ಗುರುವಾರ , ಅಕ್ಟೋಬರ್ 17, 2019
27 °C

ನೀರಿಗಾಗಿ ವಿನೂತನ ಪ್ರತಿಭಟನೆ

Published:
Updated:
ನೀರಿಗಾಗಿ ವಿನೂತನ ಪ್ರತಿಭಟನೆ

ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ  ನವಿಲು ತೀರ್ಥ ಜಲಾಶಯದಿಂದ ಹರಿಸ ಲಾಗುತ್ತಿರುವ  ನೀರನ್ನು ಫೆಬ್ರುವರಿ  10ಕ್ಕೆ ಬಂದ್ ಮಾಡ ಲಾಗುವುದೆಂದು ದೃಡ ನಿರ್ಧಾರ ವ್ಯಕ್ತಪಡಿಸಿರುವ ಸರಕಾರದ ಕ್ರಮ ಖಂಡಿಸಿ  ಪಟ್ಟಣದಲ್ಲಿ ಬುಧವಾರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ನೂರಾರು ರೈತರೊಡನೆ ಕೋಣದ ಮೇಲೆ ಹತ್ತಿ ವಿನೂತನ ಪ್ರತಿಭಟನೆ ನಡೆಸಿದರು.   ಪುರಸಭೆ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೋಣದೊಡನೆ ಸಂಚರಿಸುತ್ತಾ ಸರಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು. ಕೆಲವು ಕಾಲ ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆ ತಡೆಸಿ ಸರಕಾರದ ನಿರ್ಧಾರ ವಿರುದ್ದ ಕಿಡಿಕಾರಿದರು.  ಇದರಿಂದ ಕೆಲವು ಕಾಲ ಸಂಚಾರಕ್ಕೆ ವ್ಯತ್ಯಯುಂಟಾಯಿತು.     ನಂತರ  ತಹಸೀಲ್ದಾರ ಎ.ಎಚ್.ಬದಾಮಿಯವರಿಗೆ  ಮನವಿ  ಸಲ್ಲಿಸಿ ಮಾತನಾಡಿದ ವಿಜಯ ಕುಲಕರ್ಣಿ  ಫೆ.10ಕ್ಕೆ ನೀರು ಬಂದ್ ಮಾಡುವ  ಸರಕಾರದ ಕ್ರಮ ರೈತ ವಿರೋಧಿಯಾಗಿದ್ದು, ಇದರಿಂದ ಬೆಳೆಗಳು ಒಣಗುತ್ತವೆ.   ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.  ಕೇವಲ  ಹಿಂಗಾರಿ ಬೆಳೆ  ಮಾತ್ರ  ಈ ಬಾರಿ ರೈತರ ಪಾಲಿಗೆ ಇದೆ. ಆದರೆ  ಈಗ ನೀರು ಬಂದ್ ಮಾಡಿದರೆ  ಆ ಬೆಳೆಯೂ ಕೈಗೆ ಎಟುಕುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ರೈತರ  ಸಂಕಷ್ಟ  ಅರಿತು  ಫೆ.28ರವರೆಗೂ  ನೀರು ಹರಿಸಬೇಕು. ಇಲ್ಲವಾದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಾದ್ಯಂತ ಹೋರಾಟ  ನಡೆಸಲಾಗುವುದೆಂದು ಎಚ್ಚರಿಸಿದರು.  ಪ್ರತಿಭಟನೆಯಲ್ಲಿ  ಶ್ರೀಪಾದ ಆನೇಗುಂದಿ, ಬಸನಗೌಡ ಚಿಕ್ಕನಗೌಡ್ರ, ಮಹಾದೇವಪ್ಪ ಗುಡದೇರಿ, ಚಳ್ಳಪ್ಪ ನಾಯ್ಕರ, ಶಂಕ್ರಗೌಡ ಈರನಗೌಡ್ರ. ವೆಂಕಪ್ಪ ಕಿಲಿಕೈ, ಅಲ್ಲಿಸಾಬ ನದಾಫ್, ಶಿವಾನಂದ ಮೆಟಿ, ರುದ್ರಪ್ಪ ಗಾಣಿಗೇರ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Post Comments (+)