ಶುಕ್ರವಾರ, ನವೆಂಬರ್ 15, 2019
21 °C

ನೀರಿಗಾಗಿ ಹಾಹಾಕಾರ; ಟ್ಯಾಂಕರ್ ನೀರು ಪೂರೈಕೆ

Published:
Updated:

ಸಿಂದಗಿ: ಬೇಸಿಗೆಯಲ್ಲಿ ಇಲ್ಲದ ನೀರಿನ ಹಾಹಾಕಾರ ಮಳೆಗಾಲದಲ್ಲಿ ಪಟ್ಟಣದಲ್ಲಿ ಉಂಟಾಗಿದೆ. ಹೀಗಾಗಿ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ.ಹಿಂದೆಂದೂ ಬತ್ತದ ಕೆರೆ ಸಂಪೂರ್ಣ ಒಣಗಿ ಹೋಗಿ ನೀರು ಸರಬರಾಜು ಕಾರ್ಯ ಸ್ಥಗಿತಗೊಂಡಿದೆ. ಈ ಬಗ್ಗೆ ಪುರಸಭೆ ಡಂಗೂರ ಬಾರಿಸಿ ಇನ್ನು ಮುಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆ ನೀರು ಕೆರೆಗೆ ಸಂಗ್ರಹಗೊಳ್ಳುವವರೆಗೂ ಕೆರೆಯಿಂದ ನೀರು ಸರಬರಾಜು ಆಗುವುದಿಲ್ಲ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದೂ ಉಂಟು.ಇಲ್ಲಿ ವಾಸಿಸುವ ನಿವಾಸಿಗಳ ಸಂಖ್ಯೆ 50 ಸಾವಿರ ಸಮೀಪಿಸುತ್ತಲಿದ್ದು, ಇಷ್ಟೊಂದು ಜನತೆಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಅಸಾಧ್ಯದ ಮಾತಾದರೂ ತಾತ್ಪೂರ್ತಿಕವಾಗಿ ಅಗತ್ಯವಾಗಿದೆ.

ಈಗ ಎರಡು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರೂ ಈ ನೀರು ಯಾವುದಕ್ಕೂ ಸಾಲುವುದಿಲ್ಲ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಎನ್.ಆರ್. ಮಠ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿ ನಾಳೆಯಿಂದಲೇ 10 ಟ್ಯಾಂಕರ್‌ಗಳ ಮುಖಾಂತರ ಪಟ್ಟಣದಲ್ಲಿ ನೀರಿನ ಸರಬರಾಜು ಮಾಡಲಾಗುವುದು ಎಂದರು.ಅಲ್ಲದೇ ಸಿಂದಗಿಯ ವಿವಿಧ ಬಡಾವಣೆಗಳಲ್ಲಿ ನೀರಿಗಾಗಿ 22 ಕೊಳವೆಬಾವಿ ಕೊರೆಯಿಸಲು ಮಂಜೂರಾತಿ ಪಡೆಯಲಾಗಿದೆ. ಈಗಾಗಲೇ ಪ್ರವಾಸಿ ಮಂದಿರದ ಹಿಂದುಗಡೆ, ಕೋರ್ಟ್ ಹಿಂದುಗಡೆ ಹಾಗೂ ನಾಗೂರ ಬಡಾವಣೆಗಳಲ್ಲಿ ಮೂರು ಕೊಳವೆಬಾವಿ ಕೊರೆಯಿಸಲಾಗಿದೆ. ಒಟ್ಟು 11 ಕೊಳವೆಬಾವಿ ಕೊರೆಯಿಸಿದ್ದು ಇವುಗಳಲ್ಲಿ ಏಳು ಕೊಳವೆಬಾವಿಗಳಲ್ಲಿ ನೀರು ಬಂದಿವೆ. ಹೀಗೆ ಬೇರೆ, ಬೇರೆ ಮೂಲವನ್ನು ಅನುಸರಿಸಿ ವಾರಕ್ಕೊಮ್ಮೆಯಾದರೂ ನೀರು ಸರಬರಾಜು ಮಾಡಬೇಕೆಂಬ ಪ್ರಯತ್ನ ಮುಂದುವರಿದಿದೆ.ಆಲಮಟ್ಟಿ ಅಣೆಕಟ್ಟು ತುಂಬಿಕೊಂಡ ಮೇಲೆ ತನ್ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆಗೆ ನೀರು ಹರಿದು ಬಂದಾಗ ಸಿಂದಗಿಗೆ ಒಂದು ದಿನ ಬಿಟ್ಟು ಒಮ್ಮೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೂ ಏನನ್ನೂ ಮಾಡಲಾಗುವುದಿಲ್ಲ ಎಂದು ಮುಖ್ಯಾಧಿಕಾರಿ ಸ್ಪಷ್ಟ ವಿವರಣೆ ನೀಡಿದ್ದಾರೆ.ವರುಣನ ಅವಕೃಪೆಯಿಂದಾಗಿ ತಾಲ್ಲೂಕಿನಾದ್ಯಂತ ಮಳೆಯಿಲ್ಲದೇ ಕುಡಿಯುವ ನೀರಿಗಾಗಿ ಹಾಹಾಕಾರ, ಜಾನುವಾರುಗಳು ಮೇವಿಲ್ಲದೇ ಪರಿತಪಿಸುವ ದುಃಸ್ಥಿತಿ ನಿರ್ಮಾಣಗೊಂಡಿದೆ. ಸಿಂದಗಿಯಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ತುಂಬಾ ಬೇಡಿಕೆ ಬಂದಿದೆ. ಒಂದು ಟ್ಯಾಂಕರ್‌ಗೆ ಒಂದು ಸಾವಿರದಷ್ಟು ಹಣ ಪಡೆಯಲಾಗುತ್ತಿದೆ.

 

ಉಳ್ಳವರು ಹಣ ಪಡೆದು ನೀರು ಖರೀದಿಸಬಹುದು. ಆದರೆ ಬಡವರು, ಜನಸಾಮಾನ್ಯರು ಏನು ಮಾಡಬೇಕು...?

ಈ ಬಗ್ಗೆ ಮತಕ್ಷೇತ್ರದ ಶಾಸಕರು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಯುದ್ಧೋಪಾದಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇಂಥ ಪರಿಸ್ಥಿತಿಯಲ್ಲೂ ಶಾಸಕರು ಎಂದಿನಂತೆ ಇರುವುದು ಒಳ್ಳೆಯದಲ್ಲ ಎಂಬುದು ಸಾರ್ವಜನಿಕರ ಸಲಹೆಯಾಗಿದೆ.

 

ಪ್ರತಿಕ್ರಿಯಿಸಿ (+)