ಶುಕ್ರವಾರ, ಜೂನ್ 25, 2021
30 °C

ನೀರಾವರಿಗೆ ಅತಿ ಹೆಚ್ಚು ಅನುದಾನ: ಸಚಿವ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಅವಳಿ ಜಿಲ್ಲೆಯ ಇತಿಹಾಸದಲ್ಲಿ ನೀರಾವರಿ ಕ್ಷೇತ್ರಕ್ಕೆ ಇದೇ ಮೊದಲ ಬಾರಿ ಅತಿ ಹೆಚ್ಚಿನ ಅನುದಾನ ನೀಡಿ ಶರವೇಗದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.ತಿಕೋಟಾ ಹೋಬಳಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕಳೆದ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನೀರಾ­ವರಿ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಇಲಾಖೆಯ ಕಾರ್ಯಚಟುವಟಿಕೆಗಳನ್ನು ಚುರುಕು ಗೊಳಿಸಿದ್ದೇನೆ. ಹೊಸ ಯೋಜನೆಗಳಿಗೆ ವಿವರ ವರದಿ ತಯಾರಿಸಿ ಚಾಲನೆ ನೀಡಲಾಗುತ್ತಿದೆ’ ಎಂದರು.‘ಮುಳವಾಡ ಏತ ನೀರಾವರಿ 3ನೇ ಹಂತದ ವಿಜಾಪುರ ಮುಖ್ಯ ಕಾಲುವೆ, ಮಲಘಾಣ ಶಾಖಾ ಕಾಲುವೆ, ತುಬಚಿ–-ಬಬಲೇಶ್ವರ ಏತ ನೀರಾವರಿ ಯೋಜನೆ, ಮಮದಾಪುರ, ಬಬಲೇಶ್ವರ, ಸಾರವಾಡ, ಬೇಗಂ ತಲಾಬ್‌, ಭೂತನಾಳ, ತಿಡಗುಂದಿ ಕೆರೆಗಳಿಗೆ ನೀರು ತುಂಬುವ ಯೋಜನೆ, ಸಂಖ ಮತ್ತು ಬುಯ್ಯಾರ ಕೆರೆ ನೀರು ತುಂಬುವ ಯೋಜನೆ ಸೇರಿದಂತೆ ವಿಜಾಪುರ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗೆ ಏಕ ಕಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 5 ರಂದು ಮಧ್ಯಾಹ್ನ 3ಕ್ಕೆ ವಿಜಾಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ’ ಎಂದರು.ಕೆ.ಪಿ.ಸಿ.ಸಿ. ವಕ್ತಾರ ಪ್ರಕಾಶ ರಾಠೋಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ದ್ರಾಕ್ಷಿ ಬೆಳೆಗಾರ ಸಂಘದ ಅಧ್ಯಕ್ಷ ಅಭಯ ನಾಂದ್ರೇಕರ, ಸುಭಾಷಗೌಡ ಪಾಟೀಲ, ಕೆ.ಆರ್. ಮೆಂಡೆಗಾರ, ಸಂಗಮೇಶ ಬಬಲೇಶ್ವರ, ಬಸಯ್ಯ ವಿಭೂತಿ  ಮಾತನಾಡಿದರು.  ತಿಕೋಟಾ ಹೋಬಳಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಎಂ.ಬಿ. ಪಾಟೀಲರವರಿಗೆ ಗ್ರಾಮಸ್ಥರ ಪರವಾಗಿ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು.ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಎಸ್.ಸಜ್ಜನ, ಕೃಷ್ಣಾ ಭಾಗ್ಯ ಜಲ ನಿಗಮದಿಂದ ಎಇಇ ಶಿವಾಜಿ ವಿಜಾಪುರ, ಜಲಾನಯನ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಕೋಳೆಕರ ತಮ್ಮ ಇಲಾಖೆ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.