ನೀರಾವರಿ ಕಾರ್ಯಪಡೆ ರಚನೆಗೆ ಒತ್ತಾಯ

7

ನೀರಾವರಿ ಕಾರ್ಯಪಡೆ ರಚನೆಗೆ ಒತ್ತಾಯ

Published:
Updated:
ನೀರಾವರಿ ಕಾರ್ಯಪಡೆ ರಚನೆಗೆ ಒತ್ತಾಯ

ಗುಲ್ಬರ್ಗ: ಕೃಷ್ಣಾ ಕೊಳ್ಳದ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾದ ಬೆಣ್ಣೆತೊರಾ ಕಾಲುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ್ ಆದೇಶ ನೀಡಿದರು. ಜತೆಗೆ ನೀರಾವರಿ ಯೋಜನೆಗಳಲ್ಲಿ ಗುಣಮಟ್ಟ ಕಾಪಾಡುವ ಸಲುವಾಗಿ ತಕ್ಷಣ ವಿಶೇಷ ಕಾರ್ಯಪಡೆ (ಸ್ಪೆಷಲ್ ಟಾಸ್ಕ್ ಫೋರ್ಸ್) ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಗುತ್ತಿಗೆದಾರರು, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿಷವರ್ತುಲದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರಮುಖ ನೀರಾವರಿ ಯೋಜನೆಗಳಿಗೆ ಮುಕ್ತಿ ದೊರಕಿಸುವ ಉದ್ದೇಶದಿಂದ ‘ಆಪರೇಷನ್ ಡ್ರೈ ಕ್ಯಾನಲ್’ ಕಾರ್ಯಾಚರಣೆಗೆ ಬೆಣ್ಣೆತೊರಾ ಯೋಜನಾ ಪ್ರದೇಶದ ತೆಂಗಳಿ ಕ್ರಾಸ್ ಬಳಿ ಚಾಲನೆ ನೀಡಿ ಮಾತನಾಡಿದರು.ಯೋಜನೆಯ 4ನೇ ಉಪವಿತರಣಾ ನಾಲೆ ಕಾಮಗಾರಿ ನಿರ್ವಹಿಸಲು ಮಲ್ಲಿಕಾರ್ಜುನ ಸಜ್ಜನಶೆಟ್ಟಿ ಎಂಬುವವರು 1.33 ಕೋಟಿಗೆ ಐದು ವರ್ಷದ ಹಿಂದೆ ಗುತ್ತಿಗೆ ಪಡೆದಿದ್ದರು. ಆದರೆ ಶೇಕಡ 10ರಷ್ಟೂ ಕಾಮಗಾರಿಯಾಗದೇ ಸುಮಾರು 497 ಹೆಕ್ಟೇರ್ ಪ್ರದೇಶ ನೀರಾವರಿ ವಂಚಿತವಾಗಿದೆ. ಆಗಿರುವ ಕಾಮಗಾರಿ ಕೂಡಾ ಕಳಪೆಗುಣಮಟ್ಟದ್ದು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ಮೊಕದ್ದಮೆ ದಾಖಲಿಸಲೂ ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ನೀರಾವರಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.ಬೆಣ್ಣೆತೊರಾ ಮೂಲ ಯೋಜನೆಯ ಅಂದಾಜು ವೆಚ್ಚ ಕೇವಲ ಐದು ಕೋಟಿ ರೂಪಾಯಿ. ಆದರೆ ಯೋಜನೆಗೆ ಇದುವರೆಗೆ 346.93 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಂದಿಗೂ ರೈತರ ಹೊಲಗಳಿಗೆ ನೀರು ಹರಿದಿಲ್ಲ ಎಂಬ ಆರೋಪ ವ್ಯಾಪಕವಾಗಿ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಗುಣಮಟ್ಟ ನಿಯಂತ್ರಣ ವಿಭಾಗದ ಸಿಬ್ಬಂದಿ ಜತೆ ಕಾಮಗಾರಿ ವೀಕ್ಷಿಸಿ, ಅಡೆತಡೆಗಳನ್ನು ನಿವಾರಿಸಲು ಒತ್ತು ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಬುಧವಾರ (ಫೆ.16)ದಿಂದ ಕಾಲುವೆಗಳ ಮೇಲೆ ಪಾದಯಾತ್ರೆ ಕೈಗೊಂಡು ಸಮಸ್ಯಾತ್ಮಕ ಹಳ್ಳಿಗಳಲ್ಲೇ ವಾಸ್ತವ್ಯ ಮಾಡಿ ನೀರಾವರಿ ಹೋರಾಟಗಾರರು ಮತ್ತು ರೈತ ಮುಖಂಡರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದು ಉದ್ದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry