ಮಂಗಳವಾರ, ಮೇ 11, 2021
21 °C

ನೀರಿಗಾಗಿ 6.52 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಬರಗಾಲದ ಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ), ನಿತ್ಯ ಮೂರು ಗ್ರಾಮ ಪಂಚಾಯಿತಿಗಳಿಗೆ ತೆರಳಿ ಸಮಗ್ರ ವರದಿ ನೀಡುವಂತೆ ಆದೇಶಿಸಿದ್ದಾರೆ.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಯಾ ತಾಲ್ಲೂಕಿನ ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಒಳಗೊಂಡ ತಂಡ ನಿತ್ಯ ಆಯಾ ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.ಆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಸಮಸ್ಯೆ, ಇನ್ನಿತರ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಅಧ್ಯಯನ ಮಾಡಿ, ಸಮಗ್ರ ವರದಿ ತಯಾರಿಸಿ, ತಮಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಅಪ್ಪಣೆ ಇಲ್ಲದೇ ಮೇಲಾಧಿಕಾರಿಗಳ ಸಭೆಗೆ ಅಥವಾ ರಜೆಯ ಮೇಲೆ ತೆರಳದಂತೆ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.ನೀರಿಗಾಗಿ 6.52 ಕೋಟಿ: ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಸರ್ಕಾರದಿಂದ ಈಗಾಗಲೇ ರೂ. 6.52 ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ಹಣ ಜಿಲ್ಲೆಗೆ ಬಂದಿದೆ ಎಂದು ಸಚಿವ ರಾಜುಗೌಡ ತಿಳಿಸಿದರು.ಜಿಲ್ಲಾ ಪಂಚಾಯಿತಿಗೆ ರೂ.3.3 ಕೋಟಿ, ಜಿಲ್ಲಾಧಿಕಾರಿಗಳ ಬಳಿ ರೂ.3.22 ಕೋಟಿ ಸೇರಿದಂತೆ ಒಟ್ಟು ರೂ.6.52 ಕೋಟಿ ಹಣ ಲಭ್ಯವಾಗಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹಣಕಾಸಿನ ಯಾವುದೇ ತೊಂದರೆ ಇಲ್ಲ ಎಂದ ಅವರು, ಶಹಾಪುರ ತಾಲ್ಲೂಕಿಗೆ ರೂ.1.18 ಕೋಟಿ, ಸುರಪುರ ತಾಲ್ಲೂಕಿಗೆ ರೂ.1.24 ಕೋಟಿ, ಯಾದಗಿರಿ ತಾಲ್ಲೂಕಿಗೆ ರೂ. 80 ಲಕ್ಷ ಹಾಗೂ ಗುರುಮಠಕಲ್ ಕ್ಷೇತ್ರಕ್ಕೆ ರೂ.1 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.ಮುಖ್ಯಮಂತ್ರಿಗಳು ಹೇಳಿದಂತೆ ಪ್ರತಿ ತಾಲ್ಲೂಕಿಗೆ ರೂ.30 ಲಕ್ಷ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ರೂ. 2 ಕೋಟಿಗಿಂತ ಕಡಿವೆು ಹಣ ಉಳಿದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದ ಅವರು, ಜಿಲ್ಲೆಯ ಮೂವರು ಶಾಸಕರ ಜೊತೆ ಚರ್ಚಿಸಿದ್ದು, ಕುಡಿಯುವ ನೀರಿನ ತೊಂದರೆ ನಿವಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಜಿಲ್ಲೆಯ 100 ಗ್ರಾಮಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಇದ್ದು, ಈಗಾಗಲೇ 11 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಆರಂಭಿಸಲಾಗಿದೆ. ಇನ್ನುಳಿದ ಗ್ರಾಮಗಳಲ್ಲಿಯೂ ಶುದ್ಧ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುಖ್ಯಮಂತ್ರಿಗಳು ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.ಮೇವು ಸಂಗ್ರಹಣೆ: ಪ್ರತಿಯೊಂದು ಹೋಬಳಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿಯೊಂದು ಬ್ಯಾಂಕ್‌ನಲ್ಲಿ ಕನಿಷ್ಠ 20 ಟನ್ ಮೇವು ಸಂಗ್ರಹಣೆ ಮಾಡಲು ತಿಳಿಸಲಾಗಿದೆ. ಮೇವಿನ ಬಗ್ಗೆ ಅಧಿಕಾರಿಗಳು ಅಲಕ್ಷ್ಯ ಮಾಡುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಆದೇಶಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಇರುವ ಅಧಿಕಾರಿಗಳು ಇಲ್ಲಿನ ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಖಾರವಾಗಿ ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವಿಂದ್ರನಾಥ ನಾದ್ ಹಾಜರಿದ್ದರು.ಮೇ 2ರಂದು ಸರ್ವಪಕ್ಷ ನಿಯೋಗ ದೆಹಲಿಗೆ: ಬರದ ಸ್ಥಿತಿ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವನ್ನು ಮೇ 2ರಂದು ದೆಹಲಿಗೆ ಕೊಂಡೊಯ್ಯಲಾಗುವುದು ಎಂದು ಸಚಿವ ನರಸಿಂಹ ನಾಯಕ (ರಾಜೂಗೌಡ) ತಿಳಿಸಿದರು.ಇದೇ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಸಂವಿಧಾನದ 371 ನೇ ಕಲಂ ತಿದ್ದುಪಡಿ ಮಾಡುವಂತೆಯೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಇರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ, ಈ ಬಗ್ಗೆ ವಿವರಿಸಲಾಗುವುದು ಎಂದು ಹೇಳಿದರು.ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಲ್ಲಿ ಶಿವಸೇನೆಯ ತಕರಾರು ಮಾಡುತ್ತಿದೆ. ಇದರಿಂದಾಗಿ ನೀರು ಬಿಡುಗಡೆ ವಿಳಂಬವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹಣವನ್ನು ಪಾವತಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಸಂಸದ ಪ್ರಭಾಕರ ಕೋರೆಯವರೂ, ಕೇಂದ್ರ ಸಚಿವ ಶರದ ಪವಾರ ಜೊತೆಗೆ ಈ ಕುರಿತು ಸಮಾಲೋಚನೆ ನಡೆಸಿದ್ದು, ಇನ್ನೆರಡು ದಿನದಲ್ಲಿ ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.