ನೀರಾವರಿ ಯೋಜನೆಗಳ ಅಕ್ರಮ ತಡೆಗೆ ಆಪರೇಷನ್ ಡ್ರೈ ಕ್ಯಾನಲ್ವಿಷವರ್ತುಲ ಭೇದಿಸಲು ಕಾರ್ಯತಂತ್ರ

7

ನೀರಾವರಿ ಯೋಜನೆಗಳ ಅಕ್ರಮ ತಡೆಗೆ ಆಪರೇಷನ್ ಡ್ರೈ ಕ್ಯಾನಲ್ವಿಷವರ್ತುಲ ಭೇದಿಸಲು ಕಾರ್ಯತಂತ್ರ

Published:
Updated:

ಗುಲ್ಬರ್ಗ: ಕೃಷ್ಣಾ ಕೊಳ್ಳದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಆಗಿರುವ ಅವ್ಯವಹಾರಗಳ ವಿಷವರ್ತುಲ ಭೇದಿಸಲು ಕೃಷ್ಣಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಾರ್ಯತಂತ್ರ ರೂಪಿಸಿದ್ದು, ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ‘ಆಪರೇಷನ್ ಡ್ರೈ ಕ್ಯಾನಲ್’ ಎಂಬ ವಿಶಿಷ್ಟ ಕಾರ್ಯಾಚರಣೆ ಹಮ್ಮಿಕೊಂಡಿದೆ.“ಶಾಶ್ವತ ಬರಪೀಡಿತ ಪ್ರದೇಶದ ರೈತರ ಬಾಳು ಹಸನು ಮಾಡುವ ದೃಷ್ಟಿಯಿಂದ ಅನುಷ್ಠಾನಗೊಂಡಿರುವ ಮಹತ್ವದ ನೀರಾವರಿ ಯೋಜನೆಗಳು ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ‘ಗ್ಯಾಂಗಪ್’ನಿಂದಾಗಿ ನಿಷ್ಪ್ರಯೋಜಕವಾಗಿವೆ. ಒಣಗಿದ ಕಾಲುವೆಗಳಲ್ಲಿ ಮತ್ತೆ ನೀರುಹರಿದು ಬರಡುಭೂಮಿ ಹಸಿರಾಗಬೇಕು ಎನ್ನುವುದೇ ಈ ವಿಶಿಷ್ಟ ಕಾರ್ಯಾಚರಣೆಯ ಉದ್ದೇಶ. ಮಂಗಳವಾರ (ಫೆ.15) ಕಾರ್ಯಾಚರಣೆ ಆರಂಭವಾಗಲಿದೆ” ಎಂದು ಕಾಡಾ ಅಧ್ಯಕ್ಷ ಗಿರೀಶ ಮಟ್ಟಣ್ಣವರ್ ‘ಪ್ರಜಾವಾಣಿ’ಗೆ ತಿಳಿಸಿದರು.ರಾಜ್ಯದಲ್ಲಿ ‘ನೀರಾವರಿ ದಶಕ’ದ ಕಲ್ಪನೆ ಸಾಕಾರದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದ್ದು, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಮುಖ್ಯ ಉದ್ದೇಶ ಎಂದರು.ಕೃಷ್ಣಾ ಕೊಳ್ಳದ ಪ್ರಮುಖ ನೀರಾವರಿ ಯೋಜನೆಗಳಾದ ಕಾರಂಜಾ, ಅಮರ್ಜಾ, ಬೆಣ್ಣೆತೊರಾ, ಮುಲ್ಲಾಮಾರಿ, ಗಂಡೋರಿ ನಾಲಾ, ಭೀಮಾ ಏತ ನೀರಾವರಿಯಂಥ ಮಹತ್ವಾಕಾಂಕ್ಷಿ ಯೋಜನೆಗಳಿಗೆ 1458.64 ಕೋಟಿ ರೂಪಾಯಿ ಖರ್ಚಾಗಿದ್ದರೂ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ. ಗುಲ್ಬರ್ಗ ಜಿಲ್ಲೆಯ ಬಹುತೇಕ ಕಾಲುವೆಗಳಿಗೆ ಸಿಮೆಂಟ್ ಲೈನಿಂಗ್ ಬದಲು ಪರಸಿ ಕಲ್ಲುಗಳನ್ನು ಜೋಡಿಸಲಾಗಿದ್ದು, ಪ್ರತಿ ವರ್ಷ ಕಲ್ಲುಗಳನ್ನು ರೈತರು ಕದ್ದು ಒಯ್ದಿದ್ದಾರೆ ಎಂಬ ನೆಪ ನೀಡಿ ಹಳೆ ಕಲ್ಲುಗಳಿಗೆ ಹೊಸ ಬಿಲ್ಲು ಮಾಡಿ ಗುತ್ತಿಗೆದಾರರು ವಂಚಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳ ಸಮಗ್ರ ಮಾಹಿತಿಗಳೊಂದಿಗೆ ಕಾಮಗಾರಿ ನಡೆದಿರುವ ಸ್ಥಳಗಳನ್ನು ಖುದ್ದು ವೀಕ್ಷಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು” ಎಂದು ವಿವರಿಸಿದರು.“ಕಾಲುವೆ ದಂಡೆಯಲ್ಲಿ ದಿನಕ್ಕೆ 12ರಿಂದ 15 ಕಿಲೋಮೀಟರ್ ಪಾದಯಾತ್ರೆ ನಡೆಸಿ ವಾಸ್ತವ ಚಿತ್ರಣ ತಿಳಿದುಕೊಳ್ಳಲಾಗುವುದು. ಕಾಲುವೆ ಪ್ರದೇಶದಲ್ಲೇ ವಾಸ್ತವ್ಯ ಹೂಡಿ, ಆ ಭಾಗದ ನೀರಾವರಿ ಹೋರಾಟಗಾರರು, ರೈತಮುಖಂಡರು ಮತ್ತು ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಲಾಗುವುದು. ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ತಾತ್ವಿಕ ಕೊನೆ ಕಾಣಿಸುವುದು ಉದ್ದೇಶ” ಎಂದರು.“ಇಲಾಖೆ ಅಧಿಕಾರಿಗಳು ಮತ್ತು ಗುಣಮಟ್ಟ ನಿಯಂತ್ರಣ ವಿಭಾಗದ ಸಿಬ್ಬಂದಿಯ ಜತೆಗೆ ಕಾಮಗಾರಿ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿಯಾಗಿದ್ದರೆ ಅಂಥ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು. ನೀರಾವರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಗಿಯದೇ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಉದಾಹರಣೆಗೆ 22500 ಎಕರೆಗೆ ನೀರಾವರಿ ಕಲ್ಪಿಸುವ 5.7 ಕೋಟಿ ಮೂಲ ಅಂದಾಜು ವೆಚ್ಚದ ಅಮರ್ಜಾ ಯೋಜನೆಗೆ ಇದುವರೆಗೆ ವೆಚ್ಚವಾದ ಹಣ ಹಣ 214 ಕೋಟಿ. ಎಡದಂಡೆ ಹಾಗೂ ಬಲದಂಡೆ ಮುಖ್ಯ ಕಾಲುವೆಗಳ ಕಾಮಗಾರಿಯೇ ಕಳಪೆಯಾಗಿದ್ದು, ಒಂದಿಂಚು ಜಮೀನಿಗೂ ನೀರು ಹರಿದಿಲ್ಲ. ವಿತರಣಾ ಕಾಲುವೆಗಳನ್ನು ಹುಡುಕಬೇಕಾದ ಪರಿಸ್ಥಿತಿ. ಇತರ ಕಾಲುವೆಗಳಂತೂ ದಾಖಲೆಯಲ್ಲಷ್ಟೇ ಇವೆ. ಇಂಥ ಅಂಶಗಳ ಬಗ್ಗೆಯೂ ಕಾರ್ಯಾಚರಣೆ ವೇಳೆ ಗಮನ ಹರಿಸಲಾಗುವುದು”ಪ್ರತಿ ಯೋಜನೆ ವ್ಯಾಪ್ತಿಯ ಪ್ರದೇಶಗಳಲ್ಲಿ ನಾಲ್ಕು ದಿನ ಇಂಥ ಕಾರ್ಯಾಚರಣೆ ಕೈಗೊಂಡು ಸಮಗ್ರ ವರದಿಯನ್ನು ಮುಖ್ಯಮಂತ್ರಿ, ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೂ ಸಲ್ಲಿಸಲಾಗುವುದು. ರಾಜ್ಯದಲ್ಲಿ ನೀರಾವರಿ ಯೋಜನೆಗಳ ವೈಫಲ್ಯ ಮತ್ತು ಅವ್ಯವಹಾರಗಳ ಬಗ್ಗೆ ಸಾಕಷ್ಟು ಮಂದಿ ದನಿ ಎತ್ತಿದ್ದಾರೆ. ಆದರೆ ಯಾವ ಹೋರಾಟವೂ ತಾತ್ವಿಕ ಕೊನೆ ಕಂಡಿಲ್ಲ. ಹಿಂದೆ ರಸ್ತೆ ಕಾಮಗಾರಿಗಳ ಬಗ್ಗೆಯೂ ಇಂಥದ್ದೇ ಆರೋಪ ಇತ್ತು. ಆದರೆ ಕ್ಯಾಪ್ಟನ್ ರಾಜಾರಾವ್ ನೇತೃತ್ವದ ವಿಶೇಷ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚಿಸಿದ ಬಳಿಕ ಈ ಸಮಸ್ಯೆ ಬಹುತೇಕ ಬಗೆಹರಿಯಿತು. ಕೃಷ್ಣಾ ಕಾಡಾ ವ್ಯಾಪ್ತಿಯ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೂ ಇಂಥದ್ದೇ ಕಾರ್ಯಪಡೆ ರಚಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಮಟ್ಟಣ್ಣವರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry