ನೀರಿಗಾಗಿ ನಿತ್ಯ ಪರದಾಟ

7

ನೀರಿಗಾಗಿ ನಿತ್ಯ ಪರದಾಟ

Published:
Updated:
ನೀರಿಗಾಗಿ ನಿತ್ಯ ಪರದಾಟ

ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪನಸಮಾಕನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಸಮರ್ಪಕ ವಿತರಣೆ ಪ್ರತಿಭಟಿಸಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಪೈಪನ್ನು ಕಡಿದು ಹಾಕಿದ ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ರೈಲು ನಿಲ್ದಾಣದ ಸಮೀಪದ ಕೊಳವೆ ಬಾವಿಯಿಂದ ಪೈಪ್ ಮೂಲಕ ಗ್ರಾಮಕ್ಕೆ ನೀರನ್ನು ಪೂರೈಸಲಾಗುತ್ತಿತ್ತು. ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಅಲ್ಪ ಪ್ರಮಾಣದ ನೀರು ಗ್ರಾಮಕ್ಕೆ ಸರಬರಾಜಾಗುತ್ತಿತ್ತು. ಆದರೆ ತಗ್ಗು ಪ್ರದೇಶದ ನಿವಾಸಿಗಳು ತಮ್ಮ ಮನೆಗಳ  ಸಮೀಪ ಆಳವಾದ ತೊಟ್ಟಿಗಳನ್ನು ನಿರ್ಮಿಸಿಕೊಂಡು ಬರುವ ನೀರೆಲ್ಲವನ್ನೂ ಬಳಸಿ ಕೊಳ್ಳುತ್ತಿದ್ದುದರಿಂದ ಎತ್ತರ ಪ್ರದೇಶದ ಮನೆಗಳಿಗೆ ನೀರು ಹತ್ತುತ್ತಿರಲಿಲ್ಲ.ಕೆಳಗಿನ ಮನೆಗಳವರು ಮೇಲಿನ ಮನೆಗಳ ನೀರಿನ ಸಮಸ್ಯೆಗೆ ಸ್ಪಂದಿಸದ ಪರಿಣಾಮ ಗ್ರಾಮದಿಂದ ದೂರದಲ್ಲಿನ ಹಳ್ಳದಲ್ಲಿ ನೀರಿನ ಪೈಪನ್ನು ತುಂಡರಿಸಲಾಗಿದೆ. ಹಾಗಾಗಿ ಲಭ್ಯವಿರು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಗ್ರಾಮಸ್ಥರು ಅದರಲ್ಲೂ ಮಹಿಳೆಯರು ಹಳ್ಳಕ್ಕೆ ಇಳಿದು ನೀರನ್ನು ಹೊತ್ತು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಡೀ ಹಳ್ಳಿ ಕುಡಿಯುವ ನೀರಿಗಾಗಿ ಪರದಾಡುತ್ತಿದೆ.ಗ್ರಾ.ಪಂ ಅಧ್ಯಕ್ಷ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ  ಸಮಸ್ಯೆಯನ್ನು ಪರಿಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮಕ್ಕೆ  ಹೊಸ ಕೊಳವೆ ಬಾವಿಯೊಂದನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.  ನೀರನ್ನು ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry