ಶುಕ್ರವಾರ, ನವೆಂಬರ್ 15, 2019
21 °C

`ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ'

Published:
Updated:

ಗೋಕಾಕ: ರೈತರ ಹಿತದೃಷ್ಟಿಯಿಂದ ಅನುಷ್ಠಾನಗೊಳ್ಳಬೇಕಿರುವ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ತಾ.ಪಂ. ಸಭಾ ಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಬೃಹತ್ ಹಾಗೂ ಮಧ್ಯಮ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ  ಬಳಿಕ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಯೋಜನೆಯ ಲಾಭ ಆದಷ್ಟು ಬೇಗ ರೈತರಿಗೆ ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.ಕೃಷಿಕರಿಗಾಗಿಯೇ ಸರ್ಕಾರ ಪ್ರತಿ ಬಜೆಟ್‌ನಲ್ಲಿ ಹತ್ತು ಸಾವಿರ ಕೋಟಿ ನೀಡುತ್ತಿದೆ. ಇದು ಸದ್ಬಳಕೆಯಾಗಬೇಕಿದೆ ಎಂದರು.ಜಿಲ್ಲೆಯ ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ನೀರಾವರಿ ಯೋಜನೆಗಳಲ್ಲಿ 18 ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದರೂ ಶೇ 60 ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ.  ಮುಂದಿನ ಐದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.ಸದ್ಯ ಜಿಲ್ಲೆಯ ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕಾಲುವೆಗಳು ಹಳ್ಳ, ಕೊಳ್ಳ, ಕೆರೆಗಳು, ನಾಶಗೊಂಡು ಸಾಕಷ್ಟು ನೀರು ಪೋಲಾಗುತ್ತಿದೆ. ಇದನ್ನು ತಡೆಯಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಿದೆ ಎಂದರು.ನಿಗಮದಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ತಿಳಿದಿದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳುವುದಾಗಿ ಅವರು ತಿಳಿಸಿದರು.ಕಳಸಾ ಬಂಡೂರಿ ನಾಲೆ ಯೋಜನೆ ನೆರೆಯ ಗೋವಾ ರಾಜ್ಯದ ತಗಾದೆ ಹಿನ್ನೆಲೆಯಲ್ಲಿ ಸದ್ಯ ಸ್ಥಗಿತಗೊಂಡಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮತ್ತು ನೆರೆಯ ಗೋವಾ ಸರ್ಕಾರದ ಜೊತೆ ಮಾತುಕತೆ ನಡೆಸುವ ನಚಿಂತನೆ ಹೊಂದಿರುವುದಾಗಿ ಸತೀಶ ಜಾರಕಿಹೊಳಿ ತಿಳಿಸಿದರು.ಇದಕ್ಕೂ ಮೊದಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಕೃಷಿಕರು, ತಮ್ಮ ಭಾಗದಲ್ಲಿ ಇರುವ ಸಮಸ್ಯೆಗಳನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.        

                                                                                                                                                                                                                                                                                                                                                           

ಬೆಳಗಾವಿಯ ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ಎ.ಎನ್.ಜಾನವೇಕರ, ಅಧೀಕ್ಷಕ ಎಂಜಿನಿಯರ್ ಇ.ಎಚ್. ಚೊಳಚಗುಡ್ಡ, ಮುಖ್ಯ ಎಂಜಿನಿಯರ್ ಶರಣಪ್ಪ ಸುಲಗುಂಟೆ, ಕೆ.ಎಫ್. ಹುಲಕುಂದ, ವಿಶೇಷ ಜಿಲ್ಲಾಧಿಕಾರಿ ಎಂ.ಆರ್.ರವಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)