ನೀರಿಗೆ ಅವಳಿ ಪುರಸಭೆ ಸದಸ್ಯರ ಒತ್ತಾಯ

7

ನೀರಿಗೆ ಅವಳಿ ಪುರಸಭೆ ಸದಸ್ಯರ ಒತ್ತಾಯ

Published:
Updated:

ಕಡೂರು: ಬರಗಾಲಕ್ಕೆ ತುತ್ತಾಗಿರುವ ಕಡೂರು-ಬೀರೂರು ಅವಳಿ ಪುರಸಭೆಗಳ ವ್ಯಾಪ್ಯಿಯ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುತ್ತಿರುವ ಪುರಸಭೆ ಆಡಳಿತ ಮಂಡಳಿ ಸದಸ್ಯರು ಮದಗದಕೆರೆ ಹಾಗೂ ಅಯ್ಯನಕೆರೆಯ ನೀರನ್ನು ಬಿಟ್ಟುಕೊಡಬೇಕೆಂದು ಒಕ್ಕೊರಲಿನಲ್ಲಿ ಶಾಸಕರಿಗೆ ಒತ್ತಾಯ ಮಾಡಿದರು.ಅವಳಿ ಪುರಸಭೆಗಳ ಅಧ್ಯಕ್ಷರು, ಸದಸ್ಯರು, ಅಡಿಕೆಬೆಳೆಗಾರ ಸಂಘದ ಅಧ್ಯಕ್ಷರು, ಸದಸ್ಯರು ಮುಖ್ಯಾಧಿಕಾರಿಗಳು ಶಾಸಕರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿದರು.ಬೀರೂರು-ಕಡೂರು ಪಟ್ಟಣಕ್ಕೆ ಸಮೀಪವಿರುವ ಗಾಳಿಹಳ್ಳಿ, ದೊಡ್ಡಕೆರೆ, ಚಿಕ್ಕಂಗಳ ಕೆರೆಗಳಿಗೆ ಮದಗದಕೆರೆಯಿಂದ ನೀರು ಹಾಯಿಸಿದರೆ ಮುಂದಿನ ಮುಂಗಾರಿನ ತನಕ ಜಾನುವಾರುಗಳಿಗೆ ಹಾಗೂ ಎರಡು ಪಟ್ಟಣದಲ್ಲಿ ವಾಸಿಸುತ್ತಿರುವ ಅಂದಾಜು 80 ಸಾವಿರ ಜನರಿಗೆ ನೀರಿನ ಆಶ್ರಯವಾಗುತ್ತದೆ ಎಂದು ಲಕ್ಷ್ಮಣ್ ಸಲಹೆ ನೀಡಿದರು.`ಸಾಧಕ ಬಾಧಕಗಳನ್ನು ಅರಿತು ಪುರಸಭೆಗಳಿಗೆ ನೀರು ತರಲು ನಮ್ಮದೇನು ಅಭ್ಯಂತರವಿಲ್ಲ' ಎಂದು ಅಡಿಕೆ ಬೆಳೆಗಾರರ ಸಂಘದ ಸದಸ್ಯರಾದ ಶಿವಶಂಕರ್, ಕುಮಾರಸ್ವಾಮಿ, ಚಂದ್ರಶೇಖರ್, ಸೋಮಶೇಖರ್ ಸಲಹೆ ನೀಡಿದರು.   ಸದಸ್ಯ ಭಂಡಾರಿ ಶ್ರೀನಿವಾಸ್ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳನ್ನು ಸಂಪರ್ಕಿಸಿ ತಾಂತ್ರಿಕ ಸಲಹೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.ಮದಗದಕೆರೆಯಲ್ಲಿ 60 ಅಡಿ ನೀರು ಇದ್ದು, ಬೀರೂರು-ಕಡೂರು ಪಟ್ಟಣಗಳ ಸುತ್ತಮುತ್ತಲಿನ 7 ಕೆರೆಗಳಿಗೆ  ಆ ನೀರು ತರುವುದರಿಂದ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗುವುದು ಎಂದು ಅನೇಕ ಸದಸ್ಯರು ಸಲಹೆ ನೀಡಿದರು.ಅಯ್ಯನಕೆರೆಯಿಂದ ಪಟ್ಟಣಗೆರೆಯ ಮೂಲಕ ವೇದಾನದಿಗೆ ನೀರು ಬಿಟ್ಟರೆ ಪಂಪ್ ಹೌಸ್ ಸಮೀಪವಿರುವ ಒಡ್ಡು  ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ಸದಸ್ಯ ರೇಣುಕಾರಾಧ್ಯ ಸಭೆಯ ಗಮನ ಸೆಳೆದರು.ಶಾಸಕ ಡಾ.ವೈ.ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಡಿಕೆ ಬೆಳೆಗಾರರು ಮತ್ತು ಪುರಸಭೆ ಸದಸ್ಯರ ಸಲಹೆ, ಸೂಚನೆಗಳನ್ನು ಪಡೆದು ಬುಧವಾರ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ, ತಹಶೀಲ್ದಾರ್, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಬೀರೂರು ಪುರಸಭೆ ಅಧ್ಯಕ್ಷೆ ಸಾಕಮ್ಮ, ಕಡೂರು ಅಧ್ಯಕ್ಷೆ ಭಾರತಿ ಮಹಾಲಿಂಗ, ಸದಸ್ಯರಾದ ದಯಾನಂದ, ರುದ್ರಪ್ಪ, ಪ್ರಕಾಶ್, ಬಶೀರ್ ಸಾಬ್, ಕೆ.ಜಿ.ಲೋಕೇಶ್, ಲಕ್ಕಣ್ಣ, ಸರಸ್ವತಿ ಕೃಷ್ಣಮೂರ್ತಿ, ನಾಗರಾಜ, ರಂಗನಾಥ, ಅಡಿಕೆ ಬೆಳೆಗಾರ ಸಂಘದ ಅರೆಕಲ್ ಪ್ರಕಾಶ್, ಕಾಂತರಾಜು ಮುಖ್ಯಾಧಿಕಾರಿ ಓಂಕಾರ ಮೂರ್ತಿ, ಕುಮಾರನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry