ಭಾನುವಾರ, ಆಗಸ್ಟ್ 25, 2019
24 °C

ನೀರಿಗಾಗಿ ಪ್ರತಿಭಟನೆ: ಉದ್ವಿಗ್ನ

Published:
Updated:

ಚಿಂತಾಮಣಿ: ಅನೇಕ ದಿನಗಳಿಂದ ಕುಡಿಯಲು ನೀರಿಲ್ಲ. ಹೊಸದಾಗಿ ಕೊರೆದಿರುವ ಕೊಳವೆ ಬಾವಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿ ನಗರದ ವೆಂಕಟಗಿರಿಕೋಟೆಯ ನೂರಾರು ನಿವಾಸಿಗಳು ಗುರುವಾರ ಒಂದು ಗಂಟೆ ಸಮಯ ರಸ್ತೆ ತಡೆ ನಡೆಸಿದರು.ವೆಂಕಟಗಿರಿಕೋಟೆ ಪ್ರದೇಶದಲ್ಲಿ ಹೊಸದಾಗಿ ಕೊರೆಸಿರುವ ಕೊಳವೆ ಬಾವಿ ನೀರಿಗಾಗಿ ಎರಡು ವಾರ್ಡ್‌ಗಳ ಜನತೆಯಲ್ಲಿನ ಭಿನ್ನಾಭಿಪ್ರಾಯದಿಂದ ನಿನ್ನೆಯಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಗುರುವಾರ ವಿಕೋಪಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ವೆಂಕಟಗಿರಿಕೋಟೆಯ ಒಂದನೇ ವಾರ್ಡ್‌ನಲ್ಲಿ ಅನೇಕ ದಿನಗಳಿಂದ ನೀರಿಲ್ಲದೆ ಸ್ಥಳೀಯರು ಹಲ ಬಾರಿ ಪ್ರತಿಭಟನೆ ನಡೆಸಿದ್ದರು.ಪೌರಾಯುಕ್ತರು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದರು. ಹಳೆಯ ಕೊಳವೆ ಬಾವಿಗಳು ಬತ್ತಿಹೋಗಿದ್ದು, ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗಲಿಲ್ಲ. ಪಕ್ಕದ ವಾರ್ಡ್‌ನಲ್ಲಿ ಈಚೆಗೆ ಕೊರೆದ ಬಾವಿಯಲ್ಲಿ ನೀರು ದೊರೆತಿದ್ದು ನಮಗೂ ಸ್ವಲ್ಪ ನೀರು ಕೊಡಿ ಎಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.ಮತ್ತೊಂದು ಗುಂಪು 1ನೇ ವಾರ್ಡ್‌ಗೆ ನೀರಿನ ಸಂಪರ್ಕ ನೀಡಿದರೆ ನಮಗೆ ನೀರಿನ ಕೊರತೆಯಾಗುತ್ತದೆ ಎಂದು ವಾದಿಸುತ್ತಾರೆ. 2 ಗುಂಪು ನಡುವೆ ಘರ್ಷಣೆ ವಾತಾವರಣ ಉಂಟಾಗಿತ್ತು. ಬಾಗೇಪಲ್ಲಿ ವೃತ್ತದಲ್ಲಿ ನೂರಾರು ಜನರು ಸೇರಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಎರಡು ಕಡೆಯ ಮುಖಂಡರು ನಗರಸಭೆಯಲ್ಲಿ ಸೇರಿ ಮಾತುಕತೆ ನಡೆಸುವಂತೆ ಮನವೊಲಿಸಿದರು.ನಗರಸಭೆಯಲ್ಲಿ ಸದಸ್ಯರಾದ ಶ್ರೀನಿವಾಸರೆಡ್ಡಿ, ದೇವರಾಜು, ಶಬ್ಬೀರ್ ಮತ್ತಿತರ ಮುಖಂಡರು, ಪೌರಾಯುಕ್ತರು, ಪೊಲೀಸ್ ಅಧಿಕಾರಿಗಳು ಸಭೆ ಸೇರಿ ರಾಜಿ ಸಂಧಾನ ನಡೆಸಿದರು. ಎರಡು ಕಡೆಯ ಜನರ ಮನವಿ ಪರಿಶೀಲಿಸಿ, ತುರ್ತು ಅಗತ್ಯವಿರುವ ಒಂದನೇ ವಾರ್ಡ್‌ಗೆ ಕೊಳವೆ ಬಾವಿಯಿಂದ ನೀರಿನ ಸಂಪರ್ಕ ನೀಡಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.

Post Comments (+)