ಮಂಗಳವಾರ, ಜನವರಿ 28, 2020
19 °C
ದೇವಸಮುದ್ರ ಚೌಕಿಮಠದಲ್ಲಿ ನೀರಾವರಿ ಹೋರಾಟ ಜಾಗೃತಿ ಸಭೆ

ನೀರಿಗಾಗಿ ಒಗ್ಗಟ್ಟಿನ ಮಂತ್ರ ಪಠಿಸಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ‘ನಾವು ತಾಲ್ಲೂಕಿಗೆ ನೀರು ತರುವ ಹೋರಾಟದಲ್ಲಿ ರಾಜಕೀಯ ಮಾಡುತ್ತಾ ಹೋದರೆ ಸಾವೇ ಗತಿ.. ಸಾಕು ಯಾರೋ ಮುಂದೆ ಬಿದ್ದು ಹೋರಾಟ ಮಾಡುತ್ತಾರೆ ಸಹಕಾರ ನೀಡಿ. ಚೆನ್ನಾಗಿ ಇದ್ದಾಗ ಬೀಗರಿಗೆ ದವಸ ಧಾನ್ಯ ಕಳಿಸುತ್ತಿದ್ದೆವು, ಈಗ ಅವರನ್ನು ಬೇಡುವ ಪರಿಸ್ಥಿತಿ ಬಂದಿದೆ ಸ್ವಾಮಿ..’– ಇದು ಭಾನುವಾರ ತಾಲ್ಲೂಕಿನ ದೇವಸಮುದ್ರ ಪರಮೇಶ್ವರ ಸ್ವಾಮಿ ಚೌಕಿಮಠದಲ್ಲಿ ನಡೆದ ನೀರಾವರಿ ಹೋರಾಟ ಜಾಗೃತಿ ಸಭೆಯಲ್ಲಿ ಕೇಳಿಬಂದ ರೈತರ ಮಾತುಗಳು ಇವು.ನೂರಾರು ರೈತರು ಸಭೆಗೆ ಬಂದು ಮುಂದಿನ ರೂಪುರೇಷೆಗಳ ಬಗ್ಗೆ, ಹೋರಾಟ ಕುರಿತಂತೆ ಚರ್ಚಿಸುತ್ತಿದ್ದುದು ಕಂಡುಬಂತು. ಹೋರಾಟವನ್ನು ಅರ್ಧಕ್ಕೆ ಬಿಡಬೇಡಿ. ಎಲ್ಲದಕ್ಕೂ ಜತೆಯಲ್ಲಿದ್ದೇವೆ, ಎಲ್ಲಾ ಸಹಕಾರ ನೀಡುತ್ತೇವೆ ಎಂಬ ಭರವಸೆ ಮಾತುಗಳ ಮೂಲಕ ಹೋರಾಟದ ಪ್ರಥಮ ಸಮಾವೇಶಕ್ಕೆ ಅರ್ಥ ಕಲ್ಪಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯ ಡಾ. ಬಸವರಾಜ್, ‘ನಮಗಿಂತ ವಿಳಂಬವಾಗಿ ಸ್ವಾತಂತ್ರ್ಯ ಪಡೆದಿರುವ ದೇಶಗಳು ನೀರಾವರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿವೆ. ಆದರೆ ನಾವು 68 ವರ್ಷ ಕಳೆದರೂ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿಯಲ್ಲಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್‌.ಟಿ.ನಾಗರೆಡ್ಡಿ ಮಾತನಾಡಿ, ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಪರಿಣಾಮ 35 ವರ್ಷಗಳಲ್ಲಿ ಕೇವಲ 3 ಬಾರಿ ತುಂಬಿದೆ. ನೀರಿನ ಮೂಲವೇ ಇಲ್ಲದ ಈ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹಾಯಿಸಿ ಗುರುತ್ವಾಕರ್ಷಣೆ ಮೂಲಕ ತಾಲ್ಲೂಕಿನ ಮುಕ್ಕಾಲು ಕೆರೆಗಳಿಗೆ ನೀರು ನೀಡಲು ಸಾಧ್ಯವಿದೆ. ಭದ್ರಾ

ಮೇಲ್ದಂಡೆ ಯೋಜನೆಯ ‘ಎ’ ಸ್ಕೀಂನಲ್ಲಿಯೇ ನೀರು ಹರಿಸುವಂತೆ ಹೆಚ್ಚಿನ ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.ಹೋರಾಟ ಸಮಿತಿ ಅಧ್ಯಕ್ಷ ಆರ್‌.ಎಂ.ಅಶೋಕ್‌ ಮಾತನಾಡಿ, ‘ಮೊಳಕಾಲ್ಮುರು ತಾಲ್ಲೂಕು ನೀರಾವರಿ ಸೌಲಭ್ಯ ಪಡೆಯುವ ದಿಕ್ಕಿನಲ್ಲಿ ದ್ವೀಪದಂತಾಗಿದೆ. ಸುತ್ತಮುತ್ತಲ ಎಲ್ಲ ತಾಲ್ಲೂಕಿಗಳಿಗೆ ತುಂಗಭದ್ರಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇಚ್ಛಾಶಕ್ತಿ ಹಾಗೂ ಜಾಗೃತಿ ಕೊರತೆಯಿಂದಾಗಿ ಈವರೆಗೆ ನಮಗೆ ಹಿನ್ನಡೆಯಾಗಿರುವ ಹೋರಾಟಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್‌.ಜಿ.ಗಂಗಾಧರಪ್ಪ, ತಾಲ್ಲೂಕು ಬೋರ್ಡ್ ಮಾಜಿ ಅಧ್ಯಕ್ಷ ಆರ್‌.ಎಚ್‌.ಗಂಗಾಧರಪ್ಪ, ಬಿ.ಪಿ.ಬಸವ ರೆಡ್ಡಿ, ಕುಮಾರಸ್ವಾಮಿ ಮಾತನಾಡಿದರು.ರಾಂಪುರ ರುದ್ರಾಕ್ಷಿ ಮಠದ ವೀರಭದ್ರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯ್ತಿ ಸದಸ್ಯೆ ಲಕ್ಷ್ಮೀದೇವಿ, ಮಾಜಿ ಸದಸ್ಯ ಜಗಳೂರಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯ ಚಿದಾನಂದ್, ಮಾಜಿ

ಅಧ್ಯಕ್ಷ ಶಂಕರರೆಡ್ಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಹಮತ್‌ಬೀ, ಹನುಮಂತಪ್ಪ, ಅಂಜಿನಪ್ಪ, ಗೋವಿಂದರೆಡ್ಡಿ, ಸಿದ್ದಬಸಪ್ಪ, ಡಿ.ಗಂಗಣ್ಣ, ವೀರರೆಡ್ಡಿ, ಹೋರಾಟ ಸಮಿತಿಯ ಮಲಿಯಪ್ಪ, ರಾಮಕೃಷ್ಣ ಉಪಸ್ಥಿತರಿದ್ದರು. ಸುರೇಶ್‌ ಸ್ವಾಗತಿಸಿದರು, ಜೆ.ಸಿ.ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)