ನೀರಾವರಿ ಕಾಮಗಾರಿಗಳಿಗೆ ರೂ. 4085 ಕೋಟಿ

7

ನೀರಾವರಿ ಕಾಮಗಾರಿಗಳಿಗೆ ರೂ. 4085 ಕೋಟಿ

Published:
Updated:
ನೀರಾವರಿ ಕಾಮಗಾರಿಗಳಿಗೆ ರೂ. 4085 ಕೋಟಿ

ಗುಲ್ಬರ್ಗದಲ್ಲಿ ನಡೆದ ಸಂಪುಟ ಸಭೆಯ ಮಹತ್ವದ ನಿರ್ಧಾರ

ಗುಲ್ಬರ್ಗ:
ಬಾಗಲಕೋಟೆ, ವಿಜಾಪುರ ಜಿಲ್ಲೆಗಳ ಜೊತೆಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳ ನೀರಾವರಿ ಪ್ರದೇಶ ಅಭಿವೃದ್ಧಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ, ನವೀಕರಣಕ್ಕೆ ರೂ. 4085 ಕೋಟಿ ತೆಗೆದಿಡಲು ಗುರುವಾರ ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಭೆಯ ಬಳಿಕ ಪ್ರಮುಖ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಸ್ಯೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಈ ಸಂಪುಟ ಸಭೆಯನ್ನು ನಡೆಸಲಾಗಿದೆ. ಇದರಲ್ಲಿ ಒಟ್ಟು 60 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಬೆಳಗಾವಿಯಲ್ಲಿ  ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಿ ಆ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದರು.ಗುಲ್ಬರ್ಗದಲ್ಲಿ 2013-14ನೇ ಸಾಲಿನಿಂದಲೇ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಾಧ್ಯವಾಗುವಂತೆ ಕೂಡಲೇ ಪ್ರಸ್ತಾವವೊಂದನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಯಾವ ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲವೋ ಅಂಥ ಜಿಲ್ಲೆಗಳಿಗೆ ಮೊದಲ ಪ್ರಾಶಸ್ತ್ಯದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.ಯಾದಗಿರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ವೈದ್ಯಕೀಯ ಕಾಲೇಜು ಆರಂಭಿಸುವ ಬಗ್ಗೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಬಸವ ವಸತಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ರೂ. 1,000 ಕೋಟಿ ಸಾಲ ಪಡೆಯುವುದಕ್ಕೆ ಸರ್ಕಾರವು ಗ್ಯಾರಂಟಿ ನೀಡಿದೆ. ಗುಲ್ಬರ್ಗ ಕಂದಾಯ ವಿಭಾಗದ ಎಂಟು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ರೂ. 408 ಕೋಟಿ ಅನುದಾನ ಹಾಗೂ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮದಡಿ 13 ಪಟ್ಟಣಗಳಿಗೆ ನಿರಂತರ ನೀರು ಸರಬರಾಜು ಯೋಜನೆ ರೂ. 198 ಕೋಟಿ ಹಣ ಒದಗಿಸಲು ತೀರ್ಮಾನಿಸಲಾಗಿದೆ.ಗುಲ್ಬರ್ಗದಲ್ಲಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ `ಶರಣ ಬಸವ ಖಾಸಗಿ ವಿವಿ~ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.ಸಂಪುಟ ಉಪ ಸಮಿತಿ:
ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 371ನೇ ಕಲಂ ತಿದ್ದುಪಡಿ ಮಾಡುತ್ತಿರುವುದು ಸ್ವಾಗತಾರ್ಹ. ಇದರ ಹಿನ್ನೆಲೆಯಲ್ಲಿ ಅಭಿವೃದ್ಧಿಯನ್ನು ತೀವ್ರಗೊಳಿಸುವುದಕ್ಕಾಗಿ ಸಚಿವ ಸಂಪುಟದ ಉಪಸಮಿತಿ ಹಾಗೂ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.

 ಈ ಸಮಿತಿಯು ಮೀಸಲಾತಿ ವಿಷಯಗಳ ಮೇಲ್ವಿಚಾರಣೆ ಜೊತೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ.

 ಈ ಸಮಿತಿಗಳು ಇತರೆ ರಾಜ್ಯಗಳಿಗೆ ನೀಡಲಾದ ವಿಶೇಷ ಸ್ಥಾನಮಾನದ ಪ್ರದೇಶಗಳ ಬಗ್ಗೆಯೂ ಅಧ್ಯಯನ ವರದಿ ಸಿದ್ಧಗೊಳಿಸಲಿವೆ ಎಂದು ಹೇಳಿದರು.ಗುಲ್ಬರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಚಳವಳಿಗಾರರ ಮೇಲೆ ಹೂಡಲಾದ ಸುಮಾರು 20 ಪ್ರಕರಣಗಳಲ್ಲಿ ಮೊಕದ್ದಮೆಗಳನ್ನು ಹಿಂಪಡೆಯುವ ಬಗ್ಗೆ ನಿರ್ಣಯಿಸಲಾಗಿದೆ.  ಗುಲ್ಬರ್ಗದಲ್ಲಿನ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳಿಗೆ ಶೀಘ್ರವೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

 

ಮಾನವ ಅಧ್ಯಯನ ಕೇಂದ್ರಕ್ಕೆ ರೂ 15.77 ಕೋಟಿ

ಗುಲ್ಬರ್ಗ:ತುಮಕೂರು ವಿಶ್ವವಿದ್ಯಾಲಯದಲ್ಲಿ ಮಾನವ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ರೂ. 15.77 ಕೋಟಿ. ಗುಲ್ಬರ್ಗದ ಎಂಎಂಕೆ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ಸ್, ಗದಗಿನ ವಿಜಯ ಲಲಿತಕಲಾ ಕಾಲೇಜು ಮತ್ತು ಬೆಂಗಳೂರಿನ ಫೈನ್ ಆರ್ಟ್ಸ್ ಕಾಲೇಜಿನ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸುವುದಕ್ಕೆ ಗುಲ್ಬರ್ಗದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.ಪ್ರತಿ ತಾಲ್ಲೂಕಿನಲ್ಲಿ ದೇವರಾಜ ಅರಸು ಭವನ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಒದಗಿಸುವುದು. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ನೀಡಲಾಗುವ ಆರಂಭಿಕ ಸಾಲದ ಮರುಪಾವತಿಗಾಗಿ `ಒಂದಾವರ್ತಿ ತೀರುವಳಿ ಯೊಜನೆಗಾಗಿ ರೂ. 30 ಕೋಟಿ ನೀಡಲಾಗಿದೆ. ಆರ್ಥಿಕ ಸೇರ್ಪಡೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲು ವಿವಿಧ ಬ್ಯಾಂಕುಗಳು ಮಾಡಿರುವ ವೆಚ್ಚ ಹಿಂತಿರುಗಿಸುವುದಕ್ಕೆ ರೂ. 13 ಕೋಟಿ ನೀಡುವುದು. ಹೊಸದಾಗಿ ಘೋಷಿಸಲಾದ ಪ್ರತಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರೂ. 5 ಕೋಟಿ ಒದಗಿಸುವುದು.ಅಸಂಘಟಿತ ಕಾರ್ಮಿಕರ `ಜನಶ್ರೀ ಭೀಮಾ ಯೋಜನೆ~ ಗೆ ರೂ. 10 ಕೋಟಿ, ರಾಜ್ಯದ ಎರಡು ಜಿಲ್ಲೆಯಲ್ಲಿ ಬಹುಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ತಲಾ ರೂ. 39 ಕೋಟಿ ನೀಡಲು ತೀರ್ಮಾನಿಸಲಾಗಿದೆ.

ಸವದತ್ತಿ ತಾಲ್ಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಯಲ್ಲಮ್ಮನ ಗುಡ್ಡದಲ್ಲಿ 246 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ರೂ. 15.3 ಕೋಟಿ.

 

ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ಆವರಣದಲ್ಲಿ ನ್ಯಾಯಾಧೀಶರಿಗೆ ನಾಲ್ಕು ಹೆಚ್ಚುವರಿ ವಸತಿಗೃಹಗಳ ನಿರ್ಮಾಣಕ್ಕೆ ಅಂದಾಜು ಮೊತ್ತ ರೂ. 9 ಕೋಟಿ. ಹಾಸನ ಜಿಲ್ಲೆ ಆಲೂರು ತಾಲ್ಲೂಕು ಶಿರಗಾವರದ ನಡುವೆ ಹೇಮಾವತಿ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿಗೆ ರೂ. 8.9 ಕೋಟಿ. ಚಿಕ್ಕಮಗಳೂರಿನಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜು ಆರಂಭಿಸಲು ರೂ. 25 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry