ಬುಧವಾರ, ಜೂನ್ 16, 2021
26 °C

ನೀರಾವರಿಗೆ ರೂ 10,500 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ನೀರಾವರಿ ವಲಯಕ್ಕೆ ಹಿಂದಿನ ವರ್ಷಕ್ಕಿಂತ 2,700 ಕೋಟಿ ರೂಪಾಯಿ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ನೀರಾವರಿ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ ರೂ 7,800 ಕೋಟಿ ಇದ್ದ ಅನುದಾನದ ಮೊತ್ತವನ್ನು 10,500 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.`ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ~ದ ಕಾಮಗಾರಿಯನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಮುಳವಾಡ ಏತ ನೀರಾವರಿ, ನಾರಾಯಣಪುರ ಬಲದಂಡೆ ವಿಸ್ತರಣಾ ಕಾಲುವೆ, ಚಿಮ್ಮಲಗಿ ಏತ ನೀರಾವರಿ ಮತ್ತು ಮಲ್ಲಾಬಾದಿ ನೀರಾವರಿ ಯೋಜನೆಗಳನ್ನು ಆರಂಭಿಸುವ ಘೋಷಣೆಯೂ ಬಜೆಟ್‌ನಲ್ಲಿದೆ.ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನಂದವಾಡಗಿ, ವಿಜಾಪುರ ಹಾಗೂ ಜಮಖಂಡಿ ತಾಲ್ಲೂಕಿನ ತುಬಚಿ-ಬಬಲೇಶ್ವರ, ಮುದ್ದೇಬಿಹಾಳ ತಾಲ್ಲೂಕಿನ ಬೂದಿಹಾಳ ಏತ ನೀರಾವರಿ ಯೋಜನೆಗಳಿಗೂ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.ಎತ್ತಿನಹೊಳೆಗೆ ರೂ 400 ಕೋಟಿ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಿತ ಎತ್ತಿನಹೊಳೆ ನೀರು ಪೂರೈಕೆ ಯೋಜನೆಗೆ 400 ಕೋಟಿ ರೂಪಾಯಿ ಒದಗಿಸಲಾಗಿದೆ.ಇದಲ್ಲದೇ ಪಶ್ಚಿಮಕ್ಕೆ ಹರಿಯುವ ನದಿಗಳ ಹೆಚ್ಚುವರಿ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹರಿಸುವ ಸಂಬಂಧ ನೀರಾವರಿ ತಜ್ಞ ಬಿ.ಎಸ್.ಪರಮಶಿವಯ್ಯ ಅವರು ನೀಡಿರುವ ವರದಿ ಶಿಫಾರಸುಗಳ ಮೇಲೆ ಪ್ರಸಕ್ತ ವರ್ಷವೇ ಕ್ರಮ ಕೈಗೊಳ್ಳುವ ಭರವಸೆಯೂ ಬಜೆಟ್‌ನಲ್ಲಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರು, ನೀರಾವರಿ, ಮೀನುಗಾರಿಕೆ, ನೆರೆ ನಿಯಂತ್ರಣ ಹಾಗೂ ವಿದ್ಯುತ್ ಉತ್ಪಾದನೆಗೆ ಪೂರಕವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಜೋಡಿಸುವ `ಸೌಭಾಗ್ಯ ಸಂಜೀವಿನಿ~ ಎಂಬ ಹೊಸ ಯೋಜನೆಯನ್ನೂ ಘೋಷಿಸಲಾಗಿದೆ.ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವುದು, ನಾರಾಯಣಪುರ ಎಡದಂಡೆ, ಗೋಂಧಿ, ತುಂಗಾ, ವಿಜಯನಗರ, ನಾಲೆಗಳು, ನೂರು ವರ್ಷಕ್ಕೂ ಹಳೆಯದಾದ ಚಾಮರಾಜ, ಮಿರ್ಲೆ ಮತ್ತು ರಾಮಸಮುದ್ರ, ಮಂದಗೆರೆ ಮತ್ತು ಹೇಮಗಿರಿ, ದೇವರಾಯ ವಿರಿಜಾ, ರಾಮಸ್ವಾಮಿ, ಚಿಕ್ಕದೇವರಾಯ ನಾಲೆ, ಹಲುಸೂರು ಮತ್ತು ಹುಲ್ಲಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೊಳ್ಳುವ ಪ್ರಸ್ತಾವವಿದೆ.ವಿ.ಸಿ. ಶಾಖಾ ನಾಲೆ ಆಧುನೀಕರಣ, ಕೆರೆ ತುಂಬಿಸುವ ನಾಲ್ಕು ಯೋಜನೆಗಳು, ಅರ್ಕಾವತಿ ನದಿ ಕಣಿವೆಯ 100 ಕೆರೆಗಳ ಪುನರುತ್ಥಾನ, ಯಗಚಿ ಯೋಜನೆಯ ನೀರಾವರಿ ಪ್ರದೇಶದ ವಿಸ್ತರಣೆ ಸೇರಿದಂತೆ ಹೊಸ ಯೋಜನೆಗಳ ಅಡಿಯಲ್ಲಿ ಈ ವರ್ಷ 1.55 ಲಕ್ಷ ಎಕರೆ ಕೃಷಿ ಭೂಮಿಗೆ ಹೊಸದಾಗಿ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ.ಒಂದು ಲಕ್ಷ ಎಕರೆ ಭೂಮಿಗೆ ಹೊಲಗಾಲುವೆ ನಿರ್ಮಾಣ, ಎರಡು ಲಕ್ಷ ಎಕರೆ ಪ್ರದೇಶದಲ್ಲಿ ಬಸಿಗಾಲುವೆ ನಿರ್ಮಾಣ, 60,000 ಎಕರೆ ಸವಳು ಭೂಮಿ ಪುನರುತ್ಥಾನ, ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ನೈಪುಣ್ಯ ಕೇಂದ್ರ ಸ್ಥಾಪನೆ.ಸಣ್ಣ ನೀರಾವರಿಗೂ ಆದ್ಯತೆ: ಸಣ್ಣ ನೀರಾವರಿ ಇಲಾಖೆಯ ಮೂಲಕ ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ 176 ಯೋಜನೆಗಳಿಗೆ 250 ಕೋಟಿ ರೂಪಾಯಿ ಒದಗಿಸಲಾಗಿದೆ. ಕೆರೆಗಳ ಪುನರುಜ್ಜೀವನ ಕಾರ್ಯಕ್ರಮವನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜೊತೆ ಸೇರಿಸಲು ಮುಂದಾಗಿದ್ದು, ಈ ಯೋಜನೆಗೆ ರೂ 150 ಕೋಟಿ ಒದಗಿಸಲಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ರೂ 50 ಕೋಟಿ, ಜಲ ಸಂವರ್ಧನೆ ಯೋಜನಾ ಸಂಘದ ಮೂಲಕ ಸಮುದಾಯ ಆಧಾರಿತ ಕೆರೆ ನಿರ್ವಹಣೆಗೆ ರೂ 120 ಕೋಟಿ ಒದಗಿಸಲಾಗಿದೆ. ಅಂತರ್ಜಲ ನಿಯಂತ್ರಣ ಪ್ರಾಧಿಕಾರ ರಚನೆ ಪ್ರಸ್ತಾವವೂ ಬಜೆಟ್‌ನಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.