ಮಂಗಳವಾರ, ಜೂನ್ 22, 2021
24 °C

ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

ಮುಡಿಪು: ಕುಡಿಯುವ ನೀರಿನ ಪೈಪ್‌ಲೈನ್ ಕೆಟ್ಟು ಹೋಗ್ದ್ದಿದು, ಕೊಳವೆ ಬಾವಿಯಲ್ಲೂ ನೀರಿಲ್ಲದಿರುವುದರಿಂದ ಕೊಣಾಜೆ ಗ್ರಾಮದ ನಡುಪದವು ಗ್ರಾಮಸ್ಥರಿಗೆ ಕಳೆದ 4-5 ದಿನಗಳಿಂದ ಕುಡಿಯಲು ನೀರಿಲ್ಲದಂತಾಗಿದೆ. ಇದರಿಂದ ರೋಸಿ ಹೋದ ನಡುಪದವಿನ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕೊಣಾಜೆ ನಡುಪದವಿನಲ್ಲಿ ಎರಡು ಕೊಳವೆ ಬಾವಿ ಹಾಗೂ ಪಂಪ್‌ನ ವ್ಯವಸ್ಥೆ ಇದ್ದರೂ ಕೂಡಾ ಕೊಳವೆ ಬಾವಿಯಲ್ಲಿ ಇತ್ತೀಚೆಗೆ ನೀರಿನ ಕೊರತೆ ಎದುರಾಗಿತ್ತು. ಇದಕ್ಕಾಗಿ ಪಂಪನ್ನು ಇನ್ನೊಂದು ಕೊಳವೆ ಬಾವಿಗೆ ಅಳವಡಿಸುವ ಕಾಮಗಾರಿಯು ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿತ್ತು. ಪಂಪ್ ಹಾಗೂ ಪೈಪ್ ಅಳವಡಿಸುವ ಕಾಮಗಾರಿಯ ಮಜೂರಿ ದೊರಕಿಲ್ಲ ಎಂದು ಕಾಮಗಾರಿ ನಡೆಸಿದವರು ಕೆಲಸ ಪೂರ್ಣಗೊಳಿಸದೆ ಪಂಪ್‌ಗೆ ಬೀಗ ಹಾಕಿದ್ದರು.

 

ಇದರಿಂದ ಸಮಸ್ಯೆ ಬಿಗಡಾಯಿಸಿತ್ತು. ಶುಕ್ರವಾರ 50ಕ್ಕೂ ಹೆಚ್ಚು ಜನರು ಗ್ರಾ.ಪಂ.ಗೆ ತೆರಳಿ ಅಧ್ಯಕ್ಷ ಶೌಕತ್ ಅಲಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಪಂಚಾಯಿತಿ ನೀಡುವ ಅಲ್ಪಸಂಬಳದಲ್ಲಿ ಸಂಸಾರ ನಡೆಸವುದು ಕಷ್ಟ ಎಂದು ಹೇಳಿ ನೀರು ಬಿಡುವ  ಹಮೀದ್ ಎಂಬವರು ಸಭಾತ್ಯಾಗ ಮಾಡಿದರು.ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 2 ಲಕ್ಷ ಅನುದಾನದ ಅಂದಾಜು ಮೊತ್ತವನ್ನು ಪಂಚಾಯಿತಿಯ ಸೂಚನಾ ಫಲಕದಲ್ಲಿ ಹಾಕಲಾಗಿದೆ, ಆದರೆ ಈ ಹಣ ಪರಿಶಿಷ್ಟ ಜಾತಿಯ, ಪಂಗಡದ ಜನರಿಗೆ ಸೇರದೆ ಇತರರ ಪಾಲಾಗಿದೆ ಎಂದು ನಡುಪದವಿನ ಚಂದ್ರಹಾಸ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

 

ಜನರ ಪ್ರತಿಭಟನೆಯ ಹೊರತಾಗಿಯೂ ನೀರಿನ ಸಮಸ್ಯೆಗೆ ಪರಿಹಾರ ಕಾಣದೆ ಗ್ರಾಮಸ್ಥರು ಬರಿಗೈಯಲ್ಲಿ ವಾಪಸಾಗುವಂತಾಯಿತು. ಸಮಸ್ಯೆ ಮರುಕಳಿಸಿದರೆ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.