ಶುಕ್ರವಾರ, ಮೇ 14, 2021
30 °C

ನೀರಿಗಾಗಿ ತಪ್ಪದ ಗ್ರಾಮಸ್ಥರ ಪರದಾಟ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ನಿರಂತರ ಬರದಿಂದ ಬಳಲಿ ಬೆಂಡಾದ ತಾಲ್ಲೂಕಿನಲ್ಲಿ ಜಲ ಕ್ಷಾಮ ತೀವ್ರಗೊಂಡಿದೆ. ನಾಗರಿಕರ ಬೇಡಿಕೆಗೆ ಅನುಗುಣವಾಗಿ ಜೀವಜಲ ದೊರಕುತ್ತಿಲ್ಲ. ಜಲಕ್ಷಾಮ ನಿವಾರಣೆಗಾಗಿ ತಾಲ್ಲೂಕು ಆಡಳಿತ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.2001ರ ಜನಗಣತಿಯ ಪ್ರಕಾರ ತಾಲ್ಲೂಕಿನಲ್ಲಿ 2,47,645 ಜನ ಸಂಖ್ಯೆ ಇದೆ. 40,259 ದನ, 18,723 ಎಮ್ಮೆ, 91,350 ಕುರಿ ಮತ್ತು ಮೇಕೆಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ನಿತ್ಯ 99,05,800 ಲೀಟರ್ ನೀರು ಪೊರೈಕೆಯಾಗಬೇಕು. 28,08,450 ಲೀಟರ್ ಎಮ್ಮೆಗಳಿಗೆ, 60,38,850 ಲೀಟರ್ ದನಗಳಿಗೆ, 10,04,850 ಲೀಟರ್ ನೀರು ಮೇಕೆ ಮತ್ತು ಕುರಿಗಳಿಗೆ ಪೂರೈಕೆಯಾಗಬೇಕು. ಆದರೆ, ಜಾನುವಾರು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಪ್ರಮಾಣದ ನೀರು ಪೂರೈಕೆಯಾಗುತ್ತಿಲ್ಲ.ಈಗಾಗಲೇ ತಾಲ್ಲೂಕಿನ ಲಕ್ಕಲಕಟ್ಟಿ, ಭೈರಾಪೂರ, ಭೈರಾಪೂರ ತಾಂಡಾ ಸೇರಿ ಆರು ಗ್ರಾಮಗಳಲ್ಲಿ ಜಲಕ್ಷಾಮ ತೀವ್ರಗೊಂಡ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಜೀವಜಲ ಒದಗಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ (ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ) 1,590 ಕುಡಿಯುವ ನೀರಿನ ಕೊಳವೆ ಬಾವಿಗಳಿದ್ದವು. ಬರದ ಭೀಕರಕ್ಕೆ 359 ಕೈಪಂಪ್‌ಗಳು ವಿಫಲವಾಗಿವೆ. 580 ನಿಷ್ಕ್ರಿಯಗೊಂಡಿವೆ. 305 ಕೈಪಂಪ್‌ಗಳು ಚಾಲ್ತಿ ಯಲ್ಲಿವೆ.ಮೇಲ್ದರ್ಜೆ ನೀರು ಸರಬರಾಜು ಯೋಜನೆಯಡಿಯಲ್ಲಿನ 218 ಕೊಳವೆ ಬಾವಿಗಳು ಅಂತರ್ಜಲ ಕಳೆದುಕೊಂಡು ಬರಡಾಗಿವೆ. ಕಿರು ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ 14 ಕೊಳವೆ ಬಾವಿಗಳು ಅಲ್ಪ ಜಲ ಹೊತ್ತು ನರಳುತ್ತಿವೆ. ನಿರಂತರ ಬರದ ಹಿನ್ನೆಲೆಯಲ್ಲಿ ಕೊರೆಯಿಸಲಾದ 114 ಕೊಳವೆ ಬಾವಿಗಳಲ್ಲಿ 57 ಕೊಳವೆ ಬಾವಿಗಳಲ್ಲಿ ಜೀವಜಲ ದೊರೆತಿಲ್ಲ. ಉಳಿದ ಕೊಳವೆಬಾವಿಗಳಲ್ಲಿ ಜಲ ದೊರೆತರೂ ಸಮರ್ಪಕವಾಗಿಲ್ಲ ದಿರುವುದು ತಾಲ್ಲೂಕು ಆಡಳಿತಕ್ಕೆ ಮರ್ಮಾಘಾತವನ್ನುಂಟು ಮಾಡಿದೆ.ರಾತ್ರಿ ಮಾತ್ರ ಕೊಳವೆ ಬಾವಿಯಲ್ಲಿ ನೀರು: 2009ರ ಕುಂಭದ್ರೋಣ ಮಳೆಯನ್ನು ಹೊರತು ಪಡಿಸಿದರೆ ತಾಲ್ಲೂಕಿನಾದ್ಯಂತ ಯಾವ ವರ್ಷವೂ ಹೇಳಿಕೊಳ್ಳುವಂತಹ ಮಳೆಗಳು ಸುರಿದಿಲ್ಲ. ಜತೆಗೆ ನಿರಂತರ ಬರದಿಂದ ಕಣ್ಮರೆಯಾಗಿರುವ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗಿ ಯಾವ ಮಳೆಗಳು ಸಾಥ್ ನೀಡಿಲ್ಲ. ಹೀಗಾಗಿ ಕಳೆದ ಕೆಲ ದಿನಗಳಿಂದ ಸುರಿದ 152.53 ಮಿಲಿಮೀಟರ್ ಮಳೆ ಪ್ರಮಾಣ ಬಿತ್ತನೆ ಕಾರ್ಯಕ್ಕೆ ಮಾತ್ರ ಸೀಮಿತಗೊಂಡಿದೆ. ಆದ್ದರಿಂದ 600 ರಿಂದ 700 ಅಡಿ ಆಳಕ್ಕೆ ಅಂತರ್ಜಲ ಕುಸಿದಿದೆ.ಅಗತ್ಯ ಕ್ರಮ: ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡ ಪರಿಣಾಮ ನೀರಿನ ಸಮಸ್ಯೆ ತಲೆ ದೋರಿರುವುದು ನಿಜ. ಆದರೆ, ಕುಡಿಯುವ ನೀರಿನ ಸಮಸ್ಯೆ ತೀವ್ರ ಇರುವ ಗ್ರಾಮಗಳಿಗೆ ಈಗಾಗಲೇ ಸ್ಥಳೀಯ ಆಡಳಿತಗಳು ಟ್ಯಾಂಕರ್ ಮೂಲಕ ನೀರು ಪೊರೈಸುತ್ತಿವೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದ ತಕ್ಷಣ ಮಾಹಿತಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಎಸ್. ಎಂ.ರುದ್ರಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.