ನೀರಿಗಾಗಿ ಜನರ ಪರದಾಟ

7

ನೀರಿಗಾಗಿ ಜನರ ಪರದಾಟ

Published:
Updated:

ಮಾಗಡಿ: ತಾಲ್ಲೂಕಿನ ಕುದೂರು ಹೋಬಳಿ ಶ್ರೀಗಿರಿಪುರ ಗ್ರಾ.ಪಂ ವ್ಯಾಪ್ತಿಯ ಬೈಲಪ್ಪನಪಾಳ್ಯದಲ್ಲಿ ಕಳೆದ 1 ವರ್ಷದಿಂದ ಕುಡಿಯುವ ನೀರಿಲ್ಲದೆ ಜನರು ಪರಿತಪಿಸುತ್ತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನಮ್ಮ ಗ್ರಾಮದಲ್ಲಿ 30 ಮನೆಗಳಿವೆ. ಇಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿಲ್ಲ. ಗ್ರಾಮದಲ್ಲಿ ಕಿರು ನೀರು ಸರಬರಾಜು ಯೋಜನೆಯ ಮಿನಿಟ್ಯಾಂಕ್ ಒಂದನ್ನು ಇಟ್ಟು ವರ್ಷ ಕಳೆದಿದೆ. ಆದರೆ ಟ್ಯಾಂಕಿಗೆ ಕೊಳಾಯಿ ಸಂಪರ್ಕ ಕಲ್ಪಿಸಿಲ್ಲ.ನೀರಿಗೆ ಪರದಾಡುತ್ತಿರುವುದರ ಜತೆಗೆ ಸಾಕಷ್ಟು ಸಮಸ್ಯೆಗಳಿವೆ. ಗ್ರಾಮದಲ್ಲಿ ಬೀದಿ ದೀಪಗಳಿಲ್ಲ. ಸರಿಯಾದ ರಸ್ತೆ ಇಲ್ಲ. ಗ್ರಾಮದ ಸಮೀಪದಲ್ಲಿಯೇ ಶಿವಗಂಗೆ ಬೆಟ್ಟ ಇರುವುದರಿಂದ ಕಾಡು ಪ್ರಾಣಿಗಳ ಉಪಟಳವು ಅಧಿಕವಾಗಿಯೇ ಇದೆ ಎಂದು ಗ್ರಾಮದ ಹಿರಿಯರಾದ ಹನುಮಕ್ಕ ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹೊರಡಿಸಿರು ನರೇಗಾ ಯೋಜನೆ, ರಾಜ್ಯ ಸರ್ಕಾರ ಘೋಷಿಸಿರುವ ಸುವರ್ಣ ಗ್ರಾಮ ಯೋಜನೆಗಳು ಬೈಲಪ್ಪನಪಾಳ್ಯದ ಜನತೆಯ ಪಾಲಿಗೆ ಗಗನ ಕುಸುಮಗಳಾಗಿವೆ. ಕನಿಷ್ಠ ಮೂಲಭೂತ ಸವಲತ್ತುಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ, ಅಂಗನವಾಡಿ ಕೇಂದ್ರ ನೀಡಿ ಗ್ರಾಮದ ಜನತೆಯ ಬಾಳಿಗೆ ಮಾರ್ಗದರ್ಶಿಯಾಗಲು ಶ್ರೀಗಿರಿಪುರ ಗ್ರಾಮ ಪಂಚಾಯ್ತಿ ಮುಂದಾಗಬೇಕು ಎಂಬುದು ಬೈಲಪ್ಪನಪಾಳ್ಯದ ಗ್ರಾಮಸ್ಥರ ಆಗ್ರಹ. ಕಳೆದ ಒಂದು ವರ್ಷದಿಂದ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿರುವ ನಮ್ಮ ಗ್ರಾಮಕ್ಕೆ ಗ್ರಾ.ಪಂ ಅಧ್ಯಕ್ಷರಾಗಲಿ, ಕಾರ್ಯದರ್ಶಿಯಾಗಲಿ ಅಥವಾ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿಲ್ಲ.ತಾಲ್ಲೂಕಿನ ಗಡಿಯಲ್ಲಿರುವ ನಮ್ಮ ಗ್ರಾಮಕ್ಕೆ ಸವಲತ್ತು ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಶ್ರೀಗಿರಿಪುರ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಕುಗ್ರಾಮ ಬೈಲಪ್ಪನಪಾಳ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹಾಕಿದ್ದ ಪೈಪನ್ನು ಯಾರೋ ಕತ್ತರಿಸಿ ಹಾಕಿದ್ದಾರೆ. ಮುಂದಿನ ವಾರದಲ್ಲಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry