`ನೀರಾವರಿ ಹೋರಾಟದಿಂದ ಹೆಚ್ಚು ಸಾಧನೆಯಾಗಿಲ್ಲ'

7
ರಾಜ್ಯ ಸರ್ಕಾರದ ಭರವಸೆ ನಂಬುವುದು ಕಷ್ಟ

`ನೀರಾವರಿ ಹೋರಾಟದಿಂದ ಹೆಚ್ಚು ಸಾಧನೆಯಾಗಿಲ್ಲ'

Published:
Updated:

ಚಿಕ್ಕಬಳ್ಳಾಪುರ: `ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ. ಆದರೆ ಅವರ ಅಧಿಕಾರದ ಅವಧಿಯಲ್ಲೇ ನೀರಾವರಿ ಯೋಜನೆಗೆ ಚಾಲನೆ ದೊರೆಯುತ್ತದೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ.

ಸರ್ಕಾರದ ಯಾವುದೇ ರೀತಿಯ ಕಾಲಮಿತಿಯಿಲ್ಲದೇ ಮತ್ತು ಲಿಖಿತ ಭರವಸೆಯಿಲ್ಲದೇ ಯೋಜನೆಗೆ ಶೀಘ್ರವೇ ಚಾಲನೆ ದೊರೆಯುತ್ತದೆ ಮತ್ತು ಪೂರ್ಣಗೊಳ್ಳುತ್ತದೆಯೆಂದು ಭಾವಿಸುವುದು ಕಷ್ಟ'.ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದವರು ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಮತ್ತು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿರೆಡ್ಡಿ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರನ್ನು ಸನ್ಮಾನಿಸಲು ಮತ್ತು ಹೋರಾಟಗಾರರನ್ನು ಕೃತಜ್ಞತೆ ಸಲ್ಲಿಸಲು ನಗರದ ಹರ್ಷೋದಯ ಕಲ್ಯಾಣಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅವರು, `ಭರವಸೆ ಮಾತುಗಳನ್ನು ನಂಬಿಕೊಂಡು ಹೋರಾಟಕ್ಕೆ ಜಯ ಸಿಕ್ಕಿದೆ ಎಂಬ ಭಾವನೆ ಹೊಂದುವುದು ತಪ್ಪು' ಎಂದರು.`ಶಾಶ್ವತ ನೀರಾವರಿ ಯೋಜನೆ ಒತ್ತಾಯಿಸಿ 65 ದಿನಗಳ ಕಾಲದ ನಡೆದ ಹೋರಾಟದಿಂದ ಹೆಚ್ಚು ಪ್ರಯೋಜನವಾಗಿಲ್ಲ. ಹೆಚ್ಚಿನ ಸಾಧನೆಯಾಗಿಲ್ಲ. ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ಸರ್ಕಾರದಿಂದ ಸ್ಪಂದನೆ ದೊರೆತಿದೆಯೇ ಹೊರತು ಹೋರಾಟಕ್ಕೆ ಪೂರ್ಣಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಹೋರಾಟದ  ಗುರಿ ತಲುಪಲು ಇನ್ನೂ ಉದ್ದನೆಯ ಮಾರ್ಗವಿದೆ.

ಹಲವಾರು ಅಡತಡೆಗಳನ್ನು ದಾಟಿಕೊಂಡು ಮುನ್ನಡೆಯಬೇಕಿದೆ. ಹೋರಾಟಕ್ಕೆ ಪ್ರತಿಫಲ ದೊರೆತಿದೆಯೆಂದು ವಿಜಯೋತ್ಸವ ಅಥವಾ ಹರ್ಷೋದ್ಗಾರ ವ್ಯಕ್ತಪಡಿಸುವುದು ಅಷ್ಟು ಉಚಿತವಲ್ಲ' ಎಂದು ರಮೇಶ್‌ಕುಮಾರ್ ತಿಳಿಸಿದರು.`ಚಿಕ್ಕಬಳ್ಳಾಪುರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಕೈಗೊಳ್ಳಲಾದ ಅನಿರ್ದಿಷ್ಟಾವಧಿ ಧರಣಿಗೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು ನಿಜ. ವಿವಿಧ ಸಂಘಟನೆಗಳ ಬೆಂಬಲ ಮತ್ತು ವಿಶ್ವಾಸವನ್ನು ಅದೇ ರೀತಿಯಲ್ಲಿ ಇಟ್ಟುಕೊಂಡು ಇತರ ಜಿಲ್ಲೆಗಳಿಗೂ ಹೋರಾಟ ವಿಸ್ತರಿಸಬೇಕು.

ಬಯಲುಸೀಮೆ ಜಿಲ್ಲೆಗಳ ಮುಖಂಡನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯ ಸಮಿತಿಯನ್ನು ರಚಿಸಬೇಕು. ಸಮಿತಿ ರಚನೆ ಮತ್ತು ಇತರ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಹೋರಾಟ ತೀವ್ರಗೊಳಿಸಬೇಕೆ ಹೊರತು ತಾತ್ಕಾಲಿಕ ಭರವಸೆಗಳನ್ನು ನಂಬಿ ಸುಮ್ಮನಾಗಬಾರದು' ಎಂದು ಅವರು ಹೇಳಿದರು.`ಶಾಶ್ವತ ನೀರಾವರಿ ಹೋರಾಟದಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ವಿಷಯವನ್ನು ನನಗೆ ಯಾರು ತಿಳಿಸಲಿಲ್ಲ. ನಾನು ಅಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದರೆ, ಯೋಜನೆಯ ಕಾಲಮಿತಿ ಮತ್ತು ಇತರ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೆ.

ಯೋಜನೆಯ ರೂಪುರೇಷೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಸರ್ಕಾರವು ಭರವಸೆ ನೀಡಿದೆಯೆಂದು ನಂಬಿ, ಎಲ್ಲವನ್ನೂ ಮರೆತು ಹೋರಾಟ ನಿಲ್ಲಿಸುವುದು ಸರಿಯಲ್ಲ. ಜಿಲ್ಲೆಗೆ ನೀರು ಬರುವವರೆಗೆ ಹೋರಾಟ ನಡೆಯಬೇಕು' ಎಂದು ಜ್ಯೋತಿರೆಡ್ಡಿ ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ಪರಮಶಿವಯ್ಯ ಮಾತನಾಡಿ, `ನನಗೆ ಸನ್ಮಾನ ಮತ್ತು ಸತ್ಕಾರ ಇಷ್ಟವಿಲ್ಲ. ವೈಭವದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಕಾಲಹರಣವಾಗುತ್ತದೆ ಹೊರತು ಹೆಚ್ಚು ಪ್ರಯೋಜನವಾಗಲ್ಲ. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವವರೆಗೆ ಹೋರಾಟ ನಡೆಯಬೇಕು' ಎಂದರು.ಆದಿಚುಂಚನಗಿರಿ ಮಠದ ಮಂಗಳಾನಂದನಾಥ ಸ್ವಾಮೀಜಿ, ಶಾಸಕ ಕೆ.ಪಿ.ಬಚ್ಚೇಗೌಡ, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಮಿ, ಹೋರಾಟ ಸಮಿತಿ ಮುಖಂಡರಾದ ಆಂಜನೇಯರೆಡ್ಡಿ, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಕೆ.ಸಿ.ರಾಜಾಕಾಂತ್, ಸು.ದಾ.ವೆಂಕಟೇಶ್, ಲಕ್ಷ್ಮಿನಾರಾಯಣ, ಮಂಚನಬಲೆ ಶ್ರೀನಿವಾಸ್, ಮೋಹನ್, ಪೃಥ್ವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry