ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾ ಖಳ ನಾಯಕಿ

Last Updated 19 ಡಿಸೆಂಬರ್ 2010, 13:55 IST
ಅಕ್ಷರ ಗಾತ್ರ

‘ಅವರು ಗೆದ್ದು ನಗರಕ್ಕೆ ಹೋಗುವವರೆಗೂ ನಮ್ಮವರೇ ಆಗಿದ್ದರು. ಆದರೆ ಈಗ ಅವರು ನಮ್ಮವರಾಗಿ ಉಳಿದಿಲ್ಲ...’ ಇದು ಸಾಮಾನ್ಯವಾಗಿ ಶಾಸಕ, ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕೆಲವೇ ಸಮಯದಲ್ಲಿ ಗ್ರಾಮೀಣ ಭಾಗದ ಮಂದಿ ಜನಪ್ರತಿನಿಧಿಗಳ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯ. ಆಡಳಿತದ ‘ಶಕ್ತಿ ಕೇಂದ್ರ’ಕ್ಕೆ ಕಾಲಿಟ್ಟವರಿಗೆ ಅಧಿಕಾರದ ಅಮಲು ಏರುತ್ತದೆ ಎನ್ನುವವರಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾಗಿ ಅಂತಹವರನ್ನು ‘ಮಧ್ಯವರ್ತಿಗಳು, ದಲ್ಲಾಳಿಗಳು’ ಸುತ್ತುವರಿದಿರುತ್ತಾರೆ. ‘ದಲ್ಲಾಳಿ ಲೋಕ’ದ ಮಧುರ ಮಂಪರಿನಲ್ಲಿ ಬಹಳಷ್ಟು ಜನಪ್ರತಿನಿಧಿಗಳಿಗೆ ದಿನಗಳು ಉರುಳಿದ್ದೇ ಗೊತ್ತಾಗುವುದಿಲ್ಲ. ಭಾರತದಲ್ಲಿ ಇವತ್ತು ಇಂತಹ ದಲ್ಲಾಳಿ ಪಡೆ ಅತ್ಯಂತ ಪ್ರಭಾವಿಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ನೀರಾ ರಾಡಿಯಾ ಪ್ರಕರಣವೇ ಇದಕ್ಕೆ ಸ್ಪಷ್ಟ ನಿದರ್ಶನ.

ಬ್ರಿಟನ್‌ನಿಂದ ನೀರಾ ಸೂರಜ್‌ಕುಂಡ್‌ಗೆ ಬಂದು ನೆಲೆಸಿ ಒಂದೂವರೆ ದಶಕ ಉರುಳಿದೆ. ಈ ಅವಧಿಯಲ್ಲಿ ಅವರು ಆಡಳಿತಗಾರರು ಮತ್ತು ಉದ್ಯಮ ಪ್ರಭುಗಳ ನಡುವೆ ಮಧ್ಯವರ್ತಿ ಕೆಲಸ ಮಾಡುತ್ತಲೇ ತಾವೂ ನೂರಾರು ಕೋಟಿ ರೂಪಾಯಿಗಳಿಗೂ ಹೆಚ್ಚಿನ  ಆಸ್ತಿಪಾಸ್ತಿಗಳ ಒಡತಿಯಾದರು. ದೂರಸಂಪರ್ಕ ಇಲಾಖೆಯ 2ಜಿ ತರಂಗಾಂತರ ಹಂಚಿಕೆ ವಿವಾದ ಇವತ್ತು ಭಾರತದ ಬಹುದೊಡ್ಡ ಹಣಕಾಸು ಹಗರಣವಾಗಿದ್ದು, ನೀರಾ ವಹಿಸಿದ ‘ದಲ್ಲಾಳಿ’ ಪಾತ್ರ ಜಗಜ್ಜಾಹೀರಾಗಿದೆ. ಆದಾಯ ತೆರಿಗೆ ಇಲಾಖೆ ಆಕೆಯ ದೂರವಾಣಿಯನ್ನು ಕದ್ದಾಲಿಸಿ ಸಂಗ್ರಹಿಸಿದ ‘ಸಂವಾದ ಮಾಲೆ’ ಈ ದೇಶದಲ್ಲಿ ಅಧಿಕಾರಸ್ತರು ಮತ್ತು ಉದ್ಯಮಿಗಳ ನಡುವೆ ಅನಾರೋಗ್ಯಕರ ಸಂಬಂಧದ ಸಾಕ್ಷ್ಯಾಧಾರಗಳಂತಿವೆ.

ವಿವಾದದ ಕೇಂದ್ರಬಿಂದು ನೀರಾ ಅವರಿಗೆ ಇದೀಗ 55ರ ಹರೆಯ. ಕೆನ್ಯಾ ದೇಶದಲ್ಲಿ ಹುಟ್ಟಿದ ಅವರು ಓದಿದ್ದು ಲಂಡನ್‌ನಲ್ಲಿ. ನಾಲ್ಕು ದಶಕಗಳ ಹಿಂದೆ ಉಗಾಂಡವೂ ಸೇರಿದಂತೆ ಆಫ್ರಿಕಾದ ಕೆಲವು ದೇಶಗಳಲ್ಲಿ ವಲಸೆಗಾರರ ಏಳಿಗೆ ಬಗ್ಗೆ ಅಸಹನೆ ಬೂದಿ ಮುಚ್ಚಿದ ಕೆಂಡದಂತಿತ್ತು. ಆ ದಿನಗಳಲ್ಲಿ ನೀರಾ ತಂದೆ ಇಕ್ಬಾಲ್ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಸಂಸ್ಥೆಯ ಪೂರ್ವ ಆಫ್ರಿಕಾ ಮಾರಾಟ ಪ್ರತಿನಿಧಿಯಾಗಿದ್ದರು. ಬ್ರಾಹ್ಮಣ ಜಾತಿಗೆ ಸೇರಿದ್ದ ಅವರು ಆಗಷ್ಟೇ ಇಸ್ಲಾಮ್‌ಗೆ ಮತಾಂತರಗೊಂಡಿದ್ದರು. ಹಾಗಿದ್ದರೂ, ಅವರಿಗೆ ಅಲ್ಲಿ ಎಲ್ಲವೂ ಸುಖಕರವಾಗಿರಲಿಲ್ಲ. ಹೀಗಾಗಿ ಎಪ್ಪತ್ತರ ದಶಕದ ಆರಂಭದಲ್ಲಿ ಅವರು ನೀರಾ ಸೇರಿದಂತೆ ತಮ್ಮ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನೊಂದಿಗೆ ಲಂಡನ್‌ಗೆ ತೆರಳಿ ಅಲ್ಲಿಯೇ ನೆಲೆಸಿದರು. ಲಂಡನ್‌ನ ಉತ್ತರ ಭಾಗದಲ್ಲಿರುವ ಪ್ರತಿಷ್ಠಿತ ಹೆಬರ್‌ಡ್ಯಾಷರ್ಸ್‌ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ನೀರಾ, ವರ್‌ವಿಕ್ ವಿವಿಯಲ್ಲಿ ಪದವಿಯನ್ನೂ ಪಡೆದರು. ನಂತರ ಗುಜರಾತ್‌ನ ಕಛ್ ಪ್ರದೇಶದ ಜನಕ್ ರಾಡಿಯಾ ಎಂಬ ಉದ್ಯಮಿಯನ್ನೂಮದುವೆಯಾದರು. ಜನಕ್ ಲಂಡನ್‌ನಲ್ಲಿಯೇ ಹುಟ್ಟಿ ಬೆಳೆದು ಉದ್ಯಮವೊಂದನ್ನು ಕಟ್ಟಿಕೊಂಡಿದ್ದವರು. ಈ ದಂಪತಿಗೆ ಮೂವರು ಮಕ್ಕಳು. ಆದರೆ ಪತ್ನಿಯೊಂದಿಗೆ ವೈಮನಸ್ಸು ಮೂಡಿದ ಕಾರಣ ಜನಕ್ ವಿಚ್ಛೇದನ ನೀಡಿದ್ದರು. 90ರ ದಶಕದ ಆರಂಭದಲ್ಲಿ ನೀರಾ ಸೂರಜ್‌ಕುಂಡ್‌ಗೆ ಬಂದು ನೆಲೆಸಿದರು.

ನೀರಾ ಅವರಂಥವರ ಕೆಲಸ ‘ದಲ್ಲಾಳಿತನ’ ಆಗಿದ್ದರೂ ಕೂಡ, ರಾಜಕಾರಣ, ಅಧಿಕಾರಶಾಹಿ, ಉದ್ಯಮಿಗಳ ನಡುವೆ ಸಂಪರ್ಕಸೇತುವಾಗಿ ನಡೆದುಕೊಳ್ಳುವ ಅವರನ್ನು ‘ಲಾಬಿ ನಡೆಸುವವರು’ ಎಂದೇ ಗುರುತಿಸಲಾಗುತ್ತದೆ. ಈ ವರ್ಗ ಜಗತ್ತಿನಾದ್ಯಂತ ಕಂಡು ಬರುತ್ತದೆ. ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಕಾನೂನುಬದ್ಧವಾಗಿಯೇ ‘ಲಾಬಿ ನಡೆಸುವವರ’ ಬಲು ದೊಡ್ಡ ಪಡೆಯೇ ಇದೆ. ಸರಿಯಾಗಿ 140 ವರ್ಷಗಳ ಹಿಂದೆ ಅಮೆರಿಕಾದಲ್ಲಿ ಉಣ್ಣೆಯ ಉತ್ಪನ್ನಗಳ ಮೇಲೆ ಹೇರಿದ್ದ ತೆರಿಗೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಗಿನ ಅಧ್ಯಕ್ಷ ಯೂಲಿಸೆಸ್ ಮೇಲೆ ಮಧ್ಯವರ್ತಿಗಳು ಪ್ರಭಾವ ಬೀರಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಎರಡು ಶತಮಾನಗಳ ಹಿಂದೆಯೇ ಬ್ರಿಟನ್ ಪಾರ್ಲಿಮೆಂಟ್‌ನ ಮೊಗಸಾಲೆ (ಲಾಬಿ)ಗಳಲ್ಲಿ ಸುಳಿದಾಡುತ್ತಾ, ಶ್ರೀಮಂತರ ಪರ ಕೆಲಸಕಾರ್ಯಗಳನ್ನು ಮಾಡಿಸಲು ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರುತ್ತಿದ್ದವರನ್ನು ‘ಲಾಬಿಸ್ಟ್’ಗಳೆಂದು ಕರೆಯುತಿದ್ದುದೂ ಈಗ ಇತಿಹಾಸ. ಈ ಹಿನ್ನೆಲೆಯಲ್ಲಿ ಎಂಬತ್ತು ವರ್ಷಗಳ ಹಿಂದೆ ಬ್ರಿಟನ್‌ನ ಪ್ರಜ್ಞಾವಂತರು ಇಂತಹ ದಲ್ಲಾಳಿಗಳಿಂದ ರಾಜಕಾರಣ ಭ್ರಷ್ಟಗೊಳ್ಳುತ್ತಿದೆ ಎಂಬ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿದ್ದರು.

ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ನೀರಾ ಮೊದಲಿಗೆ ಹರಿಯಾಣದ ಪ್ರಭಾವಿ ರಾಜಕಾರಣಿಗಳೊಡನೆ ಕಾಣಿಸಿಕೊಂಡಾಗಲೇ ಆಕೆ ‘ದಲ್ಲಾಳಿ’ ಹಾದಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ನಿರ್ಧರಿಸಿದ್ದರೆನಿಸುತ್ತದೆ. ನಂತರ ದೆಹಲಿಯನ್ನೇ ಕೇಂದ್ರವಾಗಿರಿಸಿಕೊಂಡು ಸಾರ್ವಜನಿಕ ಸಂಪರ್ಕ ಸಲಹೆಗಾರ್ತಿಯಾಗಿ ಕಾರ್ಪೊರೇಟ್ ವಲಯಗಳಲ್ಲಿ ಇಣುಕತೊಡಗಿದರು. ಮೊದಲಿಗೆ ಸಹರಾ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಸಿಂಗಪುರ ಏರ್‌ಲೈನ್ಸ್ ಮತ್ತು ಯುಕೆ ಏರ್‌ಲೈನ್ಸ್‌ಗೆ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರು. ರತನ್ ಟಾಟಾ, ಅನಿಲ್ ಮತ್ತು ಮುಖೇಶ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳಿಗೆ ನಿಕಟರಾದರು. ಇಂತಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ, ಮಾಧ್ಯಮ ನಿರ್ವಹಣೆ ಇತ್ಯಾದಿಗಳನ್ನು ನಿಭಾಯಿಸಲಿಕ್ಕಾಗಿ ‘ವೈಷ್ಣವಿ ಕಾರ್ಪೋರೇಟ್ ಕಮ್ಯುನಿಕೇಷನ್ಸ್’ ಸಂಸ್ಥೆಯನ್ನು ಕಟ್ಟಿದರು.

ದಶಕದ ಹಿಂದೆ ಜಾಗತೀಕರಣ ಪ್ರಕ್ರಿಯೆ ಭಾರತದಲ್ಲಿ ದಾಪುಗಾಲಿಡುತ್ತಿದ್ದಂತೆ ಉದ್ದಿಮೆ ಸಂಸ್ಥೆಗಳು ಆಕಾಶದಂತಹ ಅವಕಾಶಗಳಿಗಾಗಿ ಅಧಿಕಾರಸ್ಥರತ್ತ ಆಸೆಗಣ್ಣುಗಳಿಂದ ನೋಡುತ್ತದ್ದವು. ಆಗ ಅಂತಹವರ ಪರವಾಗಿ ಅಧಿಕಾರಸ್ಥರ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳಲ್ಲಿ ನೀರಾ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದರು. ಎರಡೂ ಕಡೆಯವರಿಗೆ ಲಾಭ ಮಾಡಿಕೊಟ್ಟಿದ್ದಕ್ಕಾಗಿ ನೀರಾಗೂ ಸಿಗುತ್ತಿದ್ದ ಪಾಲಿನ ಗಂಟು ದೊಡ್ಡದಾಗತೊಡಗಿತು. ಆಗ ನೀರಾ ವಿಮಾನದ ಬಿಡಿಭಾಗಗಳ ವ್ಯವಹಾರವನ್ನೂ ಆರಂಭಿಸಿದರು. ಇಂತಹ ‘ಮಧ್ಯವರ್ತಿ’ಗಳಿಗೆ ಯಾವುದೇ ವಿಚಾರದ ಬದ್ಧತೆ, ಜನಪರ ಕಾಳಜಿಗಿಂತಲೂ ತಮಗೆ ಲಾಭ ತರುವ ಉದ್ದಿಮೆಗಳ ಒಳಿತಷ್ಟೇ ಮುಖ್ಯವಾಗಿರುತ್ತದೆ. ಇದಕ್ಕೆ ಪೂರಕವೆಂಬಂತೆ ದೆಹಲಿಯ ಹೊರವಲಯದಲ್ಲಿರುವ ನೀರಾ ತೋಟದ ಮನೆಯಲ್ಲಿ ನಿರಂತರವಾಗಿ ಔತಣಕೂಟಗಳು ನಡೆಯತೊಡಗಿದವು. ಅಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಭಿನ್ನಾಭಿಪ್ರಾಯವೇ ಇಲ್ಲದೆ, ಎಲ್ಲರೂ ಒಗ್ಗೂಡುತ್ತಿದ್ದರು.

ಅದಾಗಲೇ ದೂರಸಂಪರ್ಕ ಖಾತೆಯ ವ್ಯವಹಾರಗಳಲ್ಲಿನ ಲಾಭ ನಷ್ಟಗಳನ್ನು ತೂಗಿ ಅಳೆದಿದ್ದ ಉದ್ಯಮಿಗಳು ತಮಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿಕೊಳ್ಳಲು ಅಧಿಕಾರಸ್ಥರ ಮೇಲೆ ಪ್ರಭಾವ ಬೀರತೊಡಗಿದರು. ಆಗ ಈ ನಿಟ್ಟಿನಲ್ಲಿ ನೀರಾ ಮುಂಚೂಣಿಯಲ್ಲಿ ನಿಂತು ವ್ಯವಹರಿಸತೊಡಗಿದರು. ಹಿಂದೆಲ್ಲಾ ಸಚಿವರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮನ ಒಲಿಸಲೆತ್ನಿಸುತ್ತಿದ್ದ ನೀರಾ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೂರ ಸಂಪರ್ಕ ಖಾತೆಗೆ ಇಂತಹವರನ್ನೇ ಸಚಿವರನ್ನಾಗಿಸಬೇಕೆಂದು ‘ಲಾಬಿ’ ನಡೆಸುವ ಮಟ್ಟಿಗೆ ಬೆಳೆದಿದ್ದರು. ಆಗ ಅವರು ಹಿರಿಯ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಖ್ಯಾತ ಪತ್ರಕರ್ತರು, ಉನ್ನತ ಅಧಿಕಾರಿಗಳು ಮುಂತಾದವರೊಂದಿಗೆ ನಡೆಸಿದ್ದ ಸಂವಾದಗಳೆಲ್ಲಾ ಇದೀಗ ಬಯಲಾಗಿವೆ. ಅಂದು ಸಚಿವರಾದ ಎ.ರಾಜಾ ಸಹಜವಾಗಿಯೇ ರಾಡಿಯಾ ಚಕ್ರವ್ಯೆಹದೊಳಗೆ ಸಿಲುಕಿದರು. ಪ್ರಸಕ್ತ ಒಂದು ಅಂದಾಜಿನ ಪ್ರಕಾರ ‘2ಜಿ ಹಗರಣ’ಕ್ಕೆ ಸಂಬಂಧಿಸಿದಂತೆ 1,70,000 ಕೋಟಿ ರೂಪಾಯಿಗಳಷ್ಟು ವ್ಯವಹಾರ ನಡೆದಿದೆ!

ಮಧ್ಯವರ್ತಿ ನೀರಾ ಕಳೆದ ಒಂದು ದಶಕದಲ್ಲಿ ಅದೆಷ್ಟು ಪ್ರಭಾವಿಯಾಗಿ ಬೆಳೆದರೆಂದರೆ ದೂರ ಸಂಪರ್ಕ ರೆಗ್ಯುಲೇಟರಿ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಪ್ರದೀಪ್ ಬೈಜಾಲ್ ನಿವೃತ್ತಿ ನಂತರ ನೀರಾ ಕಂಪೆನಿಗೇ ಸೇರಿಕೊಂಡರು. 1966ರಲ್ಲಿ ಐಎಸ್‌ಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ ಬೈಜಾಲ್ ಸರ್ಕಾರದ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದ ಅನುಭವಿ. ನೀರಾ ಅವರು ವೈಷ್ಣವಿ ಕಂಪೆನಿಯಲ್ಲದೆ, ನಿಯೋಸಿಸ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸರ್ವಿಸಸ್, ವಿಟ್‌ಕಾಮ್ ಕನ್ಸಲ್ಟಿಂಗ್, ನ್ಯೂಕಾಮ್ ಕನ್ಸಲ್ಟಿಂಗ್ ಇತ್ಯಾದಿ ಕಂಪೆನಿಗಳನ್ನು ಹುಟ್ಟು ಹಾಕಿದರು. ಕೆಲವು ವಿದೇಶಿ ಕಂಪೆನಿಗಳೊಂದಿಗೂ ವ್ಯವಹರಿಸತೊಡಗಿದರು. ಆಕೆಯ ಆದಾಯದಲ್ಲಿನ ವಿಪರೀತ ಏರಿಕೆ ತಂದ ಅನುಮಾನ ಮತ್ತು ವಿದೇಶಿ ಬೇಹುಗಾರರೊಂದಿಗೆ ಆಕೆಗೆ ಸಂಬಂಧವಿರಬಹುದೆಂಬ ಶಂಕೆಯಿಂದಾಗಿ ಗೃಹಖಾತೆಯ ಒಪ್ಪಿಗೆಯ ಮೇರೆಗೆ ಮೂರು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ನೀರಾ ದೂರವಾಣಿಯನ್ನು ಮುನ್ನೂರು ದಿನಗಳ ಕಾಲ ಕದ್ದಾಲಿಸಿತು. ಆಗಲೇ ‘2ಜಿ ಹಗರಣ’ದ ಬೃಹತ್ ವಂಚನೆಯ ಜಾಲ ಬಯಲುಗೊಂಡಿದೆ.

ಇವತ್ತು ನೀರಾ ಖಳನಾಯಕಿಯಂತೆ ಕಾಣುತ್ತಿರಬಹುದು. ಆದರೆ ಅವರು ಆಡಳಿತಗಾರರು ಮತ್ತು ವಾಣಿಜ್ಯೋದ್ಯಮಿಗಳ ನಡುವಣ ‘ವ್ಯವಹಾರ’ಕ್ಕೆ ವೇದಿಕೆ ಸೃಷ್ಟಿಸಿಕೊಟ್ಟಿದ್ದಾರಷ್ಟೇ. ತನ್ನ ವ್ಯವಹಾರ ಕುಶಲತೆಯಿಂದ ಅಪಾರ ಲಾಭ ಮಾಡಿಕೊಂಡಿದ್ದಾರೆ. ಆದರೆ ವಿಚಾರಗಳ ಬದ್ಧತೆ ಇರಬೇಕಾದಂತಹ ಜನಪ್ರತಿನಿಧಿಗಳು, ಸರ್ಕಾರಕ್ಕಷ್ಟೇ ನಿಷ್ಠೆಯಿಂದಿರಬೇಕಿದ್ದ ಅಧಿಕಾರಶಾಹಿ ನಡೆದುಕೊಂಡಿರುವ ರೀತಿ ಪ್ರಜಾಸತ್ತೆಗೆ ಅಪಮಾನ ಮಾಡುವಂತಿದೆ. ತಮ್ಮನ್ನು ನಂಬಿ ಆಯ್ಕೆ ಮಾಡಿದ ಜನರಿಗೆ ಧ್ವನಿಯಾಗಬೇಕಿದ್ದ ಜನಪ್ರತಿನಿಧಿಗಳು ‘ಕಾರ್ಪೊರೇಟ್ ವಲಯ’ದ ಆಟದ ಬೊಂಬೆಗಳಂತಾಗಿರುವುದೂ ನಿಜ. ಚುನಾವಣೆಗೆ ಮೊದಲು ‘ಜನಮುಖಿ’ಗಳಂತೆ ಕಂಡು ಬರುವ ಜನಪ್ರತಿನಿಧಿಗಳು ನಂತರ ವಿಭಿನ್ನ ವೇಷ, ಸ್ಥಾನಮಾನಗಳೊಂದಿಗೆ ನಿಂತಿರುವ ‘ಮಧ್ಯವರ್ತಿ’ಗಳ ತೂಗುತೊಟ್ಟಿಲಲ್ಲಿ ತಂಪಾಗಿರುತ್ತಾರೆ. ಇಂತಹವರ ಸಂಖ್ಯೆ ಹೆಚ್ಚುತ್ತಿರುವುದರಿಂದಲೇ ನೀರಾ ಅವರಂತಹವರ ಮಾತುಗಳೇ ಕಾನೂನುಗಳಾಗಿಬಿಡುತ್ತವೆ. ಹೀಗಾಗಿ ಚುನಾವಣೆಯಲ್ಲಿ ಗೆದ್ದವರು ‘ಧನಮುಖಿ’ಗಳಾಗದೆ ‘ಜನಮುಖಿ’ಗಳಾಗಿದ್ದಷ್ಟೂ ಕಾಲ ನೀರಾ ಅವರಂತಹವರು ದೂರದಲ್ಲಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT