ನೀರಾವರಿ ಹೋರಾಟ: ಜನಜಾಗೃತಿಗೆ ಚಾಲನೆ

7

ನೀರಾವರಿ ಹೋರಾಟ: ಜನಜಾಗೃತಿಗೆ ಚಾಲನೆ

Published:
Updated:

ವಿಜಾಪುರ: ಅವಳಿ ಜಿಲ್ಲೆಗಳ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಪಕ್ಷಾತೀತ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ನೀರಾವರಿ ಯೋಜನೆಗಳ ಸ್ಥಿತಿಗತಿ ಹಾಗೂ ಹೋರಾಟದ ಅನಿವಾರ್ಯತೆ ಕುರಿತು ತಿಂಗಳ ಕಾಲ ಜನಜಾಗೃತಿ ಮೂಡಿಸಲಾಗುವುದು ಎಂದು ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ಹೇಳಿದರು.ಪ್ರತಿ ವರ್ಷ 10 ಕೋಟಿ ರೂಪಾಯಿ ಮೀಸಲಿಟ್ಟು, ಐದು ವರ್ಷಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ವಿಜಾಪುರದಿಂದ ಆಲಮಟ್ಟಿ ಜಲಾಶಯದವರೆಗೆ ಪಕ್ಷಾತೀತ ಪಾದಯಾತ್ರೆ ನಡೆಸಲಾಗುವುದು ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜಿಲ್ಲೆಯ ನೀರಾವರಿಗೆ ಆಗ್ರಹಿಸಿ ಹಿಂದೆಯೂ ಸಾಕಷ್ಟು ಹೋರಾಟಗಳು ನಡೆದಿವೆ. ಕೃಷ್ಣಾ ಎರಡನೆಯ ನ್ಯಾಯಾಧೀಕರಣದ ತೀರ್ಪು ಬಂದು 10 ತಿಂಗಳು ಕಳೆದಿದೆ. ನಮ್ಮ ಪಾಲಿನ ನೀರು ಹಂಚಿಕೆಯಾಗಿದೆ. ಈ ನೀರಿನ ಸದ್ವಿನಿಯೋಗಕ್ಕೆ ಬೇಕಿರುವ ಪುನರ್ವಸತಿ- ಪುನರ್ ನಿರ್ಮಾಣ ಹಾಗೂ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ವಿರುದ್ಧ ನಾವು ದ್ವನಿ ಎತ್ತಿ ಹೋರಾಟ ನಡೆಸದಿದ್ದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಈ ಹಂತದಲ್ಲಿ ಹೋರಾಟದ ಅವಶ್ಯಕತೆಯೂ ಹೆಚ್ಚಿದೆ ಎಂದರು.`ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಾಗುತ್ತದೆ. ನಮ್ಮ ಜಮೀನಿಗೆ ನೀರು ಬರುತ್ತದೆ ಎಂದು ಕೆಲ ಜನ ಭಾವಿಸಿದ್ದಾರೆ. ವಿಷಯ ಅಷ್ಟು ಸರಳ ಇಲ್ಲ. ಪುನರ್ವಸತಿ-ಪುನರ್ ನಿಮಾಣ ಹಾಗೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳ ಕಾಮಗಾರಿಯನ್ನು ಏಕಕಾಲಕ್ಕೆ ಕೈಗೆತ್ತಿಕೊಳ್ಳಬೇಕಾಗುತ್ತದೆ. ಇದಕ್ಕೆ ಬೃಹತ್ ಮೊತ್ತದ ಹಣವೂ ಬೇಕಿದೆ. ಈ ವರ್ಷ ಹೆಚ್ಚಿನ ಅನುದಾನ ನೀಡಿ ಬರುವ ವರ್ಷದಿಂದ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿಯೇ ವರ್ಷಕ್ಕೆ 10 ಸಾವಿರ ಕೋಟಿ  ರೂಪಾಯಿ ಮೀಸಲಿಡಬೇಕು ಎಂಬುದು ನಮ್ಮ ಒತ್ತಾಯ~ ಎಂದು ಹೇಳಿದರು.`ಮುಳವಾಡ ಏತ ನೀರಾವರಿಯ ಬಾಕಿ ಕಾಮಗಾರಿಯನ್ನು 640 ಮೀಟರ್ ಎತ್ತರದ ವರೆಗೆ ಮಾಡಿದರೆ ಒಂದು ಲಕ್ಷ ಎಕರೆ ಕ್ಷೇತ್ರ ಹೆಚ್ಚುವರಿಯಾಗಿ ನೀರಾವರಿಗೊಳಪಡಲಿದೆ. ಗುತ್ತಿಬಸವಣ್ಣ, ಚಿಮ್ಮಲಗಿ ಸೇರಿದಂತೆ ಅವಳಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹಾಗೂ ಗ್ರಾಮಗಳ ಸ್ಥಳಾಂತರಕ್ಕೆ ಹಣ ಬೇಕು. ಈ ಯೋಜನೆಗಳಿಗೆ ಸರ್ಕಾರ ಸಾಲ ಇಲ್ಲವೆ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಲು ಮುಂದಾದರೆ ಕಾಂಗ್ರೆಸ್ ಪಕ್ಷದಿಂದ ಬೆಂಬಲ ನೀಡುವಂತೆ ನಮ್ಮ ಪಕ್ಷದ ಮುಖಂಡರನ್ನು  ಕೋರುತ್ತೇವೆ~ ಎಂದು ಹೇಳಿದರು.`ನವೆಂಬರ್ 7ರ ವರೆಗೆ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತೇವೆ. ಸ್ಥಳೀಯ ಜ್ಞಾನಯೋಗಾಶ್ರಮದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಮೂಲಕ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಪ್ರಮುಖ ಮಠಾಧೀಶರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸುತ್ತೇವೆ. ಇದು ಪಕ್ಷಾತೀತ ಹೋರಾಟ. ಎಲ್ಲ ಪಕ್ಷಗಳವರನ್ನು ಆಹ್ವಾನಿಸುತ್ತೇವೆ. ಹೋರಾಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನವನ್ನೂ ನೀಡುತ್ತೇವೆ. ಸಂಸದರಿಂದ ಹಿಡಿದು ಗ್ರಾಮ ಪಂಚಾಯಿತಿ ಸದಸ್ಯರ ವರೆಗಿನ ಜನಪ್ರತಿನಿಧಿಗಳನ್ನು, ಸಂಘ- ಸಂಸ್ಥೆಯವರನ್ನು, ಯುವಕ- ಯುವತಿ ಸಂಘದವರನ್ನು ಹೋರಾಟಕ್ಕೆ ಆಹ್ವಾನಿಸುತ್ತೇವೆ. ಜನರು ಸ್ವಯಂ ಪ್ರೇರಿತರಾಗಿ ಬುತ್ತಿ ಕಟ್ಟಿಕೊಂಡು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇದು ಜನತೆಯ ಹೋರಾಟವಾಗಬೇಕು ಎಂಬುದು ನಮ್ಮ ಆಶಯ~ ಎಂದರು.`ಇದಕ್ಕೆ ಸಮಾನಾಂತರವಾಗಿ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಸೇರಿ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸಚಿವ ನಿರಾಣಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರಿಗೆ ಮನವಿ ಮಾಡಿದ್ದೇನೆ~ ಎಂದು ಹೇಳಿದರು.ಜಿ.ಪಂ. ಸದಸ್ಯರಾದ ಉಮೇಶ ಕೋಳಕೂರ, ಟಿ.ಕೆ. ಹಂಗರಗಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಸೋಮನಾಥ ಬಾಗಲಕೋಟೆ ಹಾಗೂ ಡಾ.ವಿ.ಪಿ. ಹುಗ್ಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry