾ ಡಿದೆ’ ಎನ್ನುತ್ತಾರೆ ವಿಠ್ಠಲ ನಗರ ನಿವಾಸಿ ರಮೇಶ್‌.ಬಹಿರಂಗ ಪ್ರಚಾರದ ಕಠಿಣ ನೀತಿ ಸಂಹಿತೆ ಕಾರಣ ರಾಜಕಾರಣಿಗಳು ಮಾಧ್ಯಮ ಜಾಹೀರಾತನ್ನು ಅವಲಂಬಿಸಿದ್ದರು. ಅಲ್ಲದೇ ಫೇಸ್‌ಬುಕ್‌, ಟ್ವಿಟ್ಟರ್‌ ಮತ್ತಿತರ ಆಧುನಿಕ ತಂತ್ರಜ್ಞಾನದ ತಾಣಗಳ ಮೊರೆ ಹೋದರು. ಈಗ ಅದಕ್ಕೂ ಕಡಿವಾಣ ಬಿದ್ದಿದೆ!‘ಪರವಾನಗಿ ಕಡ್ಡಾಯ’

ಅಭ್ಯರ್ಥಿಗಳು ತಮ್ಮ ಫೇಸ್‌ಬುಕ್, ಟ್ವಿಟ್ಟರ್, ಇ–ಮೇಲ್, ಎಸ್‌ಎಂಎಸ್ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಟೌಟ್ಸ್, ಬ್ಯಾನರ್ಸ್, ಪೋಸ್ಟರ್‌ ಅಳವಡಿಸಲು, ಖಾಸಗಿ ಕಟ್ಟಡಗಳಲ್ಲಿ ಕಚೇರಿ ತೆರೆಯಲು, ಸಮಾರಂಭಗಳಿಗೆ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಜಾಗ ಬಳಸಿಕೊಳ್ಳಲು, ರೇಡಿಯೊ, ಖಾಸಗಿ ಕೇಬಲ್‌ಗಳಲ್ಲಿ ಪ್ರಚಾರ ಮಾಡಲು, ಧ್ವನಿವರ್ಧಕಗಳ ಬಳಕೆಗೆ ಮುಂಚಿತವಾಗಿ ಪರವಾನಗಿ ಪಡೆಯುವುದು ಕಡ್ಡಾಯ

ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಚುನಾವಣಾಧಿಕಾರಿ‘ಕಲಾವಿದರ ಆದಾಯ ನಷ್ಟ’

‘ಹಿಂದೆಲ್ಲ ಪ್ರಮುಖ ವೃತ್ತಗಳಲ್ಲಿ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ವಾಜಪೇಯಿ ಮತ್ತಿತರ ನಾಯಕರ ಕಟೌಟ್‌ ನಿಲ್ಲಿಸುತ್ತಿದ್ದರು. ಬ್ಯಾನರ್‌ ಬರೆಯಿಸಿ ಹಾಕುತ್ತಿದ್ದರು. ಫ್ಲೆಕ್ಸ್‌, ಆಫ್‌ಸೆಟ್‌ ಮುದ್ರಣ ಬಂದ ಬಳಿಕ ಚಿತ್ರ ಕಲಾವಿದರಿಗೆ ಬೇಡಿಕೆ ಸ್ವಲ್ಪ ಇಳಿಮುಖವಾಯಿತು. ಆದರೆ ರಾತ್ರಿ ಹೊತ್ತಿನಲ್ಲಿ ಗೋಡೆ ಮೇಲೆ ನಾಯಕರ ಭಾವಚಿತ್ರ, ಕ್ಯಾಪ್ಶನ್‌ ರೈಟಿಂಗ್‌, ಬರಹಗಳು ಬರೆಯಲು ಬೇಡಿಕೆ ಇತ್ತು. ನೀತಿ ಸಂಹಿತೆ ಕಠಿಣಗೊಂಡ ಬಳಿಕ ಕಲಾವಿದರಿಗೂ ತೀವ್ರ ಹಿನ್ನಡೆಯಾಗಿದೆ’ .

ನಾರಾಯಣ ಎಂ. ಜೋಶಿ, ಕಲಾವಿದರು ಗುಲ್ಬರ್ಗ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.