ನೀರಿಗಾಗಿ ಹಾಹಾಕಾರ: ಮಳೆಗಾಗಿ ಪ್ರಾರ್ಥನೆ

7

ನೀರಿಗಾಗಿ ಹಾಹಾಕಾರ: ಮಳೆಗಾಗಿ ಪ್ರಾರ್ಥನೆ

Published:
Updated:
ನೀರಿಗಾಗಿ ಹಾಹಾಕಾರ: ಮಳೆಗಾಗಿ ಪ್ರಾರ್ಥನೆ

ಇಂಡಿ: ಇಲ್ಲಿಯ ಜನರು ಕಳೆದ ಆರು ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ಟ್ಯಾಂಕರ್‌ಗಳಿಗೆ ನೀರು ಸಿಗುತ್ತಿಲ್ಲ.

`ಕೆಲವು ಕೊಳವೆ ಬಾವಿಗಳಲ್ಲಿ ನೀರಿದ್ದರೂ ನೀರೆತ್ತಲು ವಿದ್ಯುತ್ ಕಡಿತದಿಂದ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಗ್ರಾಮದ ಜನತೆಗೆ ನೀರು ಸರಬರಾಜು ಮಾಡಲು ವಿಳಂಬವಾಗುತ್ತಿದೆ~ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಬಿಸ್ಮಿಲ್ಲಾ ಚೌಧರಿ ಮತ್ತು ಉಪಾಧ್ಯಕ್ಷೆ ಮಹಾದೇವಿ ಶಿವಶರಣ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಳೆದ ಮೂರು ತಿಂಗಳಿಂದ ಮಾಜಿ ಶಾಸಕ ಎನ್.ಎಸ್. ಖೇಡ ಅವರ ತೋಟದ ಕೊಳವೆ ಬಾವಿಯಿಂದ ಟ್ಯಾಂಕರ್‌ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.ಆದರೆ ಇತ್ತೀಚೆಗೆ ಈ ಕೊಳವೆ  ಬಾವಿಯಲ್ಲಿಯೂ ನೀರು ಕಡಿಮೆಯಾಗಿದೆ. ಹೀಗಾಗಿ ಗ್ರಾಮದಿಂದ ಸುಮಾರು 3 ಕಿ.ಮೀ. ದೂರದ ಕೊಳವೆ ಬಾವಿಯಿಂದ ನೀರು ತರಲಾಗುತ್ತಿದೆ. ಇದರಿಂದ ಸುಮಾರು 3500 ಜನಸಂಖ್ಯೆ ಇರುವ ಸಾವಳಸಂಗ ಗ್ರಾಮದ ನಾಗರಿಕರಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಗ್ರಾಮಕ್ಕೆ ಇನ್ನೂ ಒಂದು ಟ್ಯಾಂಕರ್‌ಗೆ ಮಂಜೂರಾತಿ ನೀಡಬೇಕೆಂದು ತಹಶೀಲ್ದಾರ ಜಿ.ಎಲ್. ಮೇತ್ರಿ ಅವರಿಗೆ ಅಧ್ಯಕ್ಷೆ ಚೌಧರಿ ಮನವಿ ಮಾಡಿಕೊಂಡಿದ್ದಾರೆ.`ಹೊಲ್ದಾಗಿನ ಬಾವ್ಯಾಗ್ ನೀರ್ ಹೋಗ್ಯಾವಂತ ಮೆಟಿಗಿ ವಸ್ತಿ ಕಿತಗೊಂಡು ಊರಾಗ ಬಂದೇವಿ. ಆದರ ಊರಾಗಿನ ನೀರೂ ಹೋಗ್ಯಾವ. ಕುಡ್ಯಾಕ ನೀರಿಲ್ಲದಂಗಾಗ್ಯಾದ. ಸರ್ಕಾರದವರು ಟ್ಯಾಂಕರದಾಗ ನೀರ ತಂದ ಹಾಕತಾರ. ಆದರ ಅದು ಯಾವಾಗ್ ಬರ‌್ತದ ಅಂತ ಗೊತ್ತಿಲ್ಲ. ಅದು ಬರುವತನಕ ಕಾಯಬೇಕು.ಬಂದಮ್ಯಾಲ್ ಪಾಳಿ ಹಚ್ಚಬೇಕು. ಪಾಳ್ಯಾಗ ಸಿಕ್ಕಸ್ಟ ನೀರ ತರಬೇಕು. ಇದು ನಮ್ದು ಕೆಲಸಾನ ಆಗಿಬಿಟ್ಟಾದ~ ಎಂದು ಭುವನೇಶ್ವರಿ ಮೋರೆ, ಪದ್ಮಾವತಿ ಚವ್ಹಾಣ, ಕಸ್ತೂರಿ ಮೋರೆ, ರೋಷನ್‌ಬೀ ನದಾಫ, ಶೇಖವ್ವ ಬಡಿಗೇರ, ಮಾನಂದಾ ಬ್ಯಾಗೆಳ್ಳಿ, ಚಾಂದಬೀ ಚೌಧರಿ, ಲಲಿತಾ ಮೋರೆ ಅವರು ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿಯ ಮುಂದೆ ತಮ್ಮ ತೊಂದರೆಯನ್ನು ತೋಡಿಕೊಂಡರು.ಭೀಕರ ಬರ: `ಕೊಳೂರಗಿ ಗ್ರಾಮ ಪಂಚಾಯಿತಿಯಲ್ಲಿ ದೇಗಿನಾಳ ಮತ್ತು ಸಾವಳಸಂಗ ಸೇರಿವೆ. ಕೊಳೂರಗಿ ಮತ್ತು ದೇಗಿನಾಳಕ್ಕೆ ಕುಡಿಯುವ ನೀರಿನ ಸಮಸ್ಯೆಯುಂಟಾಗಿಲ್ಲ. ಆದರೆ ಸಾವಳಸಂಗ ಗ್ರಾಮಕ್ಕೆ ಕಳೆದ 5 ತಿಂಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಶಾಶ್ವತ ಯೋಜನೆಯ ಕೊಳವೆ ಬಾವಿ ಸಂಪೂರ್ಣ ಬತ್ತಿಹೋಗಿದೆ. ಗ್ರಾಮದಲ್ಲಿದ್ದ ಕೈಪಂಪು ಕೊಳವೆ ಬಾವಿಗಳು ಕೂಡಾ ಬತ್ತಿ ಹೋಗಿವೆ.ಕಾರಣ ಸರ್ಕಾರ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕ್ರಮ ಜರುಗಿಸಬೇಕು. ಆ ಕೆಲಸವಾಗದೇ ನಾವು ಬದುಕುವುದು ಕಷ್ಟವಾಗುತ್ತದೆ~ ಎಂದು ನಿಂಗನಗೌಡ ಬಿರಾದಾರ, ಡಿ.ಕೆ.ಖೇಡ, ಮಾರುತಿ ಮೋರೆ, ಕಾಂತು ಮೋರೆ, ಮಲ್ಲಪ್ಪ ಬ್ಯಾಗೆಳ್ಳಿ, ಮಹಾದೇವಿ ಹರಿಜನ, ಅಬ್ದುಲ್ ಚೌಧರಿ, ಬಿ.ಎನ್.ಮೋರೆ ಮುಂತಾದವರು ಬವಣೆ ತೋಡಿಕೊಂಡರು.ಮಳೆ ಬರುವಿಕೆಗಾಗಿ ದೇವರಿಗೆ ಹರಕೆ ಹೊತ್ತುಕೊಂಡಿದ್ದೇವೆ. ಈ ಭಾಗದಲ್ಲಿರುವ ಎಲ್ಲಾ ಗ್ರಾಮಗಳ ರೈತರು ದೇವತೆಗಳಿಗೆ ನೀರು ಹಾಕಿದ್ದಾರೆ. ಸೀಮೆಯ ದೇವತೆಗಳಿಗೆ ಜನ ಅಭಿಷೇಕ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಗ್ರಾಮದಲ್ಲಿ ಒಂದು ಹನಿ ಕೂಡಾ ಮಳೆ ಬಿದ್ದಿಲ್ಲ. ಇದರಿಂದ ರೈತರು ಆತಂಕ್ಕೊಳಗಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry