ನೀರಿಗೆ ಆಗ್ರಹಿಸಿ ತಾ.ಪಂ. ಕಚೇರಿಗೆ ಮುತ್ತಿಗೆ

ಶುಕ್ರವಾರ, ಮೇ 24, 2019
22 °C

ನೀರಿಗೆ ಆಗ್ರಹಿಸಿ ತಾ.ಪಂ. ಕಚೇರಿಗೆ ಮುತ್ತಿಗೆ

Published:
Updated:

ಶ್ರೀರಂಗಪಟ್ಟಣ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲ್ಲೂಕಿನ ಶ್ರೀರಾಂಪುರ ಗ್ರಾಮದ ಜನರು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.  ಟಿ.ಎಂ.ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಘೋಷಣೆ ಕೂಗಿದರು. ಶ್ರೀರಾಂಪುರದಲ್ಲಿ ಕಳೆದ ಐದು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದೇವೆ. ಜಲ್ಲಿ ಕ್ರಷರ್‌ಗಳು ಹಾಗೂ ತೋಟಗಳ ಮಾಲೀಕರನ್ನು ಕಾಡಿ ಬೇಡಿ ನೀರು ತರುತ್ತಿದ್ದೇವೆ. ಬಿಂದಿಗೆ ನೀರಿಗೂ ಮೈಲು ದೂರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಸ್ನಾನ ಹಾಗೂ ಬಟ್ಟೆ ತೊಳೆಯಲು ಕೂಡ ನೀರಿಲ್ಲದೆ ಬವಣೆ ಪಡುತ್ತಿದ್ದೇವೆ. ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮದ ಮೂರ್ತಿ, ಮುರುಗೇಶ್, ತಂಗರಾಜು ಇತರರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್ ಎದುರು ಸಮಸ್ಯೆ ತೋಡಿಕೊಂಡರು.  ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕುಡಿಯುವ ನೀರು ಪೂರೈಸಲು ಸ್ಥಳೀಯ ಗ್ರಾಮ ಪಂಚಾಯಿತಿ ವಿಫಲವಾಗಿದೆ. ನೀರಿನ ಸಮಸ್ಯೆ ಕುರಿತು ಮನವಿ ಸಲ್ಲಿಸಿದರೂ ನೀರ ಪೂರೈಸಲು ಆಸಕ್ತಿ ವಹಿಸದ ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಶ್ರೀರಾಂಪುರಕ್ಕೆ ಶುಕ್ರವಾರ ಸಂಜೆಯಿಂದಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ  ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು. ಚಲುವರಾಜು, ಸುಬ್ರಹ್ಮಣಿ, ಸರೋಜಮ್ಮ ಇತರರು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry