ನೀರಾವರಿ ಅನುದಾನ ಶೀಘ್ರವೇ ಬಿಡುಗಡೆ: ಘೋಷಣೆ

7
ಜಿಲ್ಲೆ ಅಭಿವೃದ್ಧಿಗೆ ಭರವಸೆಗಳ ಮಹಾಪೂರ

ನೀರಾವರಿ ಅನುದಾನ ಶೀಘ್ರವೇ ಬಿಡುಗಡೆ: ಘೋಷಣೆ

Published:
Updated:

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಮತ್ತು ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ ಅನುಷ್ಠಾನ­ಗೊಳಿ­ಸಲು ಸರ್ಕಾರ ಬದ್ಧವಾಗಿದ್ದು, ವಿಸ್ತ್ರತಾ ಯೋಜನಾ ವರದಿ­ಯಾಧರಿಸಿ ಶೀಘ್ರವೇ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.ನಗರದ ನಂದಿರಂಗಮಂದಿರದಲ್ಲಿ ಶುಕ್ರವಾರ ನಡೆದ ಜಿಲ್ಲಾಡಳಿತ ಭವನ, ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಚಿಂತಾಮಣಿ 1 ಮತ್ತು 2ನೇ ಮಹಡಿಯ ಶಂಕುಸ್ಥಾಪನೆ ಕಾರ್ಯ­ಕ್ರಮಕ್ಕೆ ಚಾಲನೆ ನೀಡಿ, ನೀರಾವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದರು.ಚಿಕ್ಕಬಳ್ಳಾಪುರ–ಕೋಲಾರ ಮುಂತಾದ ಬಯಲುಸೀಮೆ ಜಿಲ್ಲೆಗಳು ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದೆ. ನೀರಾವರಿ ಯೋಜನೆ ಜಾರಿಗೊಳಿಸಲು ಪ್ರಥಮ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಕೂಡ ಮೀಸಲಿಡ­ಲಾಗಿದೆ ಎಂದು ಹೇಳಿದರು.ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಹೈಟೆಕ್‌ ಸರ್ಕಾರಿ ಆಸ್ಪತ್ರೆ  ಹಾಸಿಗೆಗಳ ಸಾಮರ್ಥ್ಯವನ್ನು 300ಕ್ಕೆ ಏರಿಸಿ, ಮುಂದಿನ ವರ್ಷ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಘೋಷಿಸಲಾಗು­ವುದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ನೂತನ ಕಟ್ಟಡ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೂಲಸೌಲಭ್ಯ ಪೂರೈಸಲಾಗು­ವುದು. ಜಿಲ್ಲೆಯ ಶಾಸಕರು ಸಲ್ಲಿಸಿರುವ ಬಹುತೇಕ ಬೇಡಿಕೆಗಳನ್ನು ಈಡೇರಿ­ಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗು­ವುದು ಎಂದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ವರ್ಷ ಜಿಲ್ಲಾಡಳಿತವು 25 ಕೋಟಿ ರೂಪಾಯಿ ಅನುದಾನ ಕೋರಿದ್ದು, ಜಿಲ್ಲಾಡಳಿತ ಭವನದ ಹೆಚ್ಚುವರಿ ಕಾಮಗಾರಿಗೆ 5 ಕೋಟಿ ರೂಪಾಯಿ, ಕರ್ನಾಟಕ ಹಾಲು ಮಹಾಮಂಡಳಿಯ ಮೆಗಾ ಡೇರಿ ನಿರ್ಮಾಣಕ್ಕೆ ಬಾಕಿಯಿ­ರುವ ಅನುದಾನ­ವನ್ನೂ ಸಹ ಹಂತ­ಹಂತವಾಗಿ ಬಿಡುಗಡೆ ಮಾಡಲಾಗು­ವುದು. ಜಿಲ್ಲೆಯಲ್ಲಿ ಕಾಡುತ್ತಿರುವ ಸೌಲಭ್ಯ ಮತ್ತು ಇತರ ಕೊರತೆಗಳನ್ನು ಸಹ ನೀಗಿಸಲಾಗುವುದು ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಕಪವಾಗಿ ನಡೆದಿರುವ ಕುರಿತು ಶಾಸಕರಿಂದ ಅಲ್ಲದೇ ರೈತರಿಂದಲೂ ದೂರುಗಳು ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಮರಳು ನೀತಿಯನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಮತ್ತು ವಿವಿಧ ಹಂತಗಳ ಅಧಿಕಾರಿಗಳ ಸಭೆಗಳನ್ನು ಈಗಾಗಲೇ ಎರಡು ಬಾರಿ ನಡೆಸಲಾಗಿದ್ದು, ಮರಳು ನೀತಿ­ಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು. 

ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಉನ್ನತ ಕೌಶಲ ಸಂಸ್ಥೆ ಅಕ್ಟೋಬರ್‌ 2ರಂದು ಉದ್ಘಾಟಿಸ­ಲಾಗುವುದು. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳ ಅನುದಾನದಿಂದ ರಾಜೀವ್‌­ಗಾಂಧಿ ತಾಂತ್ರಿಕ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವಿದ್ದು, ಸರ್ಕಾರವು 200 ಎಕರೆಯಷ್ಟು ಜಮೀನು ರಾಜ್ಯ ಸರ್ಕಾರ ಮಂಜೂರು ಮಾಡಿಕೊಡ­ಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಸಚಿವ­ರಾದ ವಿ.ಶ್ರೀನಿವಾಸ್‌ ಪ್ರಸಾದ್‌, ಎಚ್‌.ಕೆ.­ಪಾಟೀಲ್‌, ದಿನೇಶ್‌ ಗುಂಡೂ­ರಾವ್‌, ರಾಮ­ಲಿಂಗಾ­ರೆಡ್ಡಿ, ಶಾಸಕರಾದ ಎನ್‌.ಎಚ್‌.­ಶಿವಶಂಕರರೆಡ್ಡಿ, ಡಾ.ಕೆ.ಸುಧಾ­­­­­ಕರ್‌, ಜೆ.ಕೆ.ಕೃಷ್ಣಾರೆಡ್ಡಿ, ಎಂ.­ರಾಜಣ್ಣ, ಎಸ್‌.ಎನ್‌.­ಸುಬ್ಬಾರೆಡ್ಡಿ, ಪಿಳ್ಳಮುನಿ­ಶಾಮಪ್ಪ, ವೆಂಕಟ­ರಮ­ಣಯ್ಯ, ವೈ.ಎ.ನಾರಾ­ಯಣ­ಸ್ವಾಮಿ, ಡಿ.ಎಸ್.­­ವೀರಯ್ಯ, ನಜೀರ್‌ ಅಹ­ಮದ್‌, ಮಾಜಿ ಸಂಸದ  ನಾರಾ­ಯಣ­ಸ್ವಾಮಿ, ಜಿ.ಪಂ.ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ, ಜಿಲ್ಲಾಧಿಕಾರಿ ಡಾ. ಆರ್‌.ವಿಶಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಿವಪ್ರಸಾದ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry