ಶುಕ್ರವಾರ, ಮೇ 20, 2022
20 °C

ನೀರಾವರಿ, ಬಸ್, ಹಾಸ್ಟೆಲ್, ಕುಡಿಯುವ ನೀರಿಗಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಅನುಷ್ಠಾನಗೊಳಿಸುವ ಡಾ.ಪರಮಶಿವಯ್ಯ ವರದಿಗೆ ಬಜೆಟ್‌ನಲ್ಲಿ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘ, ಹಸಿರುಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.ಕರಾವಳಿ ಭಾಗದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬರಪೀಡಿತ ಜಿಲ್ಲೆಗಳಿಗೆ ನೀಡಿ ರೈತರ ಜಾನುವಾರುಗಳಿಗೆ, ಕೃಷಿಗೆ ನೀರನ್ನು ಒದಗಿಸಬೇಕು. ಜನತೆಗೆ ಅಗತ್ಯವಾದ ಕುಡಿಯುವ ನೀರನ್ನು ಪೂರೈಸಿ ಮರುಭೂಮಿಯಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ರೈತ ಸಂಘದ ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಎರಡು ದಶಕಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ; ಸರ್ಕಾರಗಳು ಮಾತ್ರ ಕಣ್ಣು ತೆರೆಯುತ್ತಿಲ್ಲ. ಕನಿಷ್ಠ ಶುದ್ಧವಾದ ಕುಡಿಯುವ ನೀರನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಇಬ್ಬಗೆ ನೀತಿ ತ್ಯಜಿಸಬೇಕು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಬಯಲು ಸೀಮೆಗೆ ಹರಿಸುವ ಪರಮಶಿವಯ್ಯ ವರದಿಯನ್ನು ಬಜೆಟ್‌ನಲ್ಲಿ ಮಂಡಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ತಾಲ್ಲೂಕು ಕಚೇರಿಯಲ್ಲಿ ಪಹಣಿ, ಮ್ಯುಟೇಷನ್ ಮತ್ತಿತರ ದಾಖಲೆ ನೀಡುವ ಗಣಕಯಂತ್ರಗಳು ತಿಂಗಳಿಗೆ 5-6 ಬಾರಿ ಕೆಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಮತ್ತೊಂದು ಗಣಕಯಂತ್ರ ಒದಗಿಸಬೇಕು ಎಂದು ಆಗ್ರಹಿಸಿದರು.ಸಂಘದ ಸಂಚಾಲಕ ಎಸ್.ವಿ.ಗಂಗುಲಪ್ಪ, ಕಾರ್ಯದರ್ಶಿ ಕೆ.ಎನ್.ಕೃಷ್ಣ, ಮುಖಂಡರಾದ ಶ್ರೀರಾಮರೆಡ್ಡಿ, ವಿ.ವೆಂಕಟೇಶಪ್ಪ, ಮುನಿಲಕ್ಷ್ಮಮ್ಮ, ಲಕ್ಷ್ಮೀನಾರಾಯಣಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.ಗ್ರಾಮೀಣ ಭಾಗಕ್ಕೆ ಬಸ್ ಓಡಿಸಿ

ಚಿಂತಾಮಣಿ: ತಾಲ್ಲೂಕಿನ ಗ್ರಾಮೀಣ ಭಾಗಗಳಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಮರ್ಪಕವಾಗಿ ಬಸ್ ಸೌಲಭ್ಯವಿಲ್ಲದೆ ತೊಂದರೆ ಪಡುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.ವಿಶೇಷವಾಗಿ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವ ಬಸ್‌ಗಳು ಸಕಾಲದಲ್ಲಿ ಸಂಚರಿಸುತ್ತಿಲ್ಲ. ಸಂಸ್ಥೆಯ ಕೆಲ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರು ಶಾಮೀಲಾಗಿ ಸರ್ಕಾರಿ ಬಸ್‌ಗಳನ್ನು ರದ್ದುಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ರಘುನಾಥರೆಡ್ಡಿ ಆರೋಪಿಸಿದ್ದಾರೆ.ಕೆಲ ರಸ್ತೆಗಳಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸದೆ ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದು ಹೋಗಬೇಕಿದೆ. ಬಹುತೇಕ ಬಡ ವಿದ್ಯಾರ್ಥಿಗಳು ತಾವೇ ವಾರಕ್ಕೆ ಎರಡು ದಿನ ದುಡಿದು ಸಂಪಾದಿಸಿ ಉಳಿದ ದಿನಗಳಲ್ಲಿ ತರಗತಿಗಳಿಗೆ ಹಾಜರಾಗುವ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ ಎಂದು ವಿಷಾದಿಸಿದರು.ತಾಲ್ಲೂಕಿನ ಗಡಿಭಾಗಗಳಾದ ಅಂಕಾಲಮಡಗು, ಯನಮಲಪಾಡಿ, ಬಟ್ಲಹಳ್ಳಿ, ಬುರುಡಗುಂಟೆ, ಎಂ.ಗೊಲ್ಲಹಳ್ಳಿ, ಗುಟ್ಟಪಾಳ್ಯ, ಲಕ್ಕೇಪಲ್ಲಿ, ಕಾಪ್ಪಲ್ಲಿ, ಪೆದ್ದೂರು, ಯಗವಕೋಟೆ ಮತ್ತಿತರ ಕಡೆಯ ರಸ್ತೆಗಳಲ್ಲಿ ರದ್ದುಪಡಿಸಿರುವ ಬಸ್‌ಗಳ ಸಂಚಾರ ಪುನರಾರಂಭಿಸಬೇಕು. ಇದರ ಜತೆ ಇನ್ನೂ ಹೆಚ್ಚಿನ ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆಯನ್ನು ಶಾಸಕರ ನೇತೃತ್ವದಲ್ಲಿ ನಡೆಸಿ, ವಿದ್ಯಾರ್ಥಿಗಳು ರೊಚ್ಚಿಗೇಳುವ ಮುನ್ನ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.ಶಿರಸ್ತೇದಾರ್ ಮನವಿಯನ್ನು ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.`ಹಾಸ್ಟೆಲ್ ಅವ್ಯವಹಾರ ತಡೆಗಟ್ಟಿ'

ಚಿಂತಾಮಣಿ: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳ      ಲ್ಲಿನ ಅವ್ಯವಹಾರ ತಡೆಗಟ್ಟಬೇಕು. ಮೂಲ ಸೌಕರ್ಯಗಳ ಕೊರತೆಗೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ಸಮಿತಿಯ ಜಿಲ್ಲಾ ಸಂಚಾಲಕ ವಿ.ನರಸಿಂಹಪ್ಪ ಮಾತನಾಡಿ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದರೂ; ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆಗಳಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ದಲಿತರಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಸಿಗುವ ಎಲ್ಲ ಸೌಲಭ್ಯಗಳನ್ನು ದಲಿತರಿಗೆ ತಲುಪಿಸುವಂಥ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ವಿದ್ಯಾರ್ಥಿ ನಿಲಯಗಳಲ್ಲಿನ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಬೇಕು. ಮೇಲ್ವಿಚಾರಕರು ವಿದ್ಯಾರ್ಥಿ ನಿಲಯಗಳಲ್ಲೇ ತಂಗಬೇಕು. ಸಿ.ಸಿ.ಕ್ಯಾಮೆರಾ ಅಳವಡಿಸಬೇಕು. ಗುಣಮಟ್ಟದ ಆಹಾರ ಪೂರೈಸಬೇಕು ಎಂಬುದು ಸೇರಿದಂತೆ 12 ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ನಡೆಸಿದರು. ಸಮಿತಿ ಮುಖಂಡರಾದ ರಾಜಣ್ಣ, ರಾಮಾಂಜನಪ್ಪ, ನಾಗರಾಜ, ಗಂಗಧಾರಪ್ಪ, ಮುಂಗಾನಹಳ್ಳಿ ನರಸಿಂಹಪ್ಪ, ಯೆಸಗಲಹಳ್ಳಿ ವೆಂಕಟರವಣ, ಮೈಲಾಪುರ ಬಸಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.ನ್ಯಾಯಬೆಲೆ ಅಂಗಡಿ ಅವ್ಯವಹಾರ: ಕರವೇ ಪ್ರತಿಭಟನೆ

ಚಿಂತಾಮಣಿ: ನಗರದ ನ್ಯಾಯಬೆಲೆ ಅಂಗಡಿಗಳಲ್ಲಿನ ಅವ್ಯವಹಾರ ತಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ಸೋಮವಾರ ಪ್ರತಿಭಟನೆ ನಡೆಸಿದರು.ನ್ಯಾಯಬೆಲೆ ಅಂಗಡಿಗಳು ನಿಗದಿತ ವೇಳೆಗೆ ಬಾಗಿಲು ತೆರೆಯುತ್ತಿಲ್ಲ. ಬೆಳಿಗ್ಗೆ 8ರಿಂದ ಮಧ್ಯಾಹ್ನ 12, ಸಂಜೆ 4ರಿಂದ 8 ಗಂಟೆ ಎಂಬ ನೀತಿನಿಯಮಾವಳಿ ಇದ್ದರೂ ಯಾವುದೇ ನ್ಯಾಯಬೆಲೆ ಅಂಗಡಿ ಇದನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಡಿತರ ಸಿಗದಿರುವುದರಿಂದ ಬಡವರು ಸಂಕಷ್ಟದಲ್ಲಿ    ದ್ದಾರೆ. ಪಡಿತರ ವಿವರವನ್ನು ಗ್ರಾಹಕರ ಗಮನಕ್ಕೆ ತರಬೇಕು. ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ಚೀಟಿ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಎನ್.ಮಂಜುನಾಥ್ ಭರವಸೆ ಈಡೇರಿಸುವುದಾಗಿ ಹೇಳಿದರು.ಜಿಲ್ಲಾ ವೇದಿಕೆ ಉಪಾಧ್ಯಕ್ಷ ಮುನಿನಾರಾಯಣಪ್ಪ, ಕರವೇ ನಗರ ಅಧ್ಯಕ್ಷ ಎನ್.ವೆಂಕಟೇಶ್‌ಬಾಬು, ಮುಖಂಡರಾದ ಕೆ.ಆರ್.ನರಸಿಂಹಪ್ಪ, ಬಿ.ಸಿ.ಜನಾರ್ದನ್, ಇಲಿಯಾಜ್ ಖಾನ್, ಆಸಿಫ್, ಎಸ್.ಲೋಕೇಶ್, ಕಾರ್ತೀಕ್, ಅರುಣ್‌ಕುಮಾರ್, ಸಿ.ಎಸ್.ತುಳಸೀವರ್ಧನ್ ಮತ್ತಿತರರು ಉಪಸ್ಥಿತರಿದ್ದರು.ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆತಡೆ

ಶಿಡ್ಲಘಟ್ಟ: ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕೇಶವಪುರದ ಗ್ರಾಮಸ್ಥರು ಸೋಮವಾರ ಶಿಡ್ಲಘಟ್ಟ ಬೆಂಗಳೂರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಗ್ರಾಮ ಪಂಚಾಯಿತಿಯಿಂದ ಕನಿಷ್ಠ ನೀರಿನ ಸೌಲಭ್ಯವೂ ನಮಗೆ ಸಿಗುತ್ತಿಲ್ಲ. ದೂರು ನೀಡಿ ಒತ್ತಾಯಿಸಿದರೆ ಕೇವಲ ಅರ್ಧ ಟ್ಯಾಂಕ್‌ನಷ್ಟು ನೀರು ಕಳುಹಿಸುತ್ತಾರೆ. ಅದು ಏನೇನೂ ಸಾಲದು. ಕೊಳವೆ ಬಾವಿಯನ್ನು ಕೊರೆಸುವುದೋ ಅಥವಾ ಪೈಪ್‌ಲೈನ್ ಮೂಲಕ ನೀರನ್ನು ತರಿಸುವ ಶಾಶ್ವತ ಕ್ರಮಗಳನ್ನು ಗ್ರಾಮ ಪಂಚಾಯಿತಿಯವರು ಕೈಗೊಳ್ಳಬೇಕು. ನಮಗೆ ನೀರಿನ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.ಒಂದು ಗಂಟೆ ಕಾಲ ಗ್ರಾಮಸ್ಥರು ನಡೆಸಿದ ರಸ್ತೆ ತಡೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹನುಮಂತಪ್ಪ ಗ್ರಾಮಸ್ಥರ ಮನವೊಲಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಅವರು ದೂರವಾಣಿ ಕರೆ ಮಾಡಿ ಟ್ಯಾಂಕರ್‌ನಲ್ಲಿ ನೀರು ತರಿಸಿ ಗ್ರಾಮಸ್ಥರಿಗೆ ವಿತರಿಸಿದರು.ಕೇಶವಪುರ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲೆಂದು ಪಂಚಾಯಿತಿ ವತಿಯಿಂದ ರಿಗ್ ಕಳುಹಿಸಿದ್ದರೆ ಖಾಸಗಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಬಿಡದೆ ವಾಪಸ್ ಕಳುಹಿಸಿದ್ದಾರೆ. ಗ್ರಾಮದ ಒಳಿತಿಗಾಗಿ ತ್ಯಾಗ ಮನೋಭಾವವಿಲ್ಲದಿದ್ದರೆ ಇಡೀ ಗ್ರಾಮವೇ ಕಷ್ಟ ಅನುಭವಿಸುವಂತಾಗುತ್ತದೆ ಎಂದು ಗ್ರಾಮಸ್ಥರು ಈ ಸಂದರ್ಭ ತಿಳಿಸಿದರು.ರೈತರ ಬೇಡಿಕೆ ಈಡೇರಿಕೆಗೆ ಮನವಿ

ಶಿಡ್ಲಘಟ್ಟ: ರೈತರ ವ್ಯವಸಾಯದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ತಾಲ್ಲೂಕು ರೈತಕೂಟಗಳ ಒಕ್ಕೂಟದ ಪರವಾಗಿ ಒಕ್ಕೂಟದ ಅಧ್ಯಕ್ಷ      ಎಚ್.ಜಿ.ಗೋಪಾಲಗೌಡ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಪತ್ರ ನೀಡಿದರು.ಕೃಷಿ ಇಲಾಖೆಯ ಶತಮಾನೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ವಿಕಾಸಸೌಧದಲ್ಲಿ ಕೃಷಿ ಪರಿಣಿತರು, ವಿಜ್ಞಾನಿಗಳು ಮತ್ತು ಆರ್ಥಿಕ ತಜ್ಞರೊಂದಿಗೆ ಈಚೆಗೆ ನಡೆದ ಕೃಷಿ ಸಚಿವರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೃಷಿ ಪಂಡಿತರ ನಿಯೋಗದೊಂದಿಗೆ ಭಾಗವಹಿಸಿ ಕೃಷಿ ಅಭಿವೃದ್ಧಿಗೆ ಪೂರಕ ಸಲಹೆ, ಬೇಡಿಕೆಗಳ ಮನವಿ ನೀಡಿದರು.ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ, ಹನಿ ನೀರಾವರಿ ಪದ್ಧತಿಗೆ ಶೇಕಡಾ 100ರಷ್ಟು ರಿಯಾಯಿತಿ, ಮಳೆ ಆಶ್ರಿತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಪ್ರಕೃತಿ ವಿಕೋಪದ ನಷ್ಟಕ್ಕೆ ಪರಿಹಾರ ಧನ ಹೆಚ್ಚಳ, ರೇಷ್ಮೆ -ದ್ರಾಕ್ಷಿ-ಮಾವು-ತರಕಾರಿಗಳಿಗೆ ಖರೀದಿ ಕೇಂದ್ರಗಳ ಸ್ಥಾಪನೆ, ಬೆಳೆ ಹಣ್ಣು ತರಕಾರಿಗಳ ಶೇಖರಣಾ ಗೋದಾಮುಗಳ ನಿರ್ಮಾಣಕ್ಕೆ ಸಹಾಯಧನ, ಸಾವಯವ ಕೃಷಿಗೆ ಪ್ರೋತ್ಸಾಹ, ಒಂದು ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಮನ್ನಾ, ಬೆಳೆ ವಿಮೆಯನ್ನು ಎಲ್ಲ ಬೆಳೆಗಳಿಗೂ ವಿಸ್ತರಿಸಬೇಕು.ರೈತರಿಗೆ ಮಾಹಿತಿ ನೀಡಲು ಕೃಷಿ ಪದವಿಧರರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೇಮಿಸುವುದು ಸೇರಿದಂತೆ ವಿವಿಧ ಸಲಹೆಗಳು ಈ ಮನವಿ ಪತ್ರದಲ್ಲಿವೆ.ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಆನೂರು ವೀರಕೆಂಪಣ್ಣ, ಬಿ.ಎಂ.ರಾಮಾಂಜಿನಪ್ಪ, ಕೈವಾರ ಸುಬ್ಬಾರೆಡ್ಡಿ, ಯಲುವಳ್ಳಿ ಎನ್.ರಮೇಶ್ ಜಿಲ್ಲಾ ಕೃಷಿ ಪಂಡಿತರ ನಿಯೋಗದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.