ನೀರಿಗಾಗಿ ಹೊಸ ಐಡ್ಯಾ ಮಾಡ್ಯಾರ!

7

ನೀರಿಗಾಗಿ ಹೊಸ ಐಡ್ಯಾ ಮಾಡ್ಯಾರ!

Published:
Updated:
ನೀರಿಗಾಗಿ ಹೊಸ ಐಡ್ಯಾ ಮಾಡ್ಯಾರ!

ಯರೇಬೂದಿಹಾಳ (ತಾ.ಕುಂದಗೋಳ): ಸತತ ಬರಗಾಲದಿಂದ ಕಂಗೆಟ್ಟಿರುವ ಯರೇಬೂದಿಹಾಳ ಗ್ರಾಮದ ಜನತೆ ಆವಾಗಲೊಮ್ಮೆ ಈವಾಗಲೊಮ್ಮೆ ಬರುವ ನೀರನ್ನು ತುಂಬಲು ಪಾಳಿ ಹಚ್ಚಲೇಬೇಕಲ್ಲವೇ? ಅದಕ್ಕೆಂದೇ ಇಲ್ಲಿನ ಗ್ರಾಮಸ್ಥರು ಹೊಸ ವಿಧಾನವೊಂದನ್ನು ಕಂಡು ಹಿಡಿದಿದ್ದಾರೆ. ಅದೇನೆಂದರೆ 20ಕ್ಕೂ ಅಧಿಕ ಕೊಡಗಳನ್ನು ಒಂದು ಸೀರೆಯಲ್ಲಿ ಕಟ್ಟಿ ಮುಂದಕ್ಕೆ ಸರಿಸುತ್ತಾ ಹೋಗುವುದು!ಯರೇಬೂದಿಹಾಳ ಗ್ರಾಮಕ್ಕೆ ಭೇಟಿ ನೀಡಿದರೆ ಇಂಥ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ.  ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆ ಸುರಿದರೂ ಕುಂದಗೋಳ ತಾಲ್ಲೂಕಿನಾದ್ಯಂತ ಇನ್ನೂ ಕೆರೆ ಕಟ್ಟೆಗಳು ತುಂಬಿಲ್ಲ. ಶಾಶ್ವತ ನೀರಾವರಿ ಯೋಜನೆಗಳೂ ಇಲ್ಲದ್ದರಿಂದ ಕೆಲ ವರ್ಷಗಳಿಂದ ನಿರಂತರವಾಗಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕವೇ ಜಿಲ್ಲಾಡಳಿತ ಕುಡಿಯುವ ನೀರನ್ನು ಪೂರೈಸುತ್ತಾ ಬಂದಿದೆ. ಈಗಲೂ ಈ ಕ್ರಮ ಜಾರಿಯಲ್ಲಿದೆ.ಬೆಳಿಗ್ಗೆ 10ಕ್ಕೆ ಕರೆಂಟ್ ಬಂದರೆ ಮಧ್ಯಾಹ್ನ 2ರವರೆಗೆ ಬಳಕೆಯ ನೀರು ತುಂಬುವುದು ಆರಂಭವಾಗುತ್ತದೆ. ಆದರೆ, ಹಾಗೆ ಬಂದ ಕರೆಂಟ್ ಯಾವಾಗ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲವಂತೆ.ಹೀಗೆ ವಿದ್ಯುತ್‌ನ ಕಣ್ಣಾಮುಚ್ಚಾಲೆ ಇರುವುದರಿಂದಲೇ ಗ್ರಾಮಸ್ಥರು ಹತ್ತಾರು ಕೊಡಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ನೀರು ತುಂಬಲು ಎರಡು ಅಥವಾ ನಾಲ್ಕು ಕೊಡಗಳನ್ನು ಪಾಳಿ ಹಚ್ಚಿದರೆ ಆ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಅದಕ್ಕೆಂದೇ ಉದ್ದನೆಯ ಹಳೆಯ ಸೀರೆಗೆ ಸುತ್ತಲೂ ಹೊಲಿಗೆ ಹಾಕಿಸಿ ಚೀಲದಂತೆ ಮಾಡುತ್ತಾರೆ. ಆ ಚೀಲದ ಬಾಯಿಯ ಮೂಲಕ ಹತ್ತಾರು ಕೊಡಗಳನ್ನು ತೂರಿಸಿ ಪಾಳಿಗೆ ಇಡುವುದು ಇಲ್ಲಿ ರೂಢಿಯಾದ ಸಂಪ್ರದಾಯ. ಇದು ಅನಿವಾರ್ಯವೂ ಆಗಿದೆ.ಇಂತಹ ವಿಚಿತ್ರ ಸನ್ನಿವೇಶದ ಬಗ್ಗೆ 22 ಖಾಲಿ ಕೊಡಗಳನ್ನು ಸೀರೆಯಲ್ಲಿ ತುಂಬಿದ್ದ ಯುವಕ ಮರ್ದಾನಸಾಬ್‌ನನ್ನು ವಿಚಾರಿಸಿದಾಗ, `ಸಮಯಕ್ಕೆ ಸರಿಯಾಗಿ ನೀರು ಬರುವುದಿಲ್ಲ. ಅದಕ್ಕೆಂದೇ ನಾಲ್ಕಾರು ದಿನಕ್ಕೆ ಆಗುವಷ್ಟು ನೀರು ತುಂಬಲು 20ರಿಂದ 24 ಕೊಡಗಳನ್ನು ಪಾಳಿಯಲ್ಲಿ ಹಚ್ತೀವಿ. ಮುಂದೆ ಪಾಳಿ ಇದ್ದವರ ಕೊಡಗಳು ತುಂಬುತ್ತಿದ್ದಂತೆ ನಮ್ಮ ಕೊಡಗಳನ್ನೂ ಸರಿಸಬೇಕಲ್ಲ. ನಾಲ್ಕಾರು ಕೊಡಗಳಾದರೆ ಹೇಗೋ ಮಾಡಬಹುದು. ಆದರೆ 20 ಕೊಡಗಳನ್ನು ಸರಿಸಲು ಸಾಕಷ್ಟು ಟೈಂ ಬೇಕಾಗತೈತಿ. ಅದಕ್ಕೆಂತಲೇ ಸೀರೆಗೆ ಹೊಲಿಗೆ ಹಾಕಿ ಅದರಲ್ಲಿ ಕೊಡಗಳನ್ನು ಸೇರಿಸುತ್ತೇವೆ. ಈ ಊರಲ್ಲಿ ಬಹುತೇಕರು ಹೀಗೆಯೇ ಮಾಡುತ್ತಾರೆ. ಇದರಿಂದ ಕೊಡಗಳೂ ಕಳ್ಳತನವಾಗುವುದಿಲ್ಲ' ಎಂಬ ತರ್ಕವನ್ನು ಮುಂದಿಟ್ಟ.`ನನ್ನ ಪಾಳಿ ಬಂದಂಗೆಲ್ಲ ನೀರು ತುಂಬುತ್ತಾ ತಂಗಿ ರಜಿಯಾಳ ಕೈಗೆ ಕೊಡ್ತೀನಿ. ಅವಳಿ ಮನೆಗೆ ಒಯ್ತಾಳ' ಎಂದೂ ಮರ್ದಾನಸಾಬ್ ಹೇಳುತ್ತಾನೆ.ಇದನ್ನೆಲ್ಲ ಗಮನಿಸುತ್ತಿದ್ದ ಮಹಿಳೆಯೊಬ್ಬರು, `ಸರ್ಕಾರದವರು ಕರೆಕ್ಟಾಗಿ ನೀರು ಕೊಟ್ಟರೆ ನಮಗೆ ಇದೆಲ್ಲ ಸಮಸ್ಯೆಯೇ ಬರೋದಿಲ್ಲ. ಆದರೆ ಕುಡಿಯೂ ನೀರು ಟ್ಯಾಂಕರ್‌ನ್ಯಾಗ ಬರಬೇಕು. ಅದೂ ನಾಲ್ಕು ದಿನಕ್ಕೊಮ್ಮೆ ಬರ‌್ತದ. ಬಳಕಿ ಮಾಡಾಕೂ ನೀರು ಬೇಕಲ್ರಿ. ಅದಕ್ಕಂತನ ಹೀಂಗ ಹತ್ತಾರು ಕೊಡಪಾನ ಸೀರೆ ಒಳಗ ಕಟ್ಟಿ ನೀರು ತುಂಬತೀವಿ' ಎಂದರು.ನೀರಿನ ಬವಣೆಯ ಬಗ್ಗೆ ಮಾಹಿತಿ ಪಡೆಯಲು ತಹಶೀಲ್ದಾರ್ ಎಚ್.ಎಂ.ಓಲೇಕಾರ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry