ಬುಧವಾರ, ಜುಲೈ 15, 2020
25 °C

ನೀರಾವರಿ: ರೈತರ ಹೋರಾಟಕ್ಕೆ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿ: ರೈತರ ಹೋರಾಟಕ್ಕೆ ಸ್ಪಂದಿಸಿ

ವಿಜಾಪುರ: ಮುಳವಾಡ ಏತ ನೀರಾವರಿ ಬಾಕಿ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಬಸವನ ಬಾಗೇವಾಡಿ ತಾಲ್ಲೂಕಿನ ಮಟ್ಟಿಹಾಳ ಕ್ರಾಸ್‌ನಲ್ಲಿ ರೈತರು ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಮುಂದುವರಿದಿದೆ.ಏತನ್ಮಧ್ಯೆ ಬಸವನ ಬಾಗೇವಾಡಿ ಶಾಸಕ, ವಿಜಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲರು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾಗಿ ಈ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಮುಳವಾಡ ಏತ ನೀರಾವರಿ ಯೋಜನೆ ಜಾರಿಯಾಗಲೇಬೇಕು. ನ್ಯಾ.ಬ್ರಿಜೇಶ್ ಕುಮಾರ ನೇತೃತ್ವದ ಎರಡನೆಯ ನ್ಯಾಯಮಂಡಳಿ ತೀರ್ಪು ನೀಡಿದ್ದು, ಈಗ ಇದೂ ಸೇರಿದಂತೆ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನೀರಾವರಿ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸಬೇಕಿದೆ. ಅದಕ್ಕಾಗಿ ಅಗತ್ಯ ಹಣ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.‘ಮುಳವಾಡ ಏತ ನೀರಾವರಿ ಯೋಜನೆಯ ಉಳಿದ ಹಂತಗಳ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಆ ಭಾಗದ ರೈತರು ಮಟ್ಟಿಹಾಳ ಕ್ರಾಸ್‌ನಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಠಾಧೀಶರೂ ಇದರಲ್ಲಿ ಪಾಲ್ಗೊಂಡಿದ್ದಾರೆ. ಈ ಹೋರಾಟಗಾರರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಅದನ್ನು ಈಡೇರಿಸುವುದು ಸರ್ಕಾರದ ಧರ್ಮ. ತಕ್ಷಣವೇ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಈ ಹೋರಾಟಗಾರರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.ಹೋರಾಟದ ಸಚಿತ್ರ ಮಾಹಿತಿಯನ್ನೊಳಗೊಂಡ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ತಾವೂ ಸಹ ಈ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದ್ದು, ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿರುವುದಾಗಿ ಭರವಸೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.