ಶುಕ್ರವಾರ, ನವೆಂಬರ್ 22, 2019
22 °C

ನೀರಿಗೆ ಜನ, ಜಾನುವಾರುಗಳ ಹಪಾಹಪಿ...

Published:
Updated:

ಶಿರಾಳಕೊಪ್ಪ: ರಾಜಕೀಯ ನಾಯಕರಿಗೆ ಜೈಕಾರ, ಜನಪ್ರತಿನಿಧಿಗಳಿಗೆ ಚುನಾವಣೆಯ ಬಗ್ಗೆ ಮಮಕಾರ, ಜನಸಾಮಾನ್ಯರಿಗೆ ಮಾತ್ರ ಕುಡಿಯುವ ನೀರಿನ ತತ್ವಾರ. -ಇದು ಶಿರಾಳಕೊಪ್ಪ ಪಟ್ಟಣ ಸೇರಿದಂತೆ ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಬಹುತೇಕ ಗ್ರಾಮಗಳ ಪರಿಸ್ಥಿತಿ.ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆ ಕಾವು ತಾರಕಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ತಂತ್ರ-ಪ್ರತಿತಂತ್ರ ಹೂಡುವುದರಲ್ಲಿಯೇ ಮಗ್ನರಾಗಿದ್ದಾರೆ. ಆದರೆ, ಇತ್ತ ಸಾಮಾನ್ಯ ಜನರು ಹಲವಾರು ತೊಂದರೆ ಅನುಭವಿಸುತ್ತಿದ್ದು, ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಮಳ್ಳೂರು, ಕಡೇನಂದಿಹಳ್ಳಿ, ತಡಸನಹಳ್ಳಿ, ಅಗ್ರಹಾರ ಮುಚಡಿ, ಮಂಚಿಕೊಪ್ಪ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯ ಉಲ್ಬಣಗೊಂಡಿದೆ. ಅಂತರ್ಜಲ ಸಹ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ವಿದ್ಯುತ್‌ನ ಅಭಾವದಿಂದ ಕಂಗಾಲಾಗಿದ್ದ ರೈತರು ಈಗ ಕುಡಿಯುವ ನೀರಿಗೂ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.ಕೆರೆ-ಕಟ್ಟೆಗಳು ಬರಿದಾಗಿದ್ದು ದನ, ಕರುಗಳಿಗು ನೀರುಣಿಸಲು ರೈತರು ಹಪಹಪಿಸುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ಕೂಡ ನೀರು ಬಾರದೆ ಅಂತರ್ಜಲ ಪಾತಳಕ್ಕೆ ಇಳಿದಿದ್ದು, ಜನರು ಆತಂಕಕ್ಕೆ ಇಡಾಗಿದ್ದಾರೆ. ಈ ಬಗ್ಗೆ ಮುತುವರ್ಜಿ ವಹಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಚುನಾವಣೆಯ ನೆಪವೊಡಿ ಈ ವಿಷಯವನ್ನೇ ಬಂಡವಾಳ ಮಾಡಿಕೊಂಡು ಪ್ರಚಾರ ಸಹ ಮಾಡುತ್ತಿದ್ದಾರೆ.ಆದರೆ ಅಧಿಕಾರಿಗಳು ಮಾತ್ರ ಅಸಹಾಯಕರಾಗಿದ್ದು, ಚುನಾವಣಾ ನೀತಿಸಂಹಿತೆ ಒಂದೆಡೆ ಆದರೆ, ದ್ವಿಪಾತ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿ ಅಧಿಕಾರಿ ವರ್ಗ ಸಹ ಒತ್ತಡ ಅನುಭವಿಸುತ್ತಿದ್ದಾರೆ.ಈ ಬಗ್ಗೆ, 'ಪ್ರಜಾವಾಣಿ' ಜತೆಗೆ ಮಾತನಾಡಿದ ಪಟ್ಟಣ ಪಂಚಾಯ್ತಿ ಸದಸ್ಯ ಮಂಜುನಾಯ್ಕ, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದಲ್ಲಿ ದೂರದೃಷ್ಟಿಯ ಕೊರತೆ ಇದ್ದಾಗ ಈ ರೀತಿಯ ಸಮಸ್ಯೆಗಳು ಉಲ್ಭಣ ವಾಗುತ್ತದೆ. ಲಭ್ಯವಿರುವ ನೀರಿನಲ್ಲಿಯೇ, ವಿದ್ಯುತ್‌ನ ಅಭಾವದ  ನಡುವೆಯು ಸಿಬ್ಬಂದಿ ಕುಡಿಯವ ನೀರು ಒದಗಿಸುತ್ತಿದ್ದಾರೆ. ಆದರೂ ಸಹ ಜನಸಾಮಾನ್ಯರ ಅವಶ್ಯಕತೆ ಪೂರೈಸಲು ವಿಫಲವಾಗಿದ್ದು ಈ ಬಗ್ಗೆ  ಉನ್ನತ ಅಧಿಕಾರಿಗಳು ಒತ್ತುಕೊಟ್ಟು ಕುಡಿಯವ ನೀರಿನ ಬವಣೆಯನ್ನು ನಿವಾರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ನೇಕಾರ ಸಮಾಜದ ಅಧ್ಯಕ್ಷ ರುದ್ರಮುನಿ ಈ ಬಗ್ಗೆ ಮಾತನಾಡಿ, ಯುಗಾದಿ ಹಬ್ಬ ಇದ್ದರೂ ಸಹ ನಾಲ್ಕು ದಿನದಿಂದ ನೀರು ಸರಬರಾಜು ನಿಲ್ಲಿಸಲಾಗಿದ್ದು, ನೆಹರೂ ಕಾಲೊನಿ ನೂರಾರು ಮಹಿಳೆಯರು ಯುಗಾದಿ ಹಬ್ಬ ಆಚರಣೆ ಮಾಡುವ ಬದಲು ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಟ್ಯಾಂಕರ್ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಕೂಡಾ ಸರದಿಯ ಮೇಲೆ 2 ಕೊಡ ಮಾತ್ರ.ಈ ಬಗ್ಗೆ ವಾರ್ಡ್‌ನ ಸದಸ್ಯರು ಗಮನ ಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇಲ್ಲದೇ ಹೋದರೆ ಖಾಲಿ ಕೊಡಗಳ ಸಹಿತ ಪಟ್ಟಣ ಪಂಚಾಯ್ತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಪ್ರತಿಕ್ರಿಯಿಸಿ (+)