ಸೋಮವಾರ, ಜೂನ್ 14, 2021
21 °C

ನೀರಾವರಿ ಯೋಜನೆಗಳಿಗೆ ಚಾಲನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲೆಯ 3.22 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸುವ ₨4,000 ಕೋಟಿ ಮೊತ್ತದ ವಿವಿಧ ನೀರಾವರಿ ಕಾಮಗಾರಿಗಳಿಗೆ ಇದೇ 5ರಂದು ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.ಸಮಾರಂಭಕ್ಕಾಗಿ ಇಲ್ಲಿಯ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ವಿಶಾಲವಾದ ಶಾಮಿಯಾನ ಹಾಕಲಾಗಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸಿದ್ಧತೆಯ ಪರಿಶೀಲನೆ ನಡೆಸಿದರು.ನೀರಾವರಿ ಇಲಾಖೆ ಕಾರ್ಯಕ್ರಮದ ಉಸ್ತು­ವಾರಿ ನೋಡಿಕೊಳ್ಳುತ್ತಿದ್ದು, ಆಲಮಟ್ಟಿ ವಲಯದ ಮುಖ್ಯ ಎಂಜಿನಿಯರ್‌ ಸಿ.ಅನಂತರಾಮು ನೇತೃತ್ವದಲ್ಲಿ ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.ಮುಖ್ಯ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ನೀರು, ನೀರಾವರಿಯ ಮಹತ್ವ ವಿವರಿಸುವ ಜಾನಪದ, ಭಾವಗೀತೆಗಳ ಗಾಯನದ ಕಾರ್ಯಕ್ರಮವನ್ನು ಬೆಂಗಳೂರಿನ ರಾಮಚಂದ್ರ ಹಡಪದ ನೇತೃತ್ವದ ತಂಡ ನಡೆಸಿಕೊಡಲಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜಿಲ್ಲೆಯ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಿದ್ದಾರೆ.ಸಭೆ: ವಿಜಾಪುರ ಜಿಲ್ಲೆಗೆ ಇತಿಹಾಸದಲ್ಲಿಯೇ ಅತ್ಯಧಿಕ ಕೊಡುಗೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರನ್ನು  ಅಭಿನಂದಿಸಲು ಬುಧವಾರ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಯೋಜನೆಗಳ ಚಾಲನಾ ಸಮಾರಂಭದಲ್ಲಿ ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಜಲಸಂಪನ್ಮೂಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದರು.ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನಗರ ಶಾಸಕ ಡಾ.ಮಕ್ಬೂಲ್‌ ಬಾಗವಾನ, ನಗರದ ಎಲ್ಲ 35 ವಾರ್ಡ್‌ಗಳ ಕಾರ್ಯಕರ್ತರು ತಮ್ಮ ವಾರ್ಡ್‌ಗಳಿಂದ ಮೆರವಣಿಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು.ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅಜಾದ್‌ ಪಟೇಲ್‌, ಟಪಾಲ ಎಂಜಿನಿಯರ್‌, ರಜಾಕ್‌ ಹೊರ್ತಿ, ಅಪ್ತಾಬ ಖಾದ್ರಿ, ಸಂಗಪ್ಪ ಹೇರಲಗಿ, ಹನಮಂತ ಕೊಕಟನೂರ, ರವಿಗೌಡ ಪಾಟೀಲ, ನಿಂಗನಗೌಡ ಪಾಟೀಲ, ವಿ.ಎಸ್.ಪಾಟೀಲ, ಸುರೇಶಗೌಡ ಪೀರಾಪುರ, ಕಲ್ಲನಗೌಡ ಬಿರಾದಾರ, ಹಾಸೀಂಪೀರ ವಾಲಿಕಾರ, ಡಾ.ಗಂಗಾಧರ ಸಂಬಣ್ಣಿ, ಜ್ಯೋತಿರಾಮ ಪವಾರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.